

ಕಡಬ: ತಾಲೂಕಿನ ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿಶ್ರೀ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದ ಪ್ರತಿಷ್ಠಾಪನಾ ವರ್ಧಂತ್ಯುತ್ಸವ ಕ್ಷೇತ್ರದ ತಂತ್ರಿ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿ ನೇತೃತ್ವದಲ್ಲಿ, ವಿವಿಧ ವೈದಿಕ ವಿಧಿವಿಧಾನಗಳೊಂದಿಗೆ ನಡೆಯಿತು.
ಶುಕ್ರವಾರ ಭಕ್ತರು ಉಳ್ಳಾಲ್ತಿ ಅಮ್ಮನವರ ಸನ್ನಿಧಿಗೆ ಹಸಿರು ಕಾಣಿಕೆ ಸಮರ್ಪಿಸಿದರು. ಕ್ಷೇತ್ರದ ಅರ್ಚಕರು ಪೂಜೆ ನೆರವೇರಿಸಿದರು. ಬಳಿಕ ಮಹಾಪೂಜೆ ನಡೆದು ಪ್ರಸಾದ ವಿತರಿಸಲಾಯಿತು.
ಭಾನುವಾರ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಕಲಶ ಪೂಜೆ, ದೈವಗಳಿಗೆ ಶುದ್ಧಿ ಕಲಶ ಹಾಗೂ ತಂಬಿಲ ಸೇವೆ ಹಾಗೂ ನಾಗಬನದಲ್ಲಿ ನಾಗತಂಬಿಲ ನಡೆಯಿತು. ಮಧ್ಯಾಹ್ನ ಮಹಾಪೂಜೆ ನಡೆದು ಪ್ರಸಾದ ವಿತರಿಸಲಾಯಿತು. ರಾತ್ರಿ ಸಾಮೂಹಿಕ ರಂಗಪೂಜೆ ನಡೆಯಿತು.
ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್ ಸೇರಿದಂತೆ, ಆಡಳಿತ ಸಮಿತಿ, ಉತ್ಸವ ಸಮಿತಿ, ಶ್ರೀ ನೂಜಿ ಉಳ್ಳಾಲ್ತಿ ಹಿಂದು ಚಾರಿಟೆಬಲ್ ಟ್ರಸ್ಟ್‌ನ ಪದಾಧಿಕಾರಿಗಳು, ಸದಸ್ಯರು, ಕ್ಷೇತ್ರದ ಪರಿಚಾರಕರು, ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು.