

Amruta Fadnavis: ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೆಂದ್ರ ಫಡ್ನಾವೀಸ್ ಅವರ ಪತ್ನಿ ಅಮೃತ ಫಡ್ನಾವೀಸ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ಇಬ್ಬರು ವ್ಯಕ್ತಿಗಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪುಣೆ ನ್ಯಾಯಾಲಯ ತಿರಸ್ಕರಿಸಿದೆ.
ಇಬ್ಬರಿಗೆ ಜಾಮೀನು ತಿರಸ್ಕರಿಸಿರುವ ಕೋರ್ಟ್, ಉಳಿದ ನಾಲ್ವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಅಮೃತ ಅವರ ವಿರುದ್ಧ ಕೆಟ್ಟದಾಗಿ ಪೋಸ್ಟ್ ಮಾಡಿದ ಸಂಬಂಧ ವಕೀಲ ಬಸವರಾಜ್ ಯಾದ್ವಾಡ್ ಎಂಬುವರು ಏಪ್ರಿಲ್ನಲ್ಲಿ ದೂರು ನೀಡಿದ್ದರು. ಈ ಸಂಬಂಧ ಪುಣೆ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದ ಆರೋಪಿಗಳನ್ನು ನಿಖಿಲ್ ಸಂಕ್ಪಾಲ್, ದತ್ತ ಚೌಧರಿ, ಬಲಿರಾಮ್ ಪಂಡಿತ್, ಆಶಿಶ್ ವಾಂಖೆಡೆ, ಶೈಲೇಶ್ ವರ್ಮಾ, ಭೂಮಿಶ್ ಸೇವ್ ಮತ್ತು ಅಭಿಜಿತ್ ಫಡ್ನಿಸ್ ಎಂದು ಗುರುತಿಸಲಾಗಿದೆ. ಎಲ್ಲ ಏಳು ಮಂದಿಗೂ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದರು. ಈ ವೇಳೆ ನಿಖಿಲ್ ಸಂಕ್ಪಾಲ್ ಮಾತ್ರ ನೋಟಿಸ್ಗೆ ಪ್ರತಿಕ್ರಿಯೆ ನೀಡಿದ್ದರು. ಬಳಿಕ ಈ ಪ್ರಕರಣದಲ್ಲಿ ಪಂಡಿತ್, ಆಶಿಶ್ ವಾಂಖೆಡೆ ಹಾಗೂ ವರ್ಮಾರನ್ನು ಪೊಲೀಸರು ಬಂಧಿಸಿದ್ದರು. ಉಳಿದ ಆರೋಪಿಗಳಾದ ಭೂಮಿಶ್ ಹಾಗೂ ಅಭಿಜಿತ್ ತಲೆಮರೆಸಿಕೊಂಡಿದ್ದರು.
ಆರೋಪಿಗಳಲ್ಲಿ ಒಬ್ಬನಾದ ನಿಖಿಲ್ ಸಂಕ್ಪಾಲ್ ಆಕ್ಷೇಪಾರ್ಹ ಪೋಸ್ಟ್ ಅಪ್ಲೋಡ್ ಮಾಡಿದ್ದ. ಈ ಪೋಸ್ಟ್ ವೈರಲ್ ಆಗಿ, 16 ಸಾವಿರಕ್ಕೂ ಹೆಚ್ಚು ಜನ ಈ ಪೋಸ್ಟ್ನ್ನು ವೀಕ್ಷಿಸಿದ್ದರು. ಅಲ್ಲದೆ, 895 ಜನರು ಲೈಕ್ ಮತ್ತು 187 ಜನ ರೀ ಟ್ವೀಟ್ ಮಾಡಿದ್ದರು. ಇದರಲ್ಲಿ ಉಳಿದ ಆರು ಮಂದಿ ಆರೋಪಿಗಳು ಕೂಡ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಲ್ಲಿ ಚೌದ್ರಿ, ಪಂಡಿತ್, ವಾಂಖೆಡೆ ಹಾಗೂ ಮರ್ಮಾ ಹೆಚ್ಚುವರಿ ಸೆಷನ್ಸ್ ನ್ಯಾಯಧೀಶ ಎ.ಎಸ್ ಗಾಂಧಿ ಬಳಿ ಜಾಮೀನು ಕೋರಿದ್ದರು. ಅದೇ ರೀತಿ ತಲೆಮರೆಸಿಕೊಂಡಿರುವ ಭೂಮಿಶ್, ಅಭಿಜಿತ್ ಕೂಡ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಸದ್ಯ ನಾಲ್ಕು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ಭೂಮಿಶ್ ಸೇವ್ ಹಾಗೂ ಅಭಿಜಿತ್ಗೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಈ ಬಗ್ಗೆ ಮಾತನಾಡಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಕವೇಡಿಯಾ, ವ್ಯಕ್ತಿತ್ವ ಅನ್ನೋದು ಪ್ರತಿಯೊಬ್ಬ ಮಹಿಳೆಗೆ ಆಭರಣದಂತೆ. ಆಕ್ಷೇಪಾರ್ಹ ಪೋಸ್ಟ್ನಲ್ಲಿ ಆ ವ್ಯಕ್ತಿತ್ವವನ್ನೇ ಅಣಕಿಸಿರುವುದರಿಂದ ಜಾಮೀನು ನೀಡಬಾರದು ಎಂದು ವಾದಿಸುತ್ತೇನೆ ಎಂದರು. ಅದೇ ರೀತಿ ಅಮೃತ ಫಡ್ನಾವೀಸ್ ಪರ ವಾದ ಮಂಡಿಸಿದ ವಕೀಲರಾದ ಎಸ್ಕೆ ಜೈನ್ ಕೂಡ ಜಾಮೀನು ನೀಡುವುದನ್ನು ವಿರೋಧಿಸಿದ್ದಾರೆ.
ಆರೋಪಿಗಳು ಮಹಿಳೆಯ ಘನತೆಯನ್ನು ಹಾಳು ಮಾಡಬೇಕೆಂಬ ಉದ್ದೇಶದಿಂದಲೇ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದು, ಅದನ್ನು ರೀಟ್ವೀಟ್ ಮಾಡಲಾಗಿದೆ ಎಂದು ನ್ಯಾಯಾಲಯ ಗಮನಿಸಿದೆ. ಇಲ್ಲಿ ಆರೋಪಿಗಳು ಮರು ಟ್ವೀಟ್ ಮಾಡುವ ಮೊದಲು ಸತ್ಯಾಸತ್ಯತೆಗಳನ್ನು ಪರಿಶೀಲಿಸಿಲ್ಲ. ಪೊಲೀಸರು ನೋಟಿಸ್ ನೀಡಿದ್ದರೂ, ಅವರ ತನಿಖೆಗೆ ಸಹಕರಿಸಲು ವಿಫಲವಾಗಿದ್ದಾರೆ. ಆದರಿಂದ, ಅವರು "ನಿರೀಕ್ಷಣಾ ಜಾಮೀನಿಗೆ ಅರ್ಹರಲ್ಲ" ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. (ಏಜೆನ್ಸೀಸ್)