

ನಾಗಮಂಗಲ: ಆದಿಚುಂಚನಗಿರಿ ಮಠದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಒಕ್ಕಲಿಗ ವಧು-ವರರ ಸಮಾವೇಶದ ಬಗ್ಗೆಯೇ ಎಲ್ಲೆಡೆ ಚರ್ಚೆಯಾಗುತ್ತಿದೆ. ಬಾಳಸಂಗಾತಿ ಹುಡುಕಾಟಕ್ಕೆ ಸರತಿ ಸಾಲಿನಲ್ಲಿ ನಿಂತು ತಾಸುಗಟ್ಟಲೇ ಕಾದ 13 ಸಾವಿರ ಯುವಕರು ನಿರಾಸೆಯಿಂದ ಮನೆಗೆ ಹಿಂತಿರುಗಿದ್ದಾರೆ. ಇದಕ್ಕೆ ಕಾರಣವೂ ಇದೆ. ವಧು-ವರರ ಸಮಾವೇಶದಕ್ಕೆ ಆಗಮಿಸಿದ ವಧುಗಳ ಸಂಖ್ಯೆ ಕೇವಲ 250! ಆದರೆ ವರರ ಸಂಖ್ಯೆ 13 ಸಾವಿರಕ್ಕೂ ಹೆಚ್ಚು!
ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಸಮಾಜ ಸಂಪರ್ಕ ವೇದಿಕೆ ಮತ್ತು ರಾಜ್ಯ ಚುಂಚಾದ್ರಿ ಮಹಿಳಾ ಒಕ್ಕೂಟದಿಂದ ಆಯೋಜಿಸಿದ್ದ ವಧು-ವರರ ಸಮಾವೇಶಕ್ಕೆ ನಿರೀಕ್ಷೆಗೂ ಮೀರಿ ಜನರು ಆಗಮಿಸಿದ್ದರು. ಪರಿಣಾಮ, ಮಠದ ಆವರಣ ಜಾತ್ರೆಯಂತಾಗಿತ್ತು. ಮಾತ್ರವಲ್ಲದೆ, ಕಾಲಿಡಲೂ ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿತ್ತು. ಈ ನಡುವೆ, ವರರ ಸಂಖ್ಯೆಯನ್ನು ಕೇಳಿದ ವಧುವಿನ ಕಡೆಯವರು ಮೌನವಾದರೆ, ಇತ್ತ ವರನ ಕಡೆಯವರು ಬರಿಗೈಯಲ್ಲಿ ವಾಪಸ್ಸಾಗುವಂತಾಯಿತು.
ಮದುವೆಯಾಗುವ ಕನಸು ಹೊತ್ತು ಬಂದವರ ಪೈಕಿ ಬಹುತೇಕರು ಗ್ರಾಮೀಣ ಭಾಗದವರೇ ಆಗಿದ್ದರು. ಬಾಳಸಂಗಾತಿ ಹುಡುಕಾಟಕ್ಕೆ ಸರತಿ ಸಾಲಿನಲ್ಲಿ ನಿಂತು ಕಾದವರಿಗೆ ನಿರಾಸೆಯಾಯಿತು. ಈ ಸಮಾವೇಶದ ವಿಡಿಯೋಗಳನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಪರಿಣಾಮ, ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೈರಲ್ ಆಯಿತು. ಮಾತ್ರವಲ್ಲದೆ, ಎಲ್ಲಿ ನೋಡಿದರೂ ಸಮಾವೇಶದ ಬಗ್ಗೆಯೇ ಮಾತು ಕೇಳಿಬರುತ್ತಿವೆ.
ಪರ-ವಿರೋಧ ಚರ್ಚೆ: ಸಮಾವೇಶದಲ್ಲಿ ನೋಂದಣಿ ಮಾಡಿಕೊಂಡಿದ್ದ ವಧು-ವರರ ಸಂಖ್ಯೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ನೋಂದಣಿ ಮಾಡಿಕೊಂಡಿರುವವರ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ರೈತರ ಮಕ್ಕಳಿದ್ದಾರೆ. ಆದರೆ, ಅವರಿಗೆ ಹೆಣ್ಣು ಕೊಡಲು ಹಿಂದೆ-ಮುಂದೆ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಂತ. ಗಂಡು ಬೇಕೆಂಬ ಆಸೆಯಿಂದ ಹೆಣ್ಣು ಭ್ರೂಣಹತ್ಯೆ ಮಾಡಿದ್ದರ ಪರಿಣಾಮದಿಂದ ಪ್ರಸ್ತುತ ಸಮಸ್ಯೆ ಎದುರಾಗಿದೆ ಎಂಬ ವಿಷಯವೂ ಪ್ರಸ್ತಾಪವಾಗುತ್ತಿದೆ.