ನರೇಗಾ ಕೆಲಸದ ದಿನಗಳ ವಿಸ್ತರಣೆಗೆ ಚಿಂತನೆ

download
Published on

ಹೊನ್ನಾಳಿ: ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡಿದ್ದು, ಎಲ್ಲ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಟೀಮ್‌ವರ್ಕ್ ಆಗಿ ಕೆಲಸ ಮಾಡಲು ಸಿದ್ಧರಾಗಿದ್ದಾರೆ.
ತಾಲೂಕಿನಲ್ಲಿ ಮೆಕ್ಕೆಜೋಳ, ಹತ್ತಿ, ಶೇಂಗಾ ಹಾಗೂ ಈಗ ಬಿತ್ತನೆ ಹಂತದಲ್ಲಿರುವ ಭತ್ತವೂ ಸೇರಿ ಒಟ್ಟು 27 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಆದರೆ, ಮಳೆ ಬಾರದಿದ್ದಕ್ಕೆ 17 ಸಾವಿರ ಹೆ. ಪ್ರದೇಶದಲ್ಲಿ ಬೆಳೆ ಹಾಳಾಗಿವೆ.
ತಾಲೂಕಿನ ದಾಗಿನಕಟ್ಟೆ ಗ್ರಾಮದಲ್ಲಿ ನೀರಿನ ಸಮಸ್ಯೆ ಇದ್ದು, ಈಗಾಗಲೇ ಸ್ಥಳೀಯವಾಗಿ ಖಾಸಗಿ ಬೋರ್‌ವೆಲ್ ಮುಖಾಂತರ ನೀರು ಸರಬರಾಜು ಮಾಡಲು ಮಾತುಕತೆ ನಡೆದಿದೆ ಎಂದು ಹೊನ್ನಾಳಿ ತಾಪಂ ಇಒ ರಾಘವೇಂದ್ರ ತಿಳಿಸಿದರು.
ಕುಡಿಯುವ ನೀರಿಗೆ ಸಮಸ್ಯೆ ಎದುರಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಜತೆಗೆ, ಪಿಡಿಒಗಳು ಕೆಲಸದ ಅವಧಿಯಲ್ಲಿ ಕೇಂದ್ರ ಸ್ಥಾನ ಬಿಟ್ಟು ಹೋಗದಂತೆ ಸೂಚಿಸಿದೆ.
ನರೇಗಾ ಯೋಜನೆಯಲ್ಲಿ ದುಡಿಯುವ ಕೈಗಳಿಗೆ ಈ ಹಿಂದೆ 100 ಮಾನವ ದಿನಗಳಿಗೆ ಕೆಲಸ ಕೊಡಲಾಗುತ್ತಿತ್ತು, ಈ ಬಾರಿ 150 ಮಾನವ ದಿನ ಕೆಲಸ ಕೊಡಲು ಸರ್ಕಾರ ಚಿಂತನೆ ನಡೆಸಿದೆ.
ಮಳೆ ಬಾರದ ಹಿನ್ನೆಲೆಯಲ್ಲಿ ಈಗಾಗಲೇ ಕೃಷಿ, ಕಂದಾಯ, ತೋಟಗಾರಿಕೆ ಜಂಟಿಯಾಗಿ ಬೆಳೆ ನಷ್ಟದ ಬಗ್ಗೆ ಸಮೀಕ್ಷೆ ಮಾಡಲಾಗುತ್ತಿದೆ. ಈಗಾಗಲೇ ಶೇಂಗಾ ಬೆಳೆ ನಷ್ಟದ ಬಗ್ಗೆ ಸಮೀಕ್ಷೆ ನಡೆದಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಪ್ರತಿಮಾ ತಿಳಿಸಿದರು.


ಮುಂದಿನ ಮೂರು ದಿನದೊಳಗಾಗಿ ತಾಲೂಕಿನ ಪ್ರತಿ ಗ್ರಾಮದಲ್ಲೂ ಹಾನಿಯಾದ ಬೆಳೆಗಳ ಸಮೀಕ್ಷೆ ಮಾಡಲಾಗುವುದು. ಈವರೆಗೂ ಎಲ್ಲೂ ನೀರಿನ ಸಮಸ್ಯೆ ಇಲ್ಲ. ಆದರೆ, ನೀರಿನ ಸಮಸ್ಯೆ ಉಂಟಾಗುವುದಕ್ಕೆ ಅವಕಾಶ ಕೊಡದಂತೆ ಎಲ್ಲ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡುತ್ತೇವೆ.
ಪಟ್ಟರಾಜೇಗೌಡ, ತಹಸೀಲ್ದಾರ್, ಹೊನ್ನಾಳಿ.
………………

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net