

ಕೋಟ: ಅಕಾಲಿಕ ಮಳೆಯಿಂದ ಕೋಟ ಹೋಬಳಿಯಲ್ಲಿ ಕಲ್ಲಂಗಡಿ ಬೆಳೆ ಸಂಪೂರ್ಣ ಹಾನಿಗೊಂಡಿದ್ದು, ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ರೈತರಿಂದ ಮಾಹಿತ ಪಡೆದರು.
ಮಂಗಳವಾರ ‘ವಿಜಯವಾಣಿ’ಯಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿತ್ತು. ಹಾನಿಗೀಡಾದ ಪ್ರದೇಶಗಳಿಗೆ ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ್ ಎಸ್.ಹೆಗ್ಡೆ ಸಹಿತ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಎಸಿ ರಶ್ಮಿ, ಕೋಟದ ಹರ್ತಟ್ಟು ಕೃಷಿಕ ಸಿದ್ಧ ದೇವಾಡಿಗ ಅವರಿಂದ ಮಾಹಿತಿ ಪಡೆದರು.
ಅಕಾಲಿಕ ಮಳೆಯಿಂದ ಕಲ್ಲಂಗಡಿ ಬೆಳೆ ಹಾನಿಯಾಗಿರುವ ಬಗ್ಗೆ ಕೃಷಿ ಹಾಗೂ ತೋಟಗಾರಿಕಾ ಇಲಾಖೆಗೆ ಮಾಹಿತಿ ಕಲೆಹಾಕಲು ಸೂಚಿಸಿದ್ದೇನೆ. ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುತ್ತಾರೆ ಎಂದು ಉಪವಿಭಾಗಾಧಿಕಾರಿ ತಿಳಿಸಿದರು. ಕೋಟ ಕಂದಾಯ ಅಧಿಕಾರಿ ಮಂಜು ಬಿಲ್ಲವ ಹಾಗೂ ಗ್ರಾಮ ಲೆಕ್ಕಿಗ ಚಲುವರಾಜು, ತಾಲೂಕು ಯೋಜನಾಧಿಕಾರಿ ಸಂದೇಶ್ ಶೆಟ್ಟಿ ಉಪಸ್ಥಿತರಿದ್ದರು.