

| ಪ್ರಭು ಹಂಪಾಪಟ್ಟಣ ಹೊಸಪೇಟೆ (ವಿದ್ಯಾರಣ್ಯ ವೇದಿಕೆ)
ಹೋರಾಟಗಾರರ ದಶಕಗಳ ಪರಿಶ್ರಮ, ಮಠಾಧೀಶರ ಆಶೀರ್ವಾದ, ಪ್ರಮುಖವಾಗಿ ರಾಜಕೀಯವನ್ನು ಪಣಕ್ಕಿಟ್ಟು ಹೋರಾಡಿದ ಸಚಿವ ಆನಂದ ಸಿಂಗ್ ಸಾರ್ಥಕ ಶ್ರಮದ ಫಲವಾಗಿ ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರಕ್ಕೆ ಶನಿವಾರ ಅಧಿಕೃತ ಚಾಲನೆ ದೊರೆತಿದೆ. ಜಿಲ್ಲೆಯ ಕೊಡುಗೆಯಾಗಿ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನೂತನ ಜಿಲ್ಲೆಗೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರು, ಸಂಸದರು, ಮಠಾಧೀಶರು, ಲಕ್ಷಾಂತರ ಜನರು ಈ ಸ್ಮರಣೀಯ ದಿನಕ್ಕೆ ಸಾಕ್ಷಿಯಾದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಸವರಾಜ ಬೊಮ್ಮಾಯಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ವಿಜಯನಗರ ವೈಭವ ಮತ್ತೊಮ್ಮೆ ಸ್ಥಾಪನೆಯಾಗಿದೆ. ನೂತನ ಜಿಲ್ಲೆಯ 6 ತಾಲೂಕುಗಳ ಸರ್ವತೋಮುಖ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದೇನೆ. ಕೇಂದ್ರ-ರಾಜ್ಯ ಸರ್ಕಾರದ ವಿಶೇಷ ಯೋಜನೆಯಡಿ 643 ಕೋಟಿ ರೂ. ವೆಚ್ಚದಲ್ಲಿ ಐಕಾನಿಕ್ ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶವಿದೆ. ಪ್ರತಿ ಗ್ರಾಪಂಗಳಿಂದ ಸೇವೆ ನೀಡಲು ನೂತನ ಯೊಜನೆಯೊಂದನ್ನು ಹಾಕಿಕೊಳ್ಳಲಾಗಿದೆ ಎಂದರು.
ವಿಜಯನಗರ ಸಾಮ್ರಾಜ್ಯ ಒಂದೇ ದಿನ ಕಟ್ಟಿಲ್ಲ. ವಿದ್ಯಾರಣ್ಯರು, ಹಕ್ಕಬುಕ್ಕರ ಶ್ರಮದಿಂದ ಕಟ್ಟಲಾಗಿದೆ. ಹಲವಾರು ವರ್ಷಗಳ ಕಾಲ ಸುಲ್ತಾನರ ವಿರುದ್ಧದ ಹೋರಾಟದ ಫಲವಾಗಿ ದೇಶದ ದಕ್ಷಿಣ ಉತ್ತರಾಯಣ ಪ್ರದೇಶದಲ್ಲಿ ವಿಜಯನಗರ ಸ್ಥಾಪನೆಯಾಗಿದೆ. ವಿದ್ಯಾರಣ್ಯರ ಆಶೀರ್ವಾದದಿಂದ ವಿಜಯನಗರ ಸಾಮ್ರಾಜ್ಯ ಹೇಗೆ ಉದಯವಾಯಿತೋ ಅದೇರೀತಿ ಯಡಿಯೂರಪ್ಪನವರ ಕೃಪಾಶೀರ್ವಾದದಿಂದ ವಿಜಯನಗರ ಜಿಲ್ಲೆ ಉದಯವಾಗಿದೆ ಎಂದು ಬೊಮ್ಮಾಯಿ ಬಣ್ಣಿಸಿದರು. ಸಚಿವರಾದ ಆನಂದ ಸಿಂಗ್, ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಡಾ.ಅಶ್ವತ್ಥನಾರಾಯಣ, ಸಿ.ಸಿ.ಪಾಟೀಲ್, ವಿ.ಸುನೀಲ್ಕುಮಾರ್, ಎನ್.ಮುನಿರತ್ನ, ಗೋಪಾಲಯ್ಯ, ಬೈರತಿ ಬಸವರಾಜ, ಸಂಸದರಾದ ವೈ.ದೇವೇಂದ್ರಪ್ಪ, ಜಿ.ಎಂ.ಸಿದ್ದೇಶ್ವರ, ಕರಡಿ ಸಂಗಣ್ಣ, ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ಪಿ.ಟಿ.ಪರಮೇಶ್ವರ ನಾಯ್ಕ, ಎಂ.ಎಸ್.ಸೋಮಲಿಂಗಪ್ಪ, ಪರಣ್ಣ ಮುನವಳ್ಳಿ, ರಾಜುಗೌಡ, ಎಂಎಲ್ಸಿಗಳಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಶಶೀಲ್ ನಮೋಶಿ, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನೂರಾಧಾ ಇದ್ದರು.
ವಿಜಯನಗರ ಜಿಲ್ಲೆ ರಚನೆಯಾಗಿರುವ ಈ ದಿನವನ್ನು ಇತಿಹಾಸದ ಪುಟಗಳಲ್ಲಿ ದಾಖಲಿಸಿಡುವ ದಿನವಾಗಿದೆ. ಇದಕ್ಕೆ ಕಾರಣರಾದ ಯಡಿಯೂರಪ್ಪಗೆ ಚಿರಋಣಿ.
| ಆನಂದ ಸಿಂಗ್ ಜಿಲ್ಲಾ ಉಸ್ತುವಾರಿ ಸಚಿವ, ಬಳ್ಳಾರಿ
ಜನವೋ ಜನ..: ಜಿಲ್ಲಾ ಉದ್ಘಾಟನೆಗಾಗಿ ಹೊಸಪೇಟೆ ಜಿಲ್ಲಾ ಕ್ರೀಡಾಂಗಣದಲ್ಲಿ ನಿರ್ವಿುಸಿದ್ದ ವಿದ್ಯಾರಣ್ಯ ಭವ್ಯ ವೇದಿಕೆಯ ಹಕ್ಕ ಬುಕ್ಕರ ದ್ವಾರದ ಎದುರು ಪ್ರತಿಷ್ಠಾಪಿಸಿರುವ ಕನ್ನಡಾಂಬೆಯ ಪ್ರತಿಮೆ ಎದುರು ಜನರು ಸೆಲ್ಪಿಗೆ ಮುಗಿಬಿದ್ದಿದ್ದರು. ಬೃಹತ್ ವೇದಿಕೆ ಮುಂಭಾಗ ಜನಜಾತ್ರೆಯೇ ಸೇರಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಸಣ್ಣ ಮಕ್ಕಳಿಂದ ವಯೋವೃದ್ಧರವರೆಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಬಿಎಸ್ವೈ ಮತ್ತು ಬಸವರಾಜ ಬೊಮ್ಮಾಯಿ ಮತ್ತು ನಾನಾ ಸಚಿವರಿಗೆ ವೇದಿಕೆವರೆಗೂ ಭರ್ಜರಿ ಸ್ವಾಗತ ಕೋರಲಾಯಿತು. ಇಡೀ ಹೊಸಪೇಟೆ ನಗರವನ್ನೇ ತಳಿರು-ತೋರಣಗಳಿಂದ ಸಿಂಪಡಿಸಲಾಗಿತ್ತು. ಇದೇ ಸಂದರ್ಭ 464 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಸಿಎಂ ಚಾಲನೆ ನೀಡಿದರು.
ವಿಜಯನಗರ ಮತ್ತು ಬಳ್ಳಾರಿ ಜನರ ಪಾಲಿಗೆ ಸುವರ್ಣಾಕ್ಷರದಲ್ಲಿ ಬರೆದಿಡಬೇಕಿರುವ ದಿನವಿದು. ವಿಜಯನಗರ ಸಾಮ್ರಾಜ್ಯ ಮೆರೆದ ರೀತಿಯಲ್ಲಿ ನೂತನ ಜಿಲ್ಲೆ ಅಭಿವೃದ್ಧಿ ಹೊಂದಲಿ, ಬಳ್ಳಾರಿ ಮತ್ತು ವಿಜಯನಗರ ಭೌಗೋಳಿಕವಾಗಿ ಬೇರೆಯಾಗಿರಬಹುದು. ಆದರೆ, ದೇಹ ಎರಡಾದರೂ ಆತ್ಮ ಮಾತ್ರ ಒಂದೇ ಎಂಬಂತೆ ಅಣ್ಣ- ತಮ್ಮಂದಿರಂತೆ ಇರಲಿವೆ.
| ಬಿ.ಶ್ರೀರಾಮುಲು ಸಚಿವ ವಿಜಯನಗರ ಅಜರಾಮರ
ನೂತನ ಜಿಲ್ಲೆ ರಚನೆಗಾಗಿ ಆನಂದ ಸಿಂಗ್ ತನ್ನ ರಾಜಕೀಯ ಬದುಕನ್ನೇ ಪಣಕ್ಕಿಟ್ಟಿದ್ದರು. ಕೊನೆಗೂ ಈ ಭಾಗದ ಜನರೊಂದಿಗೆ ಹೋರಾಡಿದ ಆನಂದಸಿಂಗ್ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಆಡಳಿತ ಹಿತದೃಷ್ಟಿಯಿಂದ ಜಿಲ್ಲೆ ರಚನೆ ಮಾಡಲಾಗಿದೆ. ಪಶ್ಚಿಮ ತಾಲೂಕು ಸೇರಿಸಿ ಜಿಲ್ಲೆ ರಚನೆಗೊಂಡಿದ್ದು, ವಿಜಯನಗರ ಪದ ದೇಶದ ಇತಿಹಾಸದಲ್ಲಿ ಅಜರಾಮರವಾಗಿರಲಿದೆ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಮಿಂಚಿದ ಆನಂದಸಿಂಗ್: ನೂತನ ಜಿಲ್ಲೆಗೆ ಕಾರಣರಾದ ಸಚಿವ ಆನಂದಸಿಂಗ್ ಇಡೀ ವೇದಿಕೆಯ ಕೇಂದ್ರಬಿಂದುವಾಗಿದ್ದರು. ಇವರನ್ನು ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಬಿ.ಶ್ರೀರಾಮುಲು ಮನಸಾರೆ ಕೊಂಡಾಡಿದರು. ಸಿಂಗ್ ಹಠತೊಟ್ಟರೆ ಯಾವುದೇ ಕೆಲಸವನ್ನು ಆಗದೆ ಬಿಡುವುದಿಲ್ಲ. ಇದಕ್ಕೆ ವಿಜಯನಗರ ಜಿಲ್ಲೆಯನ್ನಾಗಿಸಿದ್ದೇ ಸಾಕ್ಷಿ ಎಂದು ಧುರೀಣರು ಮೆಚ್ಚುಗೆ ವ್ಯಕ್ತಪಡಿಸಿದರು. ಅಗಲಿದ ತನ್ನ ತಂದೆ ಯನ್ನು ಭಾಷಣದಲ್ಲಿ ನೆನೆದ ಆನಂದ ಸಿಂಗ್, ಕೆಲ ಕ್ಷಣಗಳ ಕಾಲ ಭಾವುಕರಾದರು. ಜಿಲ್ಲೆ ರಚನೆಗೆ ವಿರೋಧಿಸಿದ್ದ ರೆಡ್ಡಿ ಬ್ರದರ್ಸ್ ಕಾರ್ಯಕ್ರಮದಿಂದ ದೂರವುಳಿದರು. ಬಳ್ಳಾರಿಗೆ ತೆರಳಲು ಕೋರ್ಟ್ ಅನುಮತಿ ನೀಡಿದ್ದರೂ ಜನಾರ್ದನ ರೆಡ್ಡಿ ಕೂಡ ಬರಲಿಲ್ಲ.