

ಉಡುಪಿ: ಜಿಲ್ಲೆಯಲ್ಲಿ 156 ಬಿಎಸ್ ಎನ್ ಎಲ್ ಟವರ್ ಗಳಿದ್ದು ನೆಟ್ವರ್ಕ್ ಪ್ರಮಾಣ ವಿಪರೀತ ಕಡಿಮೆಯಾದ ಕಾರಣ ಲಕ್ಷಾಂತರ ಗ್ರಾಹಕರು ಬಿಎಸ್ ಎನ್ ಎಲ್ ನಿಂದ ಖಾಸಗಿ ಸಂಸ್ಥೆಯ ಸಿಮ್ ಗೆ ವರ್ಗಾವಣೆಗೊಳ್ಳುತ್ತಿದ್ದಾರೆ. ಹೀಗಾಗಿ ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ 41 ಟವರ್ ಪೈಕಿ ನಾಲ್ಕು ಟವರ್ಗಳಿಗೆ ನಿವೇಶನ ಸಮಸ್ಯೆ ಎದುರಾಗಿದ್ದು, ಈ ಬಗ್ಗೆ ತಹಶೀಲ್ದಾರ್ಗಳು ಗಮನಹರಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿನಲ್ಲಿ ಸೋಮವಾರ ದೂರಸಂಪರ್ಕ ನಿಗಮ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು. ಮುಂದಿನ ನಾಲ್ಕು ದಿವಸದಲ್ಲಿ ಒದಗಿಸುವುದಾಗಿ ಕುಂದಾಪುರದ ತಹಶಿಲ್ದಾರ್ ಶೋಭಾ ಹಾಗೂ ಬೈಂದೂರು ತಹಶೀಲ್ದಾರ್ ಪ್ರತಿಭಾ ಭರವಸೆ ನೀಡಿದರು. ಅಧಿಕಾರಿಗಳು ಎಚ್ಚೆತ್ತುಕೊಂಡು ನೆಟ್ವರ್ಕ್ ಪ್ರಮಾಣವನ್ನು ಹೆಚ್ಚು ಗೊಳಿಸುವುದು ಮತ್ತು ಯಾವ ಟವರ್ ನಲ್ಲಿ ವಿದ್ಯುತ್ ಇಲ್ಲದಿದ್ದಾಗ ಮೊಬೈಲ್ ಸಂಪರ್ಕ ಕಡಿತವಾಗುತ್ತದೆ ಅಲ್ಲಿ ಬ್ಯಾಟರಿ ಅಳವಡಿಕೆ ಮಾಡುವುದು. ಯಾವ ಗ್ರಾಮದಲ್ಲಿ ಬಿಎಸ್ ಎನ್ ಎಲ್ ಗೆ ಸಿಬ್ಬಂದಿ ಕೊರತೆ ಇರುವಲ್ಲಿ ಸ್ಥಳಿಯಾಡಳಿತ ಸಂಸ್ಥೆ, ಗ್ರಾಮ ಪಂಚಾಯಿತಿಗೆ ನಿರ್ವಹಣೆಗೆ ಬಗ್ಗೆ ಜವಾಬ್ದಾರಿ ನೀಡುವ ಬಗ್ಗೆ ಪರಿಶೀಲಿಸಬಹುದು ಎಂದು ಸಲಹೆ ನೀಡಿದರು. ಕಡಿಯಾಳಿಯಲ್ಲಿ ಬಿಎಸ್ ಎನ್ ಎಲ್ ನ ಬಹುಮಹಡಿ ಕಟ್ಟಡ ಉಪಯೋಗವಿಲ್ಲದೆ ಉಳಿದಿದ್ದು ಅದನ್ನು ಕೌಶಲ್ಯ ಅಭಿವೃದ್ಧಿ ಸೇರಿದಂತೆ ಇತರ ಸರ್ಕಾರಿ ಸೌಲಭ್ಯಗಳ ಬಳಕೆಗೆ ನೀಡಬಹುದು. ಈ ಬಗ್ಗೆ ಸದ್ಯದಲ್ಲೇ ಬೆಂಗಳೂರಿನ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಸಂಸದರು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಬಿಎಸ್ಎನ್ಎಲ್ ಅಧಿಕಾರಿಗಳು ಹಾಜರಿದ್ದರು.