

ಮಂಗಳೂರು: ಇತ್ತಿಚಿನ ದಿನಗಳಲ್ಲಿ ಜನರು ಮಾನವೀಯತೆ ಎಂಬ ಪದವನ್ನೇ ಮರೆಯುತ್ತಿದ್ದಾರಾ ಎಂಬ ಅನುಮಾನ ಮೂಡುತ್ತದೆ. ಅದರಲ್ಲೂ ವಿಶೇಷವಾಗಿ ಮಂಗಳೂರಿನಲ್ಲಿ ನಡೆದ ಈ ಘಟನೆಯನ್ನು ಕಂಡ ಬಳಿಕವಂತೂ ಈ ಅನುಮಾನ ಮತ್ತಷ್ಟು ಹೆಚ್ಚಾಗುತ್ತದೆ.
ಆಗಿದ್ದೇನೆಂದರೆ, ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿರುವ ಸರಸ್ವತಿ ಮಂಗಳೂರು ನಗರ ಹೊರವಲಯದ ಕೊಣಾಜೆಯಲ್ಲಿ ವಾಸವಾಗಿದ್ದಾರೆ. ಇವರು ಕರೊನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದ ಬಂಟ್ವಾಳದ ಸಜಿಪನಡು ಗ್ರಾಮದ ಹತ್ತು ತಿಂಗಳ ಮಗುವಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದರು.
ಆದರೆ, ಈ ವಿಷಯ ತಿಳಿದ ಕೊಣಾಜೆಯ ಗ್ರಾಮಸ್ಥರು ಸರಸ್ವತಿ ಅವರ ಮನೆಗೆ ಬಂದು ಕರೊನಾ ವೈರಸ್ ಸೋಂಕಿರುವ ಮಗುವಿಗೆ ಚಿಕಿತ್ಸೆ ಕೊಟ್ಟಿದ್ದೀರಿ. ನಮಗೂ ಸೋಂಕು ಹರಡುವ ಭೀತಿ ಇದೆ. ಆದ್ದರಿಂದ, ನೀವು ಯಾವುದೇ ಕಾರಣಕ್ಕೂ ನಿಮ್ಮ ಮನೆಯಿಂದ ಹೊರಬರಬಾರದು ಎಂದು ಪಟ್ಟುಹಿಡಿದಿದ್ದಲ್ಲದೆ, ಅವರಿಗೆ ಬಹಿಷ್ಕಾರವನ್ನೂ ಹಾಕಿದರು.
ವಿಷಯ ತಿಳಿದ ಉಳ್ಳಾಲ ಶಾಸಕ ಯು.ಟಿ. ಖಾದರ್ ಕೊಣಾಜೆಗೆ ಭೇಟಿ ನೀಡಿ, ಗ್ರಾಮಸ್ಥರನ್ನು ಸಮಾಧಾನಪಡಿಸಿದ್ದಲ್ಲದೆ, ಕರೊನಾ ಸೋಂಕು ಇರುವ ಮಗುವಿಗೆ ಚಿಕಿತ್ಸೆ ನೀಡಿದ ಮಾತ್ರಕ್ಕೆ ಸೋಂಕು ತಗಲುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು ಎನ್ನಲಾಗಿದೆ.