ವಿಟ್ಲ: ವಿಜ್ಞಾನ ಮತ್ತು ಆದ್ಯಾತ್ಮ ಜತೆ ಜತೆಗೆ ಸಾಗಬೇಕಾಗಿದ್ದು, ತಂತ್ರಜ್ಞಾನಗಳು ಹೆಚ್ಚಾದಂತೆ ಆದ್ಯಾತ್ಮಿಕವಾಗಿ ಹಿಂದೆ ಬೀಳುತ್ತಿದ್ದೇವೆ. ಆರೋಗ್ಯಕರ ವಿಚಾರಗಳ ಬಗ್ಗೆ ನಮ್ಮ ಒಲವು ಹೆಚ್ಚಿರಬೇಕು. ಪ್ರತಿಯೊಂದೂ ಆರಾಧನೆಯಲ್ಲಿ ವೈಜ್ಞಾನಿಕವಾದ ಸತ್ಯ ಅಡಗಿದ್ದು, ಪ್ರಕೃತಿಯ ಒಳಗೆ ಇರುವ ಭಗವಂತನನ್ನು ಮರೆಯಬಾರದು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಡೆದ ನಾಗರ ಪಂಚಮಿ ಮಹೋತ್ಸವ, ಸಾರ್ವಜನಿಕ ಆಶ್ಲೇಷ ಬಲಿ ಪೂಜೆಯ ಸಂದರ್ಭದಲ್ಲಿ ಆಶೀರ್ವಚನ ನೀಡಿದರು.
ಮೂಲ ನಂಬಿಕೆಯನ್ನು ಗಟ್ಟಿಗೊಳಿಸುವ ಕೆಲಸವಾಗಬೇಕು. ಸಹೋದರತ್ವ ನಾಗರಪಂಚಮಿಯಲ್ಲಿ ಅಡಗಿದೆ. ನಾಗನ ಆರಾಧನೆ ಪ್ರಕೃತಿಯ ಆರಾಧನೆಯಾಗಿದೆ. ಗೆಲುವಿನ ಮೂಲ ನಂಬಿಕೆಯಾಗಿದ್ದು, ಪ್ರಕೃತಿಯ ಆರಾಧನೆ ನಡೆಯಬೇಕು. ನಮ್ಮೊಳಗಿನ ಕಂದಕವನ್ನು ಪ್ರೀತಿಭಾವದಿಂದ ಸರಿಪಡಿಸಿಕೊಳ್ಳಬಹುದು. ವ್ಯಾಪಾರ ಬುದ್ದಿಯನ್ನು ಬಿಟ್ಟಾಗ ಬದುಕು ಬದುಕಾಗುತ್ತದೆ ಎಂದು ತಿಳಿಸಿದರು.
ಸಾಧ್ವೀ ಮಾತಾನಂದಮಯೀ ರವರು ದಿವ್ಯ ಸಾನಿಧ್ಯ ಕರುಣಿಸಿದ್ದರು.
ಪ್ರಾತಃಕಾಲ ಆರಾಧ್ಯ ದೇವರಿಗೆ ಮಹಾಪೂಜೆ, ಶ್ರೀ ಗಣಪತಿ ಹವನ, ಸ್ವಯಂ ಭೂ ನಾಗರಾಜ ಸನ್ನಿಽಯಲ್ಲಿ ಅಭಿಷೇಕ, ಸಾಮೂಹಿಕ ಆಶ್ಲೇಷ ಬಲಿಪೂಜೆ ಆರಂಭ, ಕಲ್ಪೋಕ್ತ ಪೂಜೆ, ಮಹಾಪೂಜೆ, ಮಹಾ ಮಂಗಳಾರತಿ, ಪ್ರಸಾದವಿತರಣೆ, ಮಧ್ಯಾಹ್ನ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆಯವರಿಂದ ತುಳಸಿ ಜಲಂಧರ ಯಕ್ಷಗಾನ ಬಯಲಾಟ, ರಾತ್ರಿ ಭಜನೆ, ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.