

ಗಂಗೊಳ್ಳಿ: ಸೇವೆ, ಸ್ನೇಹ, ವೈವಿಧ್ಯತೆ, ಸಮಗ್ರತೆ ಮತ್ತು ನಾಯಕತ್ವ ಎಂಬ ಮೌಲ್ಯದ ಮೂಲಕ ನಿರಂತರವಾಗಿ ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸುತ್ತಾ ಬಂದಿರುವ ರೋಟರಿ ಸಂಸ್ಥೆ ತನ್ನದೇ ಆದ ಸಾಮಾಜಿಕ ಮೌಲ್ಯಗಳನ್ನು ಹೊಂದಿದೆ. ಆರೋಗ್ಯ, ಶಿಕ್ಷಣ, ಸಮುದಾಯದ ಅರಿವು ಹಾಗೂ ಅಭಿವೃದ್ಧಿಯಲ್ಲಿ ರೋಟರಿ ಹೆಚ್ಚಿನ ಕಾರ್ಯ ಮಾಡುತ್ತಿದೆ ಎಂದು ರೋಟರಿ ಜಿಲ್ಲೆ 3182ರ ಗವರ್ನರ್ ಸಿಎ ದೇವ್‌ಆನಂದ್ ಹೇಳಿದರು.
ಗಂಗೊಳ್ಳಿಯ ಸ.ವಿ. ಪದವಿಪೂರ್ವ ಕಾಲೇಜಿನ ರೋಟರಿ ಒಳಾಂಗಣದಲ್ಲಿ ಮಂಗಳವಾರ ಗಂಗೊಳ್ಳಿ ರೋಟರಿ ಕ್ಲಬ್‌ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೋಟರಿ ಕ್ಲಬ್ ಗಂಗೊಳ್ಳಿ ಅಧ್ಯಕ್ಷೆ ಚಂದ್ರಕಲಾ ಎಸ್.ತಾಂಡೇಲ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಪ್ರಥಮ ಮಹಿಳೆ ಉಷಾ ದೇವ್‌ಆನಂದ, ಸಹಾಯಕ ಗವರ್ನರ್ ಡಾ.ಬಿ.ರಾಜೇಂದ್ರ ಶೆಟ್ಟಿ ವಲಯ ಸೇನಾನಿ ಪ್ರದೀಪ್ ಡಿ.ಕೆ. ಉಪಸ್ಥಿತರಿದ್ದರು. ಚಂದ್ರಕಲಾ ಎಸ್.ತಾಂಡೇಲ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಕೆ.ರಾಮನಾಥ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ರೋಟರಿ ಕಾರ್ಯದರ್ಶಿ ಮಾಲಾಶ್ರೀ ಖಾರ್ವಿ ವಂದಿಸಿದರು.
ಜಿಲ್ಲಾ ಯೋಜನೆಯಡಿ ಒಂದಾದ ಪ್ಲಾಸ್ಟಿಕ್ ನಿಷೇಧ ಕಾರ್ಯಕ್ರಮದ ಅಂಗವಾಗಿ ಗಂಗೊಳ್ಳಿಯ ಶ್ರೀ ಶಾರದೋತ್ಸವ ಸಮಿತಿಗೆ 200 ಕಾಟನ್ ಕೈ ಚೀಲಗಳನ್ನು ವಿತರಿಸಲಾಯಿತು. ಟೇಬಲ್ ಟೆನ್ನಿಸ್‌ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಗಂಗೊಳ್ಳಿ ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಆರ್ಯನ್ ವಿ.ಕೆ. ಅವರನ್ನು ಗೌರವಿಸಲಾಯಿತು.