

ಪಡುಬಿದ್ರಿ: ನಂದಿಕೂರು ವಿಶೇಷ ಆರ್ಥಿಕ ವಲಯ ಬಳಿ ಸ್ಥಾಪನೆಯಾಗಿರುವ ಬಯೋ ಡೀಸೆಲ್ ತಾಳೆ ಎಣ್ಣೆ ತಯಾರಿಕಾ ಘಟಕದಿಂದ ಪಾದೆಬೆಟ್ಟು ಗ್ರಾಮದಲ್ಲಿ ಹರಿಯುವ ತೋಡಿನಲ್ಲಿ ಮಳೆ ನೀರಿನೊಂದಿಗೆ ಎಣ್ಣೆ ಮಿಶ್ರಿತ ನೀರು ಹರಿದು ತೊಂದರೆಯಾಗಿದೆ. ಎಣ್ಣೆ ಮಿಶ್ರಿತ ಹರಿಯುವುದನ್ನು ತಿಳಿದ ಘಟಕದ ಸಿಬ್ಬಂದಿ ಶನಿವಾರ ಹೊರಭಾಗದಲ್ಲಿ ಹರಿಯುವ ಮಳೆ ನೀರು ಹರಿಯುವ ತೋಡಿನ ಬಳಿ ಅಡ್ಡಾಡುವುದನ್ನು ಕಂಡ ಸ್ಥಳೀಯರು ಆಕ್ರೋಶ ತರಾಗಿ ಅವರನ್ನು ತಡೆದು ಅಲ್ಲಿಂದ ಕಳುಹಿಸಿದರು.
ಬಳಿಕ ಎಣ್ಣೆ ಮಿಶ್ರಿತ ನೀರು ಹರಿಯುತ್ತಿರುವುದನ್ನು ಚಿತ್ರೀಕರಿಸಿ ಪರಿಸರ ಅಧಿಕಾರಿಗಳಿಗೆ ದೂರಿದ್ದು, ಕ್ರಮಕ್ಕಾಗಿ ಒತ್ತಾಯಿಸಿದರು. ಈಗಾಗಲೇ ಈ ಪ್ರದೇಶದ ಬಾವಿಗಳ ನೀರು ಮಲಿನವಾಗಿರುವ ಬಗ್ಗೆ ಪರೀಕ್ಷಾ ವರದಿಗಳಿಂದ ಸಾಬೀತಾಗಿದ್ದು, ಜಿಲ್ಲಾಡಳಿತ ಈ ಮನೆಗೆಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ನಾಗೇಶ್ ರಾವ್ ಆಗ್ರಹಿಸಿದ್ದಾರೆ. ಘಟಕದ ಸುತ್ತಮುತ್ತ ಪ್ರದೇಶದಲ್ಲಿ ದುರ್ವಾಸನೆ ಬೀರುತ್ತಿದ್ದು, ಜನ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಕಂಪನಿಯು ಕದ್ದು ಮುಚ್ಚಿ ಎಣ್ಣೆ ಮಿಶ್ರಿತ ನೀರನ್ನು ಮಳೆ ನೀರಿನೊಂದಿಗೆ ಹರಿಯ ಬಿಡುವ ಪರಿಣಾಮ ಮುಂದಿನ ದಿನಗಳನ್ನು ಕೃಷಿ ಭೂಮಿ ಸಹಿತ ಬಾವಿಗಳು ಕಲುಷಿತಗೊಳ್ಳುವ ಭೀತಿಯಿದೆ. ಇದನ್ನು ತಡೆಗಟ್ಟದಿದ್ದಲ್ಲಿ ಕಾನೂನಾತ್ಮಕ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.