

Nude Gang: ಉತ್ತರ ಪ್ರದೇಶದ ಮೀರತ್ನಲ್ಲಿ ಇಬ್ಬರು- ಮೂವರು ವ್ಯಕ್ತಿಗಳ ಗ್ಯಾಂಗ್ ಬೆತ್ತಲೆಯಾಗಿ ರಸ್ತೆಯಲ್ಲಿ ಒಂಟಿಯಾಗಿ ಹೋಗುತ್ತಿದ್ದ ಮಹಿಳೆಯರನ್ನು ಟಾರ್ಗೆಟ್ ಮಾಡಿ ನಿರ್ಜನ ಪ್ರದೇಶಗಳಿಗೆ ಎಳೆದೊಯ್ಯಲು ಪ್ರಯತ್ನಿಸಿದ ಘಟನೆ ನಾಲ್ಕನೇ ಬಾರಿ ನಡೆದಿದ್ದು, ಮಹಿಳೆಯರಲ್ಲಿ ಭೀತಿಯನ್ನು ಉಂಟು ಮಾಡಿದೆ ಎಂದು ಶನಿವಾರ (ಸೆ. 06) ವರದಿಯಾಗಿದೆ.
ದುಷ್ಕರ್ಮಿಗಳು ಬೆತ್ತಲೆಯಾಗಿ ಬಂದು ಕೃತ್ಯ ನಡೆಸಲು ಪ್ರಯತ್ನಿಸಿರುವುದರಿಂದ ಅದನ್ನು ನಗ್ನ ಗ್ಯಾಂಗ್ ಕರೆಯಲಾಗುತ್ತಿದೆ. ವಿಷಯದ ಗಂಭೀರತೆಯನ್ನು ಪರಿಗಣಿಸಿರುವ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಇನ್ನೂ ಯಾವುದೇ ಶಂಕಿತರನ್ನು ಬಂಧಿಸಿಲ್ಲ. ಆದ್ರೂ ಡ್ರೋನ್ ಬಳಸಿ ಪ್ರದೇಶವನ್ನು ಮೇಲ್ವಿಚಾರಣೆ ಮಾಡ್ತಿದ್ದಾರೆ.
ಮೀರತ್ನ ಭರಾಲಾ ಗ್ರಾಮದಲ್ಲಿ ಒಬ್ಬಂಟಿಯಾಗಿ ಮಹಿಳೆ ತನ್ನ ಕೆಲಸಕ್ಕೆ ಹೋಗುವ ವೇಳೆ ಇಬ್ಬರು ಪುರುಷರು ಆಕೆಯನ್ನು ಪಕ್ಕದ ಹೊಲಕ್ಕೆ ಎಳೆದೊಯ್ಯಲು ಪ್ರಯತ್ನಿಸಿದೆ. ಸದರಿ ಮಹಿಳೆ ಕಿರುಚಿ ಆರೋಪಿಗಳ ಹಿಡಿತದಿಂದ ತಪ್ಪಿಸಿಕೊಂಡಿದ್ದಾಳೆ. ತಕ್ಷಣ ಗ್ರಾಮಸ್ಥರು ಸ್ಥಲಕ್ಕೆ ಬಂದು ಎಲ್ಲಾ ಕಡೆಯಿಂದ ಹೊಲಗಳನ್ನು ಸುತ್ತುವರೆದ್ರೂ ಆರೋಪಿಗಳು ಪತ್ತೆಯಾಗಿರಲಿಲ್ಲ. ಮಹಿಳೆ ಅವರು ಪೂರ್ತಿ ಬೆತ್ತಲೆಯಾಗಿದ್ದರು, ಯಾವುದೇ ಬಟ್ಟೆ ಧರಿಸಿರಲಿಲ್ಲ ಎಂದು ಕುಟುಂಬಸ್ಥರಿಗೆ ಹೇಳಿದ್ದಾಳೆ.
ಇಂತಹ ಘಟನೆ ನಾಲ್ಕನೇ ಬಾರಿ ಎಂದು ಗ್ರಾಮಸ್ಥರು ತಿಳಿಸಿದ್ದು, ಈ ಹಿಂದೆ ನಡೆದ ಘಟನೆಗಳು ಸಾರ್ವಜನಿಕ ಅವಮಾನದ ಭಯದಿಂದಾಗಿ ಮಹಿಳೆಯರು ಹೇಳಿರಲಿಲ್ಲ ಎನ್ನಲಾಗಿದೆ. ಆರಂಭದಲ್ಲಿ ಗ್ರಾಮಸ್ಥರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಸದ್ಯ ಪರಿಸ್ಥಿತಿ ಕೈ ಮೀರಿ ಹೋಗಿದ್ದು, ಗ್ರಾಮದ ಮಹಿಳೆಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆರೋಪಿಗಳು ಕೇವಲ ಮಹಿಳೆಯರನ್ನು ಟಾರ್ಗೆಟ್ ಮಾಡಿರುವುದರಿಂದ ಭರಾಲ ಗ್ರಾಮಸ್ಥರು ಠಾಣೆಗೆ ದೂರು ನೀಡಿದ್ದಾರೆ.
ದೂರು ನೀಡಿದ ಬಳಿಕ ಸ್ಥಳಕ್ಕಾಗಮಿಸಿ ಪರಿಶೀಲಿಸಿದ ಪೊಲೀಸರು, ಹೊಲಗಳಲ್ಲಿ ಶೋಧ ನಡೆಸಿದ್ದಾರೆ. ಶನಿವಾರ, ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಹಲವಾರು ಗಂಟೆಗಳ ಕಾಲ ಡ್ರೋನ್‌ಗಳೊಂದಿಗೆ ಶೋಧ ಕಾರ್ಯಾಚರಣೆ ನಡೆಸಲಾಯಿತು. ಕಣ್ಗಾವಲುಗಾಗಿ ಹತ್ತಿರದ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿ ವಿಪಿನ್ ಟಾಡಾ ಮಾತನಾಡಿ, "ನಾವು ಡ್ರೋನ್‌ಗಳು ಮತ್ತು ಗ್ರಾಮಸ್ಥರ ಸಹಾಯದಿಂದ ಪ್ರದೇಶವನ್ನು ಶೋಧಿಸಿದ್ದೇವೆ. ಆದರೆ ಯಾವುದೇ ಶಂಕಿತರು ಪತ್ತೆಯಾಗಲಿಲ್ಲ. ಪ್ರದೇಶದಲ್ಲಿ ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದ್ದು, ಶಂಕಿತರಿಗಾಗಿ ಶೋಧ ನಡೆಯುತ್ತಿದೆ" ಎಂದು ಹೇಳಿದರು. (ಏಜೆನ್ಸೀಸ್)