

ರಾಣೆಬೆನ್ನೂರ: ವಿದ್ಯಾರ್ಥಿಗಳಿಗೆ ಲೋಕಸೇವೆ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯಗಳಲ್ಲಿ ಒಳಗೊಂಡಂತಹ ಅನುಭವವನ್ನು ನೀಡಲು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ಸಹಕಾರಿಯಾಗಿವೆ ಎಂದು ರಾಷ್ಟ್ರೀಯ ಸೇವಾ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ಎಚ್. ಶಿವಾನಂದ ಹೇಳಿದರು.
ತಾಲೂಕಿನ ಹಲಗೇರಿ ಗ್ರಾಮದಲ್ಲಿ ಶನಿವಾರ ಸಂಜೆ ಪಟ್ಟಣದ ಬಸವಚೇತನ ಶಿಕ್ಷಣ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮಹತ್ಮಾ ಗಾಂಧೀಜಿಯವರ ಕನಸಿನಂತೆ ಶಿಕ್ಷಣದ ಜತೆಗೆ ನಾಯಕತ್ವ ಗುಣ ಹಾಗೂ ದೇಶ ಭಕ್ತಿ ಮೂಡಿಸುವ ಕೆಲಸ ಈ ಯೋಜನೆ ಮಾಡುತ್ತದೆ. ಅದರಂತೆ ಗಾಂಧೀಜಿಯವರ ಸ್ವಚ್ಛ ಭಾರತದ ಕನಸು ನನಸಾಗಲು ಎಲ್ಲರೂ ಸ್ವಚ್ಛತೆಗೆ ಹೆಚ್ಚಿನ ಗಮನಹರಿಸಬೇಕು. ವಿದ್ಯಾರ್ಥಿಗಳು ಉತ್ತಮ ಜೀವನ ಕೌಶಲಗಳನ್ನು ರೂಪಿಸಿಕೊಂಡು ರಾಮರಾಜ್ಯ ಮಾಡಲು ಮುಂದಾಗಬೇಕು. ವಿದ್ಯಾರ್ಥಿಗಳಲ್ಲಿ ಸೂಕ್ತ ಪ್ರತಿಭೆಯನ್ನು ಹೊರಹಾಕುವುದಕ್ಕೆ ಶಿಬಿರದ ವೇದಿಕೆಯನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ದೊಡ್ಡಪೇಟೆ ವೀರಕ್ತಮಠದ ಗುರುಬಸವ ಸ್ವಾಮೀಜಿ ಮಾತನಾಡಿ, ಸ್ವಚ್ಛತೆ ಇದ್ದಲ್ಲಿ ಉತ್ತಮ ಆರೋಗ್ಯವಿರಲು ಸಾಧ್ಯವಿದೆ. ಹಳ್ಳಿಗಳು ಅಭಿವೃದ್ಧಿಯಾಗಬೇಕಾದರೆ ಪರಿಸರ ಸಂರಕ್ಷಣೆಗೆ ಯುವಕರು ಮುಂದಾಗಬೇಕು. ಶಿಬಿರಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮರ್ಥವಾಗಿ ನಿರ್ವಹಿಸಲು ಅರ್ಹರಾಗಿರುತ್ತಾರೆ. ಆರೋಗ್ಯ ಕಾಳಜಿ, ಸ್ವಚ್ಛತೆ, ಜನಜಾಗೃತಿಯಂತಹ ವಿಷಯಗಳನ್ನು ಜನರಿಗೆ ತಲುಪಿಸಲು ಶಿಬಿರಗಳು ಸಹಕಾರಿಯಾಗಿವೆ ಎಂದರು.
ಗ್ರಾಪಂ ವಿಶಾಲಾಕ್ಷಿ ಗಚ್ಚಿನಮನಿ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಸಿದ್ದಣ್ಣ ಕಡೂರ, ಸೋಮನಗೌಡ ಮಾಳಗಿ, ರಾಜೀವ ಕನ್ನಪ್ಪಳವರ, ಗಿರಿಜಾ ಬೇವಿನಹಳ್ಳಿ, ಜ್ಯೋತಿ ಕಟ್ಟಿಮನಿ, ಪವಿತ್ರಾ ಯಡಚಿ, ಹಾಲೇಶ ಓಲೇಕಾರ, ಕೃಷ್ಣ ಯರಬಾಳ ಮತ್ತಿತರರು ಉಪಸ್ಥಿತರಿದ್ದರು.