ಹನಿಟ್ರ್ಯಾಪ್​ ಕ್ವೀನ್​ ಅರ್ಚನಾಳ ಐಷಾರಾಮಿ ಮನೆ ಪ್ರವೇಶಿಸಿದ ಪೊಲೀಸರಿಗೆ ಕಾದಿತ್ತು ಸಾಕಷ್ಟು ಅಚ್ಚರಿಗಳು!

Archana Nag
Published on

ಭುವನೇಶ್ವರ್​: ಒಡಿಶಾದ ಹಸಿವುಯುಕ್ತ ವಲಯಗಳಲ್ಲಿ ಒಂದಾಗಿದ್ದ ಕಲಹಂಡಿ ಜಿಲ್ಲೆಯ ನಿವಾಸಿಯಾದ ಹಾಗೂ ಬಡ ಕುಟುಂಬದಲ್ಲಿ ಹುಟ್ಟಿದ ಅರ್ಚನಾ ನಾಗ್​, ಇದೀಗ ಸ್ವಂತ ಹೆಸರಿನಲ್ಲಿ ಅರಮನೆಯಂತಹ ಮನೆಯನ್ನು ಹೊಂದಿದ್ದಾಳೆ. ಇಷ್ಟೇ ಅಲ್ಲದೆ, ಐಷಾರಾಮಿ ಕಾರುಗಳು, ನಾಲ್ಕು ಹೈಬ್ರೀಡ್​ ನಾಯಿಗಳು ಹಾಗೂ ಒಂದು ಬಿಳಿ ಬಣ್ಣದ ಕುದುರೆ ಹೊಂದಿರುವ ಅರ್ಚನಾ ನಾಗ್​ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾಳೆ.

ಅಂದಹಾಗೆ ಈ ಅರ್ಚನಾ ನಾಗ್​ ಯಾರು ಗೊತ್ತಾ? ಬೆದರಿಕೆ ಒಡ್ಡಿ ಅನೇಕ ಹೈ ಪ್ರೊಫೈಲ್​ ಜನರ ಬಳಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಒಡಿಶಾ ಪೊಲೀಸರಿಂದ ಬಂಧನವಾಗಿರುವ ಮಹಿಳಾ ಬ್ಲಾಕ್​ಮೇಲರ್ ಈಕೆ. ಬಂಧನದ ಬೆನ್ನಲ್ಲೇ ಈಕೆಯ ಕುರಿತು ಪ್ರತಿದಿನ ಸಾಕಷ್ಟು ಸಂಗತಿಗಳು ಬೆಳಕಿಗೆ ಬರುತ್ತಿವೆ. ಸದ್ಯ ಈಕೆಯನ್ನು ಜಾರ್ಪದದಲ್ಲಿರುವ ವಿಶೇಷ ಜೈಲಿನಲ್ಲಿ ಇಡಲಾಗಿದೆ. ಇತ್ತೀಚೆಗಷ್ಟೇ ಆಕೆಯ ಪತಿ ಜಗಬಂಧು ಎಂಬಾತನನ್ನು ಬಂಧಿಸಲಾಗಿದೆ.

26 ವರ್ಷದ ಅರ್ಚನಾ ಓರ್ವ ಬ್ಲಾಕ್​ಮೇಲರ್​. ಈಕೆಯ ಹನಿಟ್ರ್ಯಾಪ್​ ಬಲೆಗೆ ಬಿದ್ದ ರಾಜಕಾರಣಿಗಳು, ಉದ್ಯಮಿಗಳು ಮತ್ತು ಸಿನಿಮಾ ನಿರ್ಮಾಪಕರು ಸೇರಿದಂತೆ ಪ್ರಭಾವಿಗಳ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುವುದಾಗಿ ಬೆದರಿಸಿ, ಹಣ ಸುಲಿಗೆ ಮಾಡುವುದೇ ಈಕೆಯ ನಿತ್ಯದ ಕೆಲಸವಾಗಿತ್ತು. ಒಡಿಶಾದ ಚಲನಚಿತ್ರ ನಿರ್ಮಾಪಕ ಅಕ್ಷಯ್ ಪಾರಿಜಾ ಅವರನ್ನು ಹನಿಟ್ರ್ಯಾಪ್​ ಬಲೆಗೆ ಬೀಳಿಸುವ ಅರ್ಚನಾರ ಯೋಜನೆ ವಿಫಲವಾದ ಬಳಿಕ ಆಕೆ ಪೊಲೀಸರ ಅತಿಥಿಯಾಗಿದ್ದು, ಆಕೆಯ ಎಲ್ಲ ಪುರಾಣಗಳು ಇದೀಗ ಬಯಲಾಗುತ್ತಿದೆ.

2018 ರಿಂದ 2022 ರವರೆಗಿನ ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ದಂಪತಿ 30 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಗಳಿಸಿದ್ದಾರೆ. ಅರ್ಚನಾ ಹೆಸರಿನಲ್ಲಿ ಮೂರು ಅಂತಸ್ತಿನ ಅರಮನೆಯಂತಹ ಬಂಗಲೆ ಇದೆ. ಮನೆಯಲ್ಲಿ ಪೀಠೋಪಕರಣಗಳ ಬೆಲೆ 40 ಲಕ್ಷ ರೂ. ಎಂಬುದು ಅಚ್ಚರಿಯ ಸಂಗತಿ.

ಮೂಲಗಳ ಪ್ರಕಾರ ಮೂರು ಅಂತಸ್ತಿನ ಮನೆಯನ್ನು ವಿಯೆಟ್ನಾಂ ಮೂಲದ ಕೀನ್ ಥಿನ್ ಗ್ರೂಪ್‌ನ ವೆಬ್‌ಸೈಟ್‌ನಿಂದ ನಕಲು ಮಾಡಲಾದ 'ನಿಯೋಕ್ಲಾಸಿಕಲ್' ವಿನ್ಯಾಸದಲ್ಲಿ ನಿರ್ಮಿಸಲಾಗಿದೆ. ಅತ್ಯಾಧುನಿಕ ಫ್ರೆಂಚ್ ಶೈಲಿಯಲ್ಲಿ ಚೌಕಾಕಾರದಲ್ಲಿ ಮನೆಯನ್ನು ನಿರ್ಮಿಸಲಾಗಿದೆ. ಮೊದಲ ಮಹಡಿಯಲ್ಲಿ ಲಿವಿಂಗ್ ರೂಮ್, ಊಟದ ಕೋಣೆ, ಅಡುಗೆಮನೆ, ಮಲಗುವ ಕೋಣೆ ಮತ್ತು ಶೌಚಗೃಹ ಇದೆ. ಎರಡನೇ ಮಹಡಿಯಲ್ಲಿ 2 ಬೆಡ್​ರೂಮ್​, ಕಚೇರಿ, ಡ್ರೆಸ್ಸಿಂಗ್ ರೂಮ್​, ಬಾಲ್ಕನಿ ಮತ್ತು ಶೌಚಗೃಹ ಇದೆ. ಮೂರನೇ ಮಹಡಿಯಲ್ಲಿ ಪೂಜಾ ಕೊಠಡಿ, ಎಸ್‌ಎಚ್‌ಸಿ ಕೊಠಡಿ, ಮಲಗುವ ಕೋಣೆ, ಆಟದ ಮೈದಾನ ಮತ್ತು ಡ್ರೈಯಿಂಗ್ ಯಾರ್ಡ್ ಇದೆ.

ಅರ್ಚನಾ ಮತ್ತು ಆಕೆಯ ಪತಿ ಜಗಬಂಧು ಹೆಸರಿನಲ್ಲಿ ನಖಹಾರದಲ್ಲಿ ಒಂದು ಫಾರ್ಮ್​ಹೌಸ್​ ಮತ್ತು ಕಾರು ಶೋರೂಮ್​ ಸಹ ಹೊಂದಿದ್ದಾರೆ. ಅರ್ಚನಾಳ ಐದು ಬ್ಯಾಂಕ್​ ಖಾತೆಗಳ ವಿವರಗಳನ್ನು ಪರಿಶೀಲಿಸಿದಾಗ, ಕಳೆದ 6 ತಿಂಗಳಲ್ಲಿ 5 ಕೋಟಿ ರೂ. ಗಳಿಸಿರುವ ಅರ್ಚನಾ, ಅದರಲ್ಲಿ ಆನ್‌ಲೈನ್ ಶಾಪಿಂಗ್‌ಗೆ ಸುಮಾರು 60 ಲಕ್ಷದಿಂದ 70 ಲಕ್ಷ ರೂಪಾಯಿ ಖರ್ಚು ಮಾಡಿದ್ದಾಳೆಂದು ಪೊಲೀಸ್​ ಮೂಲಗಳು ತಿಳಿಸಿವೆ. ಪ್ರಭಾವಿ ವ್ಯಕ್ತಿಗಳು ಆಕೆಗೆ ದುಬಾರಿ ಉಡುಗೊರೆಗಳನ್ನು ನೀಡಿದ್ದಾರೆ. ಒಡಿಶಾದ ಮಾಜಿ ಸಚಿವರೊಬ್ಬರು ಆಕೆಯ ಹುಟ್ಟುಹಬ್ಬದಂದು ಪ್ರತಿಷ್ಠಿತ ಕಂಪನಿ ಎಲ್ವಿಸ್ ತಯಾರಿಸಿದ 3 ಲಕ್ಷ ರೂಪಾಯಿ ಮೌಲ್ಯದ ವ್ಯಾನಿಟಿ ಬ್ಯಾಗ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆಂದು ತಿಳಿದುಬಂದಿದೆ.

ಈಕೆ ಕಡು ಬಡತನಿಂದ ಆಗರ್ಭ ಶ್ರೀಮಂತೆ ಆಗಿ, ಸುಲಿಗೆ ಪ್ರಕರಣದಲ್ಲಿ ಇದೀಗ ಬಂಧನವಾಗಿರುವ ಆಧಾರದ ಮೇಲೆ ಒಡಿಶಾದ ಸಿನಿಮಾ ನಿರ್ದೇಶಕರೊಬ್ಬರು ಸಿನಿಮಾ ಮಾಡಲು ಆಸಕ್ತಿ ಹೊಂದಿದ್ದಾರೆ. ಅಷ್ಟು ರೋಚಕವಾಗಿದೆ ಈಕೆಯ ಲೈಫ್​ ಜರ್ನಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net