

Minneapolis Shooter : ಅಮೆರಿಕದಲ್ಲಿ ಮತ್ತೊಂದು ಗುಂಡಿನ ದಾಳಿ ನಡೆದಿದ್ದು, ಭಾರಿ ಆತಂಕ ಸೃಷ್ಟಿಯಾಗಿದೆ. ಮಿನ್ನೇಸೋಟದ ಮಿನ್ನಿಯಾಪೋಲಿಸ್ನಲ್ಲಿರುವ ಕ್ಯಾಥೋಲಿಕ್ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮಕ್ಕಳು ದುರಂತ ಸಾವಿಗೀಡಾಗಿದ್ದಾರೆ. ಮತ್ತೊಂದು ಆಘಾತಕಾರಿ ಸಂಗತಿ ಏನೆಂದರೆ, ದಾಳಿಕೋರನ ಶಸ್ತ್ರಾಸ್ತ್ರಗಳಲ್ಲಿ ಟ್ರಂಪ್ರನ್ನು ಕೊಲ್ಲು ಮತ್ತು ನ್ಯೂಕ್ ಇಂಡಿಯಾ (ಭಾರತವನ್ನು ನಾಶ ಮಾಡಿ) ಬರಹವಿದ್ದಿದ್ದು ಪತ್ತೆಯಾಗಿದೆ.
ಈ ಘಟನೆಯಲ್ಲಿ 17 ಮಂದಿಗೆ ಗಾಯಗಳಾಗಿವೆ. ಈ 17 ಮಂದಿಯಲ್ಲಿ 14 ವಿದ್ಯಾರ್ಥಿಗಳು. ಎಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಕೋರನನ್ನು ರಾಬಿನ್ ವೆಸ್ಟ್ಮನ್ (23) ಎಂದು ಗುರುತಿಸಲಾಗಿದೆ. ನ್ಯಾಯಾಲಯದ ದಾಖಲೆಗಳ ಪ್ರಕಾರ, ವೆಸ್ಟ್ಮನ್ ಒಬ್ಬ ಮಹಿಳೆಯಾಗಿದ್ದಾಳೆ. ಆದರೆ, 2020ರಲ್ಲಿ ತನ್ನ ಮೂಲ ಹೆಸರಾದ ರಾಬರ್ಟ್ನಿಂದ ರಾಬಿನ್ ವೆಸ್ಟ್ಮನ್ ಎಂದು ಬದಲಾಯಿಸಿಕೊಂಡಿದ್ದಾಳೆ. ಮಿನ್ನಿಯಾಪೋಲಿಸ್ನಲ್ಲಿರುವ ಅನನ್ಸಿಯೇಷನ್ ಕ್ಯಾಥೋಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳು ಪ್ರಾರ್ಥನೆಯಲ್ಲಿ ಭಾಗವಹಿಸುತ್ತಿದ್ದಾಗ ಬಣ್ಣದ ಗಾಜಿನ ಕಿಟಕಿಗಳ ಮೂಲಕ ಗುಂಡು ರಾಬಿನ್ ಗುಂಡು ಹಾರಿಸಿದ್ದಾಳೆ.
ರೈಫಲ್, ಶಾಟ್ಗನ್ ಮತ್ತು ಪಿಸ್ತೂಲ್ ಎಂಬ ಮೂರು ಆಯುಧಗಳನ್ನು ಬಳಸಿ ಅನನ್ಸಿಯೇಷನ್ ಕ್ಯಾಥೋಲಿಕ್ ಶಾಲೆಯ ಚರ್ಚ್ ಮೇಲೆ ಡಜನ್ಗಟ್ಟಲೆ ಸುತ್ತು ಗುಂಡು ಹಾರಿಸಿದ್ದಾಳೆ. ಇದಾದ ನಂತರ ಆಕೆ, ಪಾರ್ಕಿಂಗ್ ಸ್ಥಳದಲ್ಲಿ ಸ್ವಯಂ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾಳೆ.
ಈಕೆ "ರಾಬಿನ್ ಡಬ್ಲ್ಯೂ" ಎಂಬ ಶೀರ್ಷಿಕೆ ಅಡಿಯಲ್ಲಿ ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದಳು. ಆ ಚಾನೆಲ್ ಅನ್ನು ಡಿಲೀಟ್ ಮಾಡುವ ಮುನ್ನ ಅದರಲ್ಲಿ ಕನಿಷ್ಠ ಎರಡು ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿತ್ತು.
ಮೊಬೈಲ್ ಫೋನ್ನಲ್ಲಿ ಚಿತ್ರೀಕರಿಸಲಾದ ಸುಮಾರು 10 ನಿಮಿಷಗಳಷ್ಟು ಉದ್ದದ ವಿಡಿಯೋವೊಂದರಲ್ಲಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಲೋಡೆಡ್ ಮ್ಯಾಗಜಿನ್ಗಳ ಸಂಗ್ರಹವನ್ನು ತೋರಿಸಿದೆ. ಆ ಮ್ಯಾಗಜಿನ್ಗಳ ಮೇಲೆ "ಡೊನಾಲ್ಡ್ ಟ್ರಂಪ್ರನ್ನು ಕೊಲ್ಲು", "ಈಗ ಟ್ರಂಪ್ರನ್ನು ಕೊಲ್ಲು", "ಇಸ್ರೇಲ್ ಬೀಳಬೇಕು" ಮತ್ತು "ಇಸ್ರೇಲ್ ಅನ್ನು ಸುಟ್ಟುಹಾಕು" ಎಂದು ಬರೆಯಲಾಗಿದೆ. ಒಂದು ಆಯುಧದ ಮೇಲೆ "ನ್ಯೂಕ್ ಇಂಡಿಯಾ" ಎಂದೂ ಬರೆಯಲಾಗಿತ್ತು. "ನಿಮ್ಮ ದೇವರು ಎಲ್ಲಿದ್ದಾನೆ?" ಮತ್ತು "ಮಕ್ಕಳಿಗಾಗಿ" ಎಂದು ಸಹ ಮ್ಯಾಗಜಿನ್ಗಳಲ್ಲಿ ಬರೆಲಾಗಿತ್ತು.
ಈ ಹಿಂದೆ ಶಾಲೆಗಳ ಮೇಲೆ ದಾಳಿ ಮಾಡಿದ ಶೂಟರ್ಗಳ ಹೆಸರುಗಳು ಕೂಡ ಮ್ಯಾಗಜೀನ್ನಲ್ಲಿ ಬರೆಯಲಾಗಿತ್ತು ಮತ್ತು ಕೆಲವು ಸಂದೇಶಗಳನ್ನು ಸಿರಿಲಿಕ್ ಭಾಷೆಯಲ್ಲಿ ಬರೆಯಲಾಗಿತ್ತು. ವಿಡಿಯೋದ ಒಂದು ಹಂತದಲ್ಲಿ, ಆ ವ್ಯಕ್ತಿಯು ಒಂದು ಸಣ್ಣ ಬಂದೂಕನ್ನು ಎತ್ತಿ ಹಿಡಿದುಕೊಂಡು, "ಇದು ನನಗಾಗಿ, ನನಗೆ ಅಗತ್ಯವಿದ್ದರೆ" ಎಂದು ಹೇಳಿದ್ದಾಳೆ.
ಇನ್ನು ಆ ಚಾನೆಲ್ನ ಎರಡನೇ ವಿಡಿಯೋ ಸುಮಾರು 20 ನಿಮಿಷಗಳಷ್ಟು ಉದ್ದವಾಗಿದ್ದು, ಎರಡು ವಿಭಿನ್ನ ಜರ್ನಲ್ಗಳನ್ನು ಒಳಗೊಂಡಿತ್ತು. ಮೊದಲನೆಯದು 150 ಕ್ಕೂ ಹೆಚ್ಚು ಪುಟಗಳನ್ನು ಹೊಂದಿದ್ದು, ಎಲ್ಲವನ್ನೂ ಸಿರಿಲಿಕ್ ವರ್ಣಮಾಲೆಯಂತೆ ಕಾಣುವ ಭಾಷೆಯಲ್ಲಿ ಬರೆಯಲಾಗಿದೆ. ಎರಡನೇ ಜರ್ನಲ್ನ ಕೊನೆಯ ಪುಟದಲ್ಲಿ 8-21-25 ದಿನಾಂಕವನ್ನು ಹೊಂದಿತ್ತು ಮತ್ತು ಆ ಜರ್ನಲ್ 60ಕ್ಕೂ ಹೆಚ್ಚು ಪುಟಗಳನ್ನು ಹೊಂದಿತ್ತು ಮತ್ತು ಅದನ್ನು ಸಂಪೂರ್ಣವಾಗಿ ಸಿರಿಲಿಕ್ನಲ್ಲಿ ಬರೆಯಲಾಗಿದೆ.
ಯುಎಸ್ ಹೋಮ್ಲ್ಯಾಂಡ್ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ಅವರು ವಿಡಿಯೋದ ಸತ್ಯಾಸತ್ಯತೆಯನ್ನು ದೃಢಪಡಿಸಿದ್ದಾರೆ. ಕೊಲೆಗಾರಳ ರೈಫಲ್ ಮ್ಯಾಗಜೀನ್ನಲ್ಲಿ 'ಮಕ್ಕಳಿಗಾಗಿ' ಮತ್ತು 'ನಿಮ್ಮ ದೇವರು ಎಲ್ಲಿದ್ದಾನೆ?' ಮತ್ತು 'ಡೊನಾಲ್ಡ್ ಟ್ರಂಪ್ ಅವರನ್ನು ಕೊಲ್ಲು' ಎಂಬ ಪದಗಳನ್ನು ಬರೆದಿದ್ದಳು ಎಂದು ಹೇಳಿದ್ದಾರೆ. ಅಲ್ಲದೆ, ಈ ಮಟ್ಟದ ಹಿಂಸೆಯನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಂದಹಾಗೆ, ಈ ವೆಸ್ಟ್ಮನ್ ಕಾನೂನುಬದ್ಧವಾಗಿ ಶಸ್ತ್ರಾಸ್ತ್ರಗಳನ್ನು ಖರೀದಿಸಿದ್ದಳು ಮತ್ತು ಆಕೆಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ. ಆಕೆ ಏಕಾಂಗಿಯಾಗಿ ಈ ಕೃತ್ಯ ಎಸಗಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯನ್ನು ಖಂಡಿಸಿ, ಮರುಕ ವ್ಯಕ್ತಪಡಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದೇಶದಲ್ಲಿ ಶೋಕಾಚರಣೆಯ ಸಂಕೇತವಾಗಿ ದೇಶಾದ್ಯಂತ ಅಮೆರಿಕದ ಧ್ವಜವನ್ನು ಅರ್ಧಕ್ಕೆ ಹಾರಿಸಲು ಆದೇಶಿಸಿದ್ದಾರೆ.
ಇನ್ನು ಇಂದು ಅನನ್ಸಿಯೇಷನ್ ಕ್ಯಾಥೋಲಿಕ್ ಶಾಲೆಯಲ್ಲಿ ನಡೆದ ಗುಂಡಿನ ದಾಳಿ ಜನವರಿಯಿಂದ ದೇಶದಲ್ಲಿ ನಡೆದ 146ನೇ ಘಟನೆಯಾಗಿದೆ ಎಂದು ವರದಿಯಾಗಿದೆ. (ಏಜೆನ್ಸೀಸ್)