ಹೆರಿಗೆ ಕೋಣೆಗಳಾದ ಕಡಲ ತೀರಗಳು

See turtle egg
Published on

ಕಾರವಾರ: ಇನ್ನು ಮೂರು ತಿಂಗಳು ಜಿಲ್ಲೆಯ ಕೆಲವು ಕಡಲ ತೀರಗಳು ಹೆರಿಗೆ ಕೋಣೆಗಳಾಗಿ ಮಾರ್ಪಡಲಿವೆ.!! ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನುಬಂಧ 1 ರಲ್ಲಿ ಸಂರಕ್ಷಿಸಲ್ಪಟ್ಟ ಅಪರೂಪದ ಆಲಿವ್ ರೆಡ್ಲಿ ಕಡಲಾಮೆಗಳು ಕಡಲಿಂದ ಈಜಿ ದಡದಲ್ಲಿ ತೆವಳಿ ಬಂದು ಮೊಟ್ಟೆ ಇಡಲಾರಂಭಿಸುತ್ತವೆ.
ಜಿಲ್ಲೆಯ ದೇವಬಾಗ, ಮಾಜಾಳಿ, ಮಂಜಗುಣಿ, ಕಾರವಾರ, ಕುಮಟಾದ ಧಾರೇಶ್ವರ, ಹೊನ್ನಾವರದ ಕಾಸರಕೋಡು, ಟೊಂಕ ಕಡಲ ತೀರಗಳನ್ನು ಸಾವಿರಾರು ಕಡಲಾಮೆಗಳು ತಮ್ಮ ತವರು ಮನೆ ಎಂದು ಪರಿಗಣಿಸುತ್ತವೆ. ವರ್ಷದ ಉಳಿದೆಲ್ಲ ಕಾಲದಲ್ಲಿ ಅರಬ್ಬಿ ಸಮುದ್ರದಲ್ಲಿ ಸಾವಿರಾರು ಕಿಮೀ ದೂರು ಈಜಾಡಿಕೊಂಡಿರುವ ಇವು ಡಿಸೆಂಬರ್‌ನಿಂದ ಫೆಬ್ರವರಿ ಅಥವಾ ಮಾರ್ಚ್ವರೆಗೆ ತಮ್ಮ ತವರಿಗೆ ಮರಳಿ ಸಂತಾನಾಭಿವೃದ್ಧಿ ಮಾಡುತ್ತವೆ.
ರಕ್ಷಣೆ:
ವಿಚಿತ್ರ ಎಂದರೆ ಈ ಕಡಲಾಮೆಗಳು ಸಮುದ್ರ ದಡದಲ್ಲಿ ಸುಮಾರು 2 ಅಡಿ ಆಳ ಹೊಂಡ ತೋಡಿ ಒಮ್ಮೆಗೆ50 ರಿಂದ 100 ಮೊಟ್ಟೆ ಇಡುತ್ತವೆ. ಅದಕ್ಕೆ ಕಾವು, ನೀಡುವುದಿಲ್ಲ. ಪೋಶಣೆ ಮಾಡುವುದಿಲ್ಲ. ಮತ್ತೆ ನಿಶ್ಚಿಂತೆಯಿಂದ ಕಡಲಿನತ್ತ ಹೊರಟುಬಿಡುತ್ತವೆ.

ಕೆಲ ದಿನಗಳ ನಂತರ ಮೊಟ್ಟೆಗಳು ತಾನಾಗೇ ಒಡೆದು, ಮರಿಗಳು ತೆವಳಿ ಅಮ್ಮನನ್ನು ಹುಡುಕಿ ಕಡಲಿಗೆ ಹೋಗಬೇಕು. ಆದರೆ, ತಾಯಿ ಆಮೆಗಳ ಈ ನಿರ್ಲಕ್ಷದಿಂದ ಪ್ರತಿ ವರ್ಷ ಸಾವಿರಾರು ಮೊಟ್ಟೆಗಳು, ಪ್ರಾಣಿಗಳು, ಮನುಷ್ಯರಿಗೆ ಆಹಾರವಾಗುತ್ತಿದ್ದವು. ಕಳೆದ ಹಲವು ದಶಕಗಳಿಂದ ಅರಣ್ಯ ಇಲಾಖೆ ಹೊನ್ನಾವರದಲ್ಲಿ ಇವುಗಳ ಮೊಟ್ಟೆ ಇಟ್ಟ ಜಾಗ ಗುರುತಿಸಿ ಸುತ್ತ ಬೇಲಿ ಮಾಡಿ ರಕ್ಷಿಸುವ ಕಾರ್ಯ ಮಾಡುತ್ತಿದೆ. ಕಳೆದ ಮೂರು ವರ್ಷಗಳಿಂದ ಕಾರವಾರದಲ್ಲಿ ಅರಣ್ಯ ಇಲಾಖೆಗ ಮರೈನ್ ಇಕೋ ಸೆಲ್ ರಚನೆಯಾಗಿದ್ದು, ಕಡಲಾಮೆಗಳ ಮೊಟ್ಟೆ ರಕ್ಷಿಸುವ ಕಾರ್ಯ ನಡೆಯುತ್ತಿದೆ. ಕಡಲಾಮೆ ಮೊಟ್ಟೆ ಇಟ್ಟಿರುವುದನ್ನು ಗುರುತಿಸುವವರಿಗೆ ನಗದು ಬಹುಮಾನ ನೀಡಲಾಗುತ್ತಿದೆ.
ಕಾರವಾರ ಮರೈನ್ ಇಕೋ ಸೆಲ್‌ನಿಂದ ಮಾಜಾಳಿಯಿಂದ ಮಂಜಗುಣಿವರೆಗಿನ ಕಡಲ ತೀರದಲ್ಲಿ ಕಳೆದ ವರ್ಷ ೪೪ ಕಡಲಾಮೆಗಳ 250 ಕ್ಕೂ ಹೆಚ್ಚು ಮೊಟ್ಟೆಗಳನ್ನು ಸಂರಕ್ಷಿಸಿ, ಅವುಗಳ ಮರಿಗಳನ್ನು ಕಡಲಿಗೆ ಬಿಡಲಾಗಿತ್ತು. ಈ ಹಂಗಾಮಿನ ಮೊದಲ ಕಡಲಾಮೆ ಮೊಟ್ಟೆ ಶನಿವಾರ ದೇವಬಾಗದಲ್ಲಿ ಪತ್ತೆಯಾಗಿದ್ದು, ಅದನ್ನು ಸಂರಕ್ಷಿಸಲಾಗಿದೆ.
ಎಸಿಎಫ್ ಜಯೇಶ ನೇತೃತ್ವದಲ್ಲಿ, ಮರೈನ್ ಸೆಲ್‌ನ ಆರ್‌ಎಫ್‌ಒ ಪ್ರಮೋದ ನೇತೃತ್ವದಲ್ಲಿ ಎಆರ್‌ಎಫ್‌ಒಗಳಾದ ಚಂದ್ರಶೇಖರ ಕಟ್ಟಿಮನಿ, ಪ್ರಕಾಶ ಯರಗಟ್ಟಿ, ಗಸ್ತು ಅರಣ್ಯ ಪಾಲಕರಾದ ಮಲ್ಲೇಶ, ಹನುಮಂತ ಡೊಕ್ಕಣ್ಣವರ್, ಅರುಣ ಕುಮಾರ ಮರಳ, ಸಂಧೋಧನಾ ವಿದ್ಯಾರ್ಥಿ ಶಾನವಾಜ್, ಸ್ಥಳೀಯರಾದ ರಾಮಕೃಷ್ಣ ಸೈಲ್, ಮಹೇಶ ಸೈಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net