

PF Money: ಪ್ರತಿಯೊಬ್ಬ ಉದ್ಯೋಗಿಯೂ ತಮ್ಮ ಪಿಎಫ್ ಹಣವನ್ನು ನಿವೃತ್ತಿ ಹೊಂದಿದ ಬಳಿಕವೇ ಪಡೆಯಲು ಬಯಸುತ್ತಾರೆ. ಇದಕ್ಕೆ ಕಾರಣ, ಕಷ್ಟದ ಕಾಲದಲ್ಲಿ ಅಥವಾ ಜೀವನದ ಮಹತ್ವದ ಘಟ್ಟ ತಲುಪಿದ ಸಮಯಕ್ಕೆ ಅನುಗುಣವಾಗಿ ಪಿಎಫ್ ಹಣವನ್ನು ಬಳಸಿಕೊಳ್ಳುವುದು ಉತ್ತಮ ಎಂದು ಭಾವಿಸುತ್ತಾರೆ. ಈ ಹಿಂದಿನವರೆಗೂ ಇಪಿಎಫ್ಓ ನಿಯಮ ಪ್ರಕಾರ, ನಿವೃತ್ತಿ ಹೊಂದುವವರೆಗೂ ಪಿಎಫ್ ಉಳಿತಾಯದ ಪೂರ್ಣ ಹಣವನ್ನು ಡ್ರಾ ಮಾಡಿಕೊಳ್ಳಲು ಸಾಧ್ಯವಿರಲಿಲ್ಲ. ಆದರೀಗ ಅದು ಬದಲಾಗುವ ಮುನ್ಸೂಚನೆ ಸಿಕ್ಕಿದೆ.
ವರದಿಗಳ ಪ್ರಕಾರ, ಇದು ಪಿಎಫ್ ಖಾತೆದಾರರಿಗೆ ಸಿಹಿ ಸುದ್ದಿ ಎಂದೇ ಹೇಳಬಹುದು. ಕೇಂದ್ರ ಸರ್ಕಾರವು ಉದ್ಯೋಗಿಗಳಿಗೆ ಭವಿಷ್ಯ ನಿಧಿ (ಪಿಎಫ್) ಹೊಸ ನಿಯಮಗಳನ್ನು ಶೀಘ್ರವೇ ಪರಿಚಯಿಸಲಿದೆ ಎಂದು ವರದಿಗಳು ಉಲ್ಲೇಖಿಸಿವೆ. ಪಿಎಫ್ ಖಾತೆ ಹಿಂಪಡೆಯುವಿಕೆಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೊಳಿಸಲು ಹಲವು ಸಿದ್ಧತೆಗಳು ನಡೆಯುತ್ತಿವೆ. ವರದಿಯಂತೆ, ಇದೇನಾದರೂ ಸಂಭವಿಸಿದರೆ, ಈಗ ಯಾವುದೇ ಉದ್ಯೋಗಿ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಪಿಎಫ್ ಖಾತೆಯಿಂದ ಪೂರ್ಣ ಹಣವನ್ನು ಪಡೆಯಲು ಅರ್ಹರಿರುತ್ತಾರೆ.
ಪ್ರಸ್ತುತ, ಅನಾರೋಗ್ಯ, ಮನೆ ಖರೀದಿ, ಮಕ್ಕಳ ಶಿಕ್ಷಣ ಅಥವಾ ಮದುವೆಯಂತಹ ಕೆಲವು ಕಾರಣಗಳಿಗಾಗಿ ಮಾತ್ರ ಪಿಎಫ್ನಿಂದ ಹಣವನ್ನು ಹಿಂಪಡೆಯಲು ಸಾಧ್ಯವಿದೆ. ಅಂದರೆ, ನೀವು ನಿಮ್ಮ ಪಿಎಫ್ ಖಾತೆಯಿಂದ ನಿರ್ದಿಷ್ಟ ಮಿತಿಗಿಂತ ಹೆಚ್ಚು ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. 10 ವರ್ಷಗಳ ನಿರಂತರ ಸೇವೆಯ ಬಳಿಕ, ನಿಮ್ಮ ಪಿಎಫ್ ಖಾತೆಯಲ್ಲಿರುವ ಸಂಪೂರ್ಣ ಮೊತ್ತವನ್ನು ಪಿಂಚಣಿ ರೂಪದಲ್ಲಿ ಪಡೆಯಬಹುದಾಗಿದೆ.
ಇದರ ಪ್ರಕಾರ, ಕೇಂದ್ರ ಸರ್ಕಾರವು ಒಬ್ಬ ಉದ್ಯೋಗಿ 10 ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡಿದ್ದರೆ, ಅವರು ತಮ್ಮ ಪಿಎಫ್ ಖಾತೆಯಿಂದ ದೊಡ್ಡ ಮೊತ್ತವನ್ನು (ಶೇ.60ರಿಂದ 70ರಷ್ಟು) ಏಕಕಾಲದಲ್ಲಿ ಡ್ರಾ ಮಾಡಿಕೊಳ್ಳಲು ಅವಕಾಶ ನೀಡಲು ಉದ್ದೇಶಿಸಿದೆ. ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಈ ಹೊಸ ನಿಯಮದಡಿಯಲ್ಲಿ, ಒಬ್ಬ ಉದ್ಯೋಗಿ ತನ್ನ ಸಂಪೂರ್ಣ ಉದ್ಯೋಗದ ಅವಧಿಯಲ್ಲಿ ಕೇವಲ ಮೂರು ಬಾರಿ ಮಾತ್ರ ದೊಡ್ಡ ಮೊತ್ತವನ್ನು ಪಡೆಯುಬಹುದು. ಯಾರಾದರೂ 25ನೇ ವಯಸ್ಸಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರೆ, ಅವರು 35, 45 ಮತ್ತು 55ನೇ ವಯಸ್ಸಿನಲ್ಲಿ ಈ ಬೃಹತ್ ಮೊತ್ತವನ್ನು ಹಿಂಪಡೆಯಬಹುದು.
ಪ್ರಸ್ತುತ, ಪಿಎಫ್ ಖಾತೆಯಲ್ಲಿ ಠೇವಣಿ ಇಡಲಾದ ಹೆಚ್ಚಿನ ಹಣವನ್ನು ಕೆಲಸ ಬಿಟ್ಟ ಎರಡು ತಿಂಗಳ ನಂತರ ಅಥವಾ 58ನೇ ವಯಸ್ಸಿನಲ್ಲಿ ನಿವೃತ್ತಿ ಪಡೆದಾಗ ಹಿಂಪಡೆಯಬಹುದಾಗಿದೆ.
ಇಪಿಎಫ್ಒ (ಪ್ರಾವಿಡೆಂಟ್ ಫಂಡ್ ಆರ್ಗನೈಸೇಶನ್) ನಲ್ಲಿರುವ ಸುಮಾರು 7.5 ಕೋಟಿ ರೂ. ಉದ್ಯೋಗಿಗಳು-ಖಾತೆದಾರರು ಈ ಹೊಸ ನಿಯಮದಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು. ಅವರು ಅಗತ್ಯವಿದ್ದಾಗ ಹೆಚ್ಚಿನ ಹಣವನ್ನು ಹಿಂಪಡೆಯಬಹುದು. ಪಿಎಫ್ ಖಾತೆದಾರರು ಅಗತ್ಯವಿದ್ದಾಗ ಖಾತೆಯಿಂದ ಮಧ್ಯಂತರವಾಗಿ ದೊಡ್ಡ ಮೊತ್ತವನ್ನು ಹಿಂಪಡೆಯಬಾರದು. ಅಕಸ್ಮಾತ್ ಹೀಗೆ ಮಾಡಿದ್ದಲ್ಲಿ, ನಿವೃತ್ತಿಯ ಸಮಯದಲ್ಲಿ ಅವರ ಖಾತೆಯಲ್ಲಿ ಕಡಿಮೆ ಬಡ್ಡಿ ಹಣ ಮಾತ್ರ ಉಳಿಯುತ್ತದೆ.
ನೀವು ಪಿಎಫ್ ಖಾತೆಯಲ್ಲಿ ಹಣವನ್ನು ಹೆಚ್ಚು ಸಮಯ ಇಟ್ಟುಕೊಂಡಷ್ಟೂ, ಹೆಚ್ಚಿನ ಬಡ್ಡಿಯನ್ನು ಗಳಿಸಬಹುದು. ಆಗಾಗ್ಗೆ ಅನಿವಾರ್ಯ ಕಾರಣಗಳಿಂದ ಅಥವಾ ಉದ್ದೇಶಪೂರ್ವಕಾಗಿ ಹಣವನ್ನು ಹಿಂತೆಗೆದುಕೊಳ್ಳುತ್ತಿದ್ದರೆ, ನಿಗದಿತ ಬಡ್ಡಿ ಪ್ರಯೋಜನಗಳು ಇಳಿಕೆಯಾಗುತ್ತದೆ. ಅಂದರೆ, ಠೇವಣಿ ಮಾಡಿದ ಹಣವು ಅಷ್ಟು ವೇಗವಾಗಿ ಬೆಳೆಯುವುದಿಲ್ಲ(ಏಜೆನ್ಸೀಸ್).