ಪಿಟಿ ಉಷಾ ಯಶಸ್ಸಿನ ರೂವಾರಿ ತರಬೇತುದಾರ ನಂಬಿಯಾರ್ ನಿಧನ

pt usha coach web
Published on

ಕೋಯಿಕ್ಕೋಡ್: ಪಿಟಿ ಉಷಾ ಅವರಿಗೆ ತರಬೇತಿ ನೀಡಿ ಭಾರತೀಯ ಅಥ್ಲೆಟಿಕ್ಸ್‌ನ ಶ್ರೇಷ್ಠ ಓಟಗಾರ್ತಿಯಾಗಿ ಬೆಳೆಸಿದ್ದ ಕೋಚ್ ಒ.ಎಂ. ನಂಬಿಯಾರ್ (89 ವರ್ಷ) ವಯೋಸಹಜ ಕಾಯಿಲೆಯಿಂದ ಗುರುವಾರ ನಿಧನ ಹೊಂದಿದರು. ಪತ್ನಿ ಲೀಲಾ, ಮೂವರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅವರು ಅಗಲಿದ್ದಾರೆ. ಕೇರಳ ಕರಾವಳಿಯ ವಡಕರದ ಮನೆಯಲ್ಲಿ ನಂಬಿಯಾರ್ ಕೊನೆಯುಸಿರೆಳೆದರು.

ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಮೊದಲಿಗರಲ್ಲಿ ಒಬ್ಬರಾದ ನಂಬಿಯಾರ್‌ಗೆ ಈ ವರ್ಷವಷ್ಟೇ ಪದ್ಮಶ್ರೀ ಪ್ರಶಸ್ತಿಯ ಗೌರವವೂ ಒಲಿದುಬಂದಿತ್ತು. 10 ದಿನದ ಹಿಂದಷ್ಟೇ ಹೃದಯಾಘಾತಕ್ಕೀಡಾಗಿದ್ದ ನಂಬಿಯಾರ್ ಪಾರ್ಕಿನ್‌ಸನ್ ಕಾಯಿಲೆಯಿಂದಲೂ ಬಳಲುತ್ತಿದ್ದರು ಎಂದು ಪಿಟಿ ಉಷಾ ತಿಳಿಸಿದ್ದಾರೆ.

ದೊಡ್ಡ ನಷ್ಟ ಎಂದ ಉಷಾ

‘ನನಗಿದು ದೊಡ್ಡ ನಷ್ಟ. ಅವರು ನನಗೆ ತಂದೆಯಂತಿದ್ದರು. ಅವರ ಮಾರ್ಗದರ್ಶನವಿಲ್ಲದಿದ್ದರೆ ನನ್ನ ಸಾಧನೆಗಳು ದಾಖಲಾಗುತ್ತಿರಲಿಲ್ಲ. ನೀರಜ್ ಚೋಪ್ರಾ ಒಲಿಂಪಿಕ್ಸ್ ಸ್ವರ್ಣ ಪದಕ ಜಯಿಸಿದ ಬಳಿಕ ಕಳೆದ ವಾರ ಅವರನ್ನು ಭೇಟಿಯಾಗಿದ್ದೆ. ಆಗ ನಾನು ಹೇಳಿದ್ದು ಅವರಿಗೆ ಅರ್ಥವಾದರೂ, ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಉಷಾ ತಿಳಿಸಿದ್ದಾರೆ.

ಭಾರತೀಯ ವಾಯುಸೇನೆಯ ಮಾಜಿ ಅಧಿಕಾರಿ ನಂಬಿಯಾರ್, ಪಿಟಿ ಉಷಾ ಅಲ್ಲದೆ ಇನ್ನೂ ಹಲವು ಅಂತಾರಾಷ್ಟ್ರೀಯ ಅಥ್ಲೀಟ್‌ಗಳಿಗೆ ತರಬೇತಿ ನೀಡಿದ್ದರು. 1977ರಲ್ಲಿ ಕಣ್ಣೂರಿನಲ್ಲಿ ನಡೆದ ಆಯ್ಕೆ ಟ್ರಯಲ್ಸ್ ಬಳಿಕ ಪಿಟಿ ಉಷಾಗೆ ತರಬೇತಿ ನೀಡಲಾರಂಭಿಸಿದ್ದ ನಂಬಿಯಾರ್, 1990ರವರೆಗೂ ಅವರಿಗೆ ಕೋಚ್ ಆಗಿದ್ದರು. 100, 200, 400 ಮೀ. ಓಟಗಾರ್ತಿಯಾಗಿದ್ದ ಪಿಟಿ ಉಷಾರನ್ನು 400 ಮೀ. ಹರ್ಡಲ್ಸ್ ಓಟಗಾರ್ತಿಯಾಗಿ ರೂಪಿಸಿದ್ದರು.

1984ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ 400 ಮೀ. ಹರ್ಡಲ್ಸ್ ಸ್ಪರ್ಧೆಯಲ್ಲಿ ಪಿಟಿ ಉಷಾಗೆ ನೂರನೇ ಒಂದು ಸೆಕೆಂಡ್ ಅಂತರದಿಂದ ಪದಕ ಕೈತಪ್ಪಿದಾಗ ನಂಬಿಯಾರ್ ಬಿಕ್ಕಿಬಿಕ್ಕಿ ಅತ್ತಿದ್ದರು. 1986ರ ಏಷ್ಯನ್ ಗೇಮ್ಸ್‌ನಲ್ಲಿ ಪಿಟಿ ಉಷಾ 200 ಮೀ, 400 ಮೀ, 400 ಮೀ. ಹರ್ಡಲ್ಸ್ ಮತ್ತು 4/400 ಮೀ. ರಿಲೇಯಲ್ಲಿ ಚಿನ್ನದ ಪದಕ ಗೆದ್ದು ಬೀಗಿದಾಗ ನಂಬಿಯಾರ್ ಅವರೇ ಕೋಚ್ ಆಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net