

ಬಂಟ್ವಾಳ: ನೇತ್ರಾವತಿ ನದಿಗೆ ಕೊಳಚೆ ನೀರು, ತ್ಯಾಜ್ಯ ವಸ್ತುಗಳು ಸೇರುತ್ತಿರುವ ಹಿನ್ನೆಲೆ ಮಂಗಳೂರು ಬೈಕಂಪಾಡಿಯಲ್ಲಿರುವ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಉಪ ಪರಿಸರಾಧಿಕಾರಿ ನೇತೃತ್ವದ ತಂಡ ನದಿ ತೀರಕ್ಕೆ ಭೇಟಿ ನೀಡಿ ಪರಿಶೀಲಿಸಿ ನೀರಿನ ಸ್ಯಾಂಪಲ್ ಸಂಗ್ರಹಿಸಿದೆ.
ಉಪ ಪರಿಸರಾಧಿಕಾರಿ ಡಾ.ಮಂಜು ಆರ್., ಸಹಾಯಕ ಸುನೀಲ್ ಕುಮಾರ್ ಹಾಗೂ ಪುರಸಭೆಯ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಆರೋಗ್ಯ ನಿರೀಕ್ಷಕ ರತ್ನಪ್ರಸಾದ್ ಅವರು ಬಂಟ್ವಾಳ ಬಡ್ಡಕಟ್ಟೆಯ ಮಾಂಸದಂಗಡಿಯ ಹಿಂಭಾಗ, ಬಿ.ಸಿ.ರೋಡಿನ ಪರ್ಲಿಯಾ, ಮಫತ್ ಲಾಲ್, ಆರಾಧ್ಯ ಲೇಔಟ್‌ಗಳು, ಬಸ್ತಿಪಡ್ಪು, ಕಂಚಿಕಾರ ಪೇಟೆ, ಗೂಡಿನ ಬಳಿ ಹಾಗೂ ಪಾಣೆಮಂಗಳೂರಿನ ಭಾಗದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪುರಸಭಾ ವ್ಯಾಪ್ತಿಯ 12 ಸ್ಥಳಗಳಲ್ಲಿ ಮಲೀನ ನೀರು ನೇರವಾಗಿ ನೇತ್ರಾವತಿ ನದಿಗೆ ಸೇರುತ್ತಿರುವ ಬಗ್ಗೆ ವಿಜಯವಾಣಿ ಕಳೆದ ಗುರುವಾರ ನೇತ್ರಾವತಿ ಒಡಲು ಮಲಿನ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ ಜಿಲ್ಲಾಡಳಿತದ ಗಮನ ಸೆಳೆದಿತ್ತು.