

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ನೇತ್ರಾವತಿ ನದಿಗೆ ಬಿಳಿಯೂರು ಎಂಬಲ್ಲಿ ಕಟ್ಟಿರುವ ಅಣೆಕಟ್ಟಿನ ಎಲ್ಲ ಗೇಟುಗಳನ್ನು ತೆರವುಗೊಳಿಸುವ ಮುನ್ನ ಸುರಿದ ಭಾರಿ ಮಳೆಯಿಂದಾಗಿ ಗೇಟು ತೆರವು ಕಾರ್ಯಕ್ಕೆ ತಡೆಯುಂಟಾಗಿದ್ದು, ನದಿಯಲ್ಲಿ ಉಂಟಾಗಿರುವ ನೀರಿನ ಪ್ರವಾಹದೆದುರು ಗೇಟು ತೆಗೆಯಲು ಪ್ರಯತ್ನ ಮುಂದುವರಿದಿದೆ.
ಸಾಮಾನ್ಯವಾಗಿ ಮೇ ಮಾಸಾಂತ್ಯದವರೆಗೆ ಅಣೆಕಟ್ಟಿನಲ್ಲಿ ಹಿನ್ನೀರು ಉಳಿಸಿಕೊಳ್ಳುವುದು ನಿಯಮವಾಗಿದ್ದರೂ ಈ ಬಾರಿ ಮುಂಗಾರು ಮಾರುತ ಅವಧಿಗಿಂತ ಮೊದಲೇ ಜಿಲ್ಲೆಯನ್ನು ಪ್ರವೇಶಿಸಲಿದೆ ಎಂಬ ಹವಾಮಾನ ಇಲಾಖಾ ವರದಿ ಆಧಾರದಲ್ಲಿ ಮೇ 21ರಿಂದಲೇ ಗೇಟು ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಆದರೆ ಆ ವೇಳೆ ಚಂಡಮಾರುತದಿಂದಾಗಿ ಪರಿಸರಾದ್ಯಂತ ಭಾರಿ ಮಳೆಯಾಗುತ್ತಿದ್ದು, ಅಚ್ಚರಿ ಎಂಬಂತೆ ನೇತ್ರಾವತಿ ನದಿ ಮೇ ತಿಂಗಳಲ್ಲೇ ಮೈತುಂಬಿ ಹರಿಯುವಂತಾಗಿದೆ. ಇದರಿಂದಾಗಿ ಪೂರ್ಣ ಪ್ರಮಾಣದ ಗೇಟು ತೆರವು ಕಾರ್ಯಾಚರಣೆ ಅಸಾಧ್ಯವಾಗಿದ್ದು, ನದಿಯಲ್ಲಿ ನೀರಿನ ಪ್ರವಾಹದ ಒತ್ತಡ ಎದುರಿಸಿ ಗೇಟು ತೆರವು ಕಾರ್ಯಾಚರಣೆ ಮಂದಗತಿಯಲ್ಲಿ ಮುಂದುವರಿದಿದೆ.
ಗೇಟು ತೆರವು ಕಾರ್ಯಾಚರಣೆ ವಿಳಂಬವಾದಷ್ಟು ಇದೇ ತೆರನಾದ ಮಳೆ ಸುರಿದರೆ ಅಣೆಕಟ್ಟಿನ ಮೇಲ್ಭಾಗದ ಪ್ರದೇಶವಾದ ಉಪ್ಪಿನಂಗಡಿಯಂತಹ ಪ್ರದೇಶ ನೆರೆ ಬಾಧಿತವಾಗುವ ಸಾಧ್ಯತೆ ಅಧಿಕವಾಗಿದೆ.
ಕಸಕಡ್ಡಿ, ಮರದ ದಿಮ್ಮಿಗಳಿಂದ ತೊಂದರೆ?
ಪ್ರಸಕ್ತ ನದಿಯಲ್ಲಿ ನೀರಿನ ಹರಿಯುವಿಕೆ ಜೋರಾಗಿದ್ದು, ನದಿ ನೀರಿನಲ್ಲಿ ಕಾಡಿನಿಂದ ಭಾರಿ ಪ್ರಮಾಣದ ಕಸಕಡ್ಡಿಗಳು, ಮರದ ದಿಮ್ಮಿಗಳು ನೆರೆ ನೀರಿನಲ್ಲಿ ಕೊಚ್ಚಿ ಬರತೊಡಗಿವೆ. ಇವೆಲ್ಲವೂ ಬಿಳಿಯೂರು ಅಣೆಕಟ್ಟಿನ ಗೇಟುಗಳಲ್ಲಿ ಸಿಲುಕಿಕೊಂಡಿದ್ದು, ಗೇಟು ತೆರವು ಕಾರ್ಯಾಚರಣೆಗೆ ತಡೆಯೊಡ್ದಬಹುದೆಂಬ ಭೀತಿ ಕಾಡುತ್ತಿದೆ.
15 ಗೇಟು ಮಾತ್ರ ತೆರವು
ನೇತ್ರಾವತಿ ನದಿಯಲ್ಲಿನ ಕೆಳ ಭಾಗದ ಅಣೆಕಟ್ಟುಗಳ ಗೆಟುಗಳನ್ನು ತೆರವುಗೊಳಿಸದೆ ಬಿಳಿಯೂರು ಅಣೆಕಟ್ಟಿನ ಗೇಟು ತೆರವು ಕಾರ್ಯಾಚರಣೆ ನಡೆಸುವುದು ಅಸಾಧ್ಯವಾಗಿತ್ತು. ಈ ಕಾರಣಕ್ಕಾಗಿ ಅವಧಿ ಮುಂಚಿತ ಮುಂಗಾರು ಆಗಮನದ ಮಾಹಿತಿ ಲಭ್ಯವಾಗಿದ್ದರೂ ಪೂರಕ ಸ್ಥಿತಿಗತಿಗಾಗಿ ಕಾಯಲೇಬೇಕಾಗಿತ್ತು. ಈ ಮಧ್ಯೆ ಮೇ ತಿಂಗಳ ನಾಲ್ಕನೇ ವಾರದಲ್ಲಿ ಬಿಳಿಯೂರು ಅಣೆಕಟ್ಟಿನ ಗೇಟು ತೆರವಿಗೆ ಕ್ರಮಕೈಗೊಳ್ಳಲಾಯಿತಾದರೂ, ಭಾರಿ ಮಳೆಗೆ ನದಿಯಲ್ಲಿ ನೀರು ಮೈತುಂಬಿ ಹರಿಯತೊಡಗಿತು. ಇದರಿಂದಾಗಿ ಗೇಟು ತೆರವು ಕಾರ್ಯಾಚರಣೆಗೆ ಅಡೆತಡೆಯುಂಟಾಗಿದೆ. ಆದರೂ 42 ಗೇಟುಗಳ ಪೈಕಿ 15 ಗೇಟುಗಳನ್ನು ತೆರವುಗೊಳಿಸುವ ಪ್ರಕ್ರಿಯೆ ನಡೆದಿದ್ದು, 9 ಗೇಟುಗಳನ್ನು ಪೂರ್ಣವಾಗಿ ತೆರವು ಮಾಡಲಾಗಿದೆ. ಉಳಿದ ಆರು ಗೇಟುಗಳ ಪೂರ್ಣ ತೆರವಿಗೆ ಪ್ರಕ್ರಿಯೆ ನಡೆಯುತ್ತಿದ್ದು, ಮಂಗಳವಾರದ ಒಳಗಾಗಿ ಪೂರ್ಣಗೊಳ್ಳಬಹುದು. ಉಳಿದ ಗೇಟುಗಳನ್ನು ನದಿಯ ನೀರಿನ ಪ್ರವಾಹದ ವೇಗ ಕಡಿಮೆಯಾದಾಕ್ಷಣ ತೆರವುಗೊಳಿಸಲು ಪ್ರಯತ್ನಿಸಲಾಗುವುದು ಎಂದು ಸಣ್ಣ ನೀರಾವರಿ ಇಲಾಖಾ ಸಹಾಯಕ ಅಭಿಯಂತ ಶಿವಪ್ರಸನ್ನ ತಿಳಿಸಿದ್ದಾರೆ.