ತ್ಯಾಗದಲ್ಲಿ ಹೆಣ್ಣು ಪರಿಪೂರ್ಣಳು; ಕಾದಂಬರಿಕಾರ ಗಜಾನನ ಶರ್ಮಾ ಅಭಿಮತ

rashtrottana
Published on

ಬೆಂಗಳೂರು: ಬದುಕಿನಲ್ಲಿ ಎಲ್ಲವನ್ನೂ ಪಡೆದು, ಎಲ್ಲವನ್ನೂ ಸಂಬಂಧವೇ ಇಲ್ಲದಂತೆ ಬಿಟ್ಟುಹೋಗಲು ಸಾಧ್ಯವಾಗುವುದು ಬಹುಶಃ ಹೆಣ್ಣಿಗೆ ಮಾತ್ರ. ಆ ಹಿನ್ನೆಲೆಯಲ್ಲಿ ತ್ಯಾಗಕ್ಕೆ ಹೆಣ್ಣು ಪರಿಪೂರ್ಣ ಉದಾಹರಣೆ ಎಂದು ಕಾದಂಬರಿಕಾರ ಗಜಾನನ ಶರ್ಮಾ ಹೇಳಿದ್ದಾರೆ.

ರಾಷ್ಟ್ರೋತ್ಥಾನ ಪರಿಷತ್ ಏರ್ಪಡಿಸಿದ್ದ ಸಂವಾದದಲ್ಲಿ ತಮ್ಮ ಸೀ ಪ್ರಧಾನ ಐತಿಹಾಸಿಕ ಕಾದಂಬರಿಗಳ ಕುರಿತು ಶರ್ಮಾ ಮಾತನಾಡಿದರು.

ತಂದೆಮನೆಯಲ್ಲಿ ಎಲ್ಲವನ್ನೂ ಪಡೆದು, ಮದುವೆಯಾದ ಬಳಿಕ ಎಲ್ಲವನ್ನೂ ಬಿಟ್ಟುಹೋಗಿ ಪತಿಯ ಮನೆಯಲ್ಲಿ ಬದುಕನ್ನು ಕಟ್ಟಿಕೊಳ್ಳುವುದು ಸ್ತ್ರೀಗೆ ಮಾತ್ರ ಸಾಧ್ಯ. ನಾವು ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ ಗೌರವ ನೀಡುತ್ತೇವೆ, ಆದರೆ ಅವರಿಗೆ ದೊರಕಬೇಕಾದ ಸ್ಥಾನಮಾನವನ್ನು ನೀಡುವುದರಲ್ಲಿ ಸೋತಿದ್ದೇವೆ ಎಂದು ನನಗನಿಸುತ್ತದೆ. ಏಕೆಂದರೆ ಚೆನ್ನಭೈರಾದೇವಿ, ಕೆಂಪನಂಜಮ್ಮಣ್ಣಿ ಇವರೆಲ್ಲ ಇತಿಹಾಸದ ಪ್ರಧಾನವಾಹಿನಿಯಿಂದ ಕಣ್ಮರೆಯೇ ಆಗಿದ್ದಾರೆ. 36 ವರ್ಷದ ಕೆಂಪನಂಜಮ್ಮಣ್ಣಿ ಬ್ರಿಟೀಷರ ಸಂಕೋಲೆಯೊಳಗೆ ಇದ್ದೂ ಉತ್ತಮ ಆಡಳಿತ ನೀಡಿ ಮಗನಿಗೆ ಅಧಿಕಾರ ಹಸ್ತಾಂತರ ಮಾಡಿದಳು.

ಬೆಂಗಳೂರಿನಲ್ಲಿ ಸಾವಿರಾರು ಪ್ರತಿಮೆಗಳಿವೆ. ಆದರೆ ಕೆಂಪನಂಜಮ್ಮಣ್ಣಿಯ ಪ್ರತಿಮೆ ಇಲ್ಲ. ಬೆಂಗಳೂರಿಗೆ ನೀರು, ವಿದ್ಯುತ್ ಸರಬರಾಜಾಗಲು ಕಾರಣ ಕೆಂಪನಂಜಮ್ಮಣ್ಣಿ. ಮಹಾರಾಣಿ ಕಾಲೇಜು, ವಿಕ್ಟೋರಿಯಾ ಆಸ್ಪತ್ರೆ, ಟಾಟಾ ವಿಜ್ಞಾನ ಸಂಸ್ಥೆಗೆ ಜಮೀನು ನೀಡಿದ್ದು, ಶಿವನಸಮುದ್ರ ವಿದ್ಯುತ್ ಸ್ಥಾವರ ಕಟ್ಟಿಸಿದ್ದು ಇವೆಲ್ಲಕ್ಕೂ ಕೆಂಪನಂಜಮ್ಮಣ್ಣಿ ಕಾರಣ. ಈ ಎಲ್ಲ ಅಂಶಗಳನ್ನು ತಮ್ಮ ಕಾದಂಬರಿಯಲ್ಲಿ ಚಿತ್ರಿಸಿರುವ ಬಗ್ಗೆ ಗಜಾನನ ಶರ್ಮಾ ವಿವರಿಸಿದರು.

ಇತಿಹಾಸವೆಂದರೆ ನೂರಕ್ಕೆ ನೂರು ನಡೆದಂತೆ ಇರುವುದಿಲ್ಲ. ಇತಿಹಾಸವೆಂಬ ಚಿತ್ರ ಗ್ಯಾಲರಿಯಲ್ಲಿ ಕೆಲವು ನಕಲಿ ಚಿತ್ರಗಳು ಸೇರಿಕೊಂಡಿರುತ್ತವೆ. 1542ರಲ್ಲಿ ಭಟ್ಕಳವನ್ನು ಪೋರ್ಚುಗೀಸರು ಸುಟ್ಟರು. ಅದನ್ನು ನಾಲ್ಕು ಇತಿಹಾಸಕಾರರು ನಾಲ್ಕು ಬಗೆಯಲ್ಲಿ ಬರೆದಿದ್ದಾರೆ. ಚೆನ್ನಾಬೈರಾದೇವಿಯ ಬಗ್ಗೆ ವಾಸ್ತವಕ್ಕೆ ವಿರುದ್ಧವಾಗಿ ಇತಿಹಾಸ ಸೃಷ್ಟಿಯಾಗಿದೆ ಎಂದು ಶರ್ಮಾ ವೈರುಧ್ಯದ ಅಂಶಗಳನ್ನು ಉಲ್ಲೇಖಿಸಿದರು. ವಿದ್ವಾನ್ ಜಗದೀಶ ಶರ್ಮಾ ಸಂವಾದವನ್ನು ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net