ಟೆನಿಸ್ ತಾರೆ ಜೋಕೊವಿಕ್ ಮತ್ತು ಪತ್ನಿ ಜೆಲೆನಾಗೆ ಕರೊನಾ ನೆಗೆಟಿವ್​

corona
Published on

ಬೆಲ್‌ಗ್ರೇಡ್: ತಾನೇ ಆಯೋಜಿಸಿದ್ದ ಪ್ರದರ್ಶನ ಟೆನಿಸ್ ಟೂರ್ನಿಯ ವೇಳೆ ಕರೊನಾ ಸೋಂಕಿಗೆ ತುತ್ತಾಗಿದ್ದ ವಿಶ್ವ ನಂ. 1 ಟೆನಿಸ್ ಆಟಗಾರ ನೊವಾಕ್ ಜೋಕೊವಿಕ್ ಮತ್ತು ಅವರ ಪತ್ನಿ ಜೆಲೆನಾ ಅವರ ಪರೀಕ್ಷೆಯ ವರದಿ ಈಗ ನೆಗೆಟಿವ್ ಬಂದಿದೆ. 10 ದಿನಗಳ ಹಿಂದೆಯಷ್ಟೇ ಅವರಿಗೆ ಕರೊನಾ ಸೋಂಕು ದೃಢಪಟ್ಟಿತ್ತು.

ಸೆರ್ಬಿಯಾ ಮತ್ತು ಕ್ರೊವೇಷಿಯಾದಲ್ಲಿ ನಡೆದಿದ್ದ ಪ್ರದರ್ಶನ ಟೆನಿಸ್ ಟೂರ್ನಿಯಲ್ಲಿ ಆಡಿದ್ದ 4 ಆಟಗಾರರಿಗೆ ಕರೊನಾ ಸೋಂಕು ಬಂದಿತ್ತು. ಟೂರ್ನಿಯ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇದ್ದುದು ಭಾರಿ ಟೀಕೆಗೆ ಗುರಿಯಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಟೂರ್ನಿ ಆಯೋಜಕ ಜೋಕೊವಿಕ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ಬಂದಿತ್ತು. ‘ಜೋಕೊವಿಕ್ ಮತ್ತು ಅವರ ಪತ್ನಿ ಜೆಲೆನಾರ ವರದಿ ನೆಗೆಟಿವ್ ಬಂದಿದೆ. ಇಬ್ಬರಿಗೂ ಬೆಲ್‌ಗ್ರೇಡ್‌ನಲ್ಲಿ ಪರೀಕ್ಷೆ ನಡೆಸಲಾಗಿತ್ತು’ ಎಂದು ಅವರ ಮಾಧ್ಯಮ ತಂಡ ಗುರುವಾರ ತಿಳಿಸಿದೆ. ದಂಪತಿಯಲ್ಲಿ ಕರೊನಾ ಸೋಂಕಿನ ಯಾವುದೇ ಲಕ್ಷಣಗಳಿರಲಿಲ್ಲ. ಆದರೂ ಪಾಸಿಟಿವ್ ವರದಿ ಬಂದ ನಂತರ ಇಬ್ಬರೂ ಸ್ವಯಂ ಐಸೋಲೇಷನ್‌ನಲ್ಲಿದ್ದರು.

ಜೋಕೊವಿಕ್ ಅವರಲ್ಲದೆ ಟೂರ್ನಿಯಲ್ಲಿ ಆಡಿದ್ದ ಆಟಗಾರರಾದ ಗ್ರಿಗೋರ್ ಡಿಮಿಟ್ರೋವ್, ಬೋರ್ನಾ ಕೋರಿಕ್ ಮತ್ತು ವಿಕ್ಟರ್ ಟ್ರೋಯಿಕಿಗೂ ಸೋಂಕು ದೃಢಪಟ್ಟಿತ್ತು. ಜೋಕೊವಿಕ್ ಅವರ ಕೋಚ್ ಗೋರಾನ್ ಇವಾನಿಸೆವಿಕ್‌ಗೂ ಕರೊನಾ ಪಾಸಿಟಿವ್ ವರದಿ ಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net