ಶಾಂಭವಿ ಡ್ಯಾಂನಲ್ಲಿ ಕಸ ತೆರವಿಗೆ ಸೂಚನೆ

pdb-may31-3 dam
Published on

ಪಡುಬಿದ್ರಿ: ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಪಲಿಮಾರು ಶಾಂಭವಿ ನದಿ ಅಣೆಕಟ್ಟೆ ಬಾಗಿಲಿನಲ್ಲಿ ಭಾರಿ ಪ್ರಮಾಣದ ಕಸ ಸಂಗ್ರಹಗೊಂಡಿದ್ದು, ಈ ಹಿನ್ನೆಲೆಯಲ್ಲಿ ಅಣೆಕಟ್ಟು ಸ್ಥಳಕ್ಕೆ ಶನಿವಾರ ಭೇಟಿ ನೀಡಿದ ತಹಸೀಲ್ದಾರ್ ಪ್ರತಿಭಾ ಆರ್., ಕೂಡಲೇ ಕಸ ತೆರವುಗೊಳಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ಥಳೀಯ ಪ್ರದೇಶಗಳಿಗೆ ಭೇಟಿ ನೀಡಿದ ತಹಸೀಲ್ದಾರರು ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿದ್ದು, ನೆರೆ ನಿರ್ವಹಣೆ, ಮುಂಜಾಗರೂಕತೆ ಕುರಿತು ಅಲ್ಲಿನ ನಿವಾಸಿಗಳಿಗೆ ಅರಿವು ಮೂಡಿಸಿದರು. ಪಲಿಮಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ತೋಡುಗಳನ್ನು ಸ್ವಚ್ಛಗೊಳಿಸುವಂತೆ ಗ್ರಾಪಂ ಅಧಿಕಾರಿಗಳಿಗೆ ಸೂಚಿಸಿದರು. ಕಂದಾಯ ನಿರೀಕ್ಷಕ ಇಜ್ಜಾರ್ ಸಾಬಿರ್, ಗ್ರಾಮಾಡಳಿತಾಧಿಕಾರಿ ಸುನೀಲ್, ಸ್ಥಳೀಯರಾದ ಇಸ್ಮಾಯಿಲ್ ಇದ್ದರು.

ನೆರೆ ಎದುರಿಸಲು ಸನ್ನದ್ಧ

ಕಾಪು ತಾಲೂಕಾದ್ಯಂತ ನೆರೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ತಾಲೂಕು ಆಡಳಿತ ವತಿಯಿಂದ ಬೋಟುಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ನುರಿತ ಈಜುಗಾರರ ತಂಡ ತಯಾರಿದ್ದು, ತಹಸೀಲ್ದಾರ್ ಕಚೇರಿಯ ಸಹಾಯವಾಣಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆ. ತುರ್ತು ಸಂದರ್ಭ 0820-2551444ಗೆ ಕರೆ ಮಾಡಬಹುದು ಎಂದು ತಹಸೀಲ್ದಾರ್ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net