

| ಕಾಂತೇಶಾಚಾರ್ಯ ಕದರಮಂಡಲಗಿ
ಸತ್ರಾಜಿತರಾಜ ಸೂರ್ಯನನ್ನು ಕುರಿತು ತಪಸ್ಸು ಮಾಡಿ, ಸೂರ್ಯನಿಂದ ಸ್ಯಮಂತಕಮಣಿಯನ್ನು ಪಡೆದುಕೊಂಡ. ಭಕ್ತಿಯಿಂದ ಪೂಜೆ ಮಾಡಿದರೆ ಪ್ರತಿದಿನ 10 ತೊಲೆ ಬಂಗಾರ ನೀಡುವ ದಿವ್ಯವಾದ ಮಣಿ ಅದು. ಒಮ್ಮೆ ಸತ್ರಾಜಿತನನ್ನು ಪರೀಕ್ಷಿಸುವುದಕ್ಕಾಗಿ- ‘ಆ ಮಣಿಯನ್ನು ನನಗೆ ಕೊಡು’ ಎಂಬುದಾಗಿ ಕೃಷ್ಣ ಕೇಳಿದ. ‘ಕೃಷ್ಣ ಸಾಮಾನ್ಯ ವ್ಯಕ್ತಿಯಲ್ಲ. ಸಾಕ್ಷಾತ್ ವಿಷ್ಣುವಿನ ಅವತಾರ. ಹೀಗಾಗಿ ಭಗವಂತನೇ ಕೇಳುತ್ತಿದ್ದಾನೆ’ ಎಂಬ ಅರಿವು ಸತ್ರಾಜಿತರಾಜನಿಗೆ ಇದ್ದರೂ ಮಣಿಯ ಮೇಲಿನ ಲೋಭದಿಂದ ಕೃಷ್ಣನಿಗೆ ಮಣಿಯನ್ನು ಕೊಡಲಿಲ್ಲ. ಅದರ ಪರಿಣಾಮವಾಗಿ ಮುಂದೆ ಅನೇಕ ಅನರ್ಥಗಳನ್ನು ಅನುಭವಿಸಿದ. ತನ್ನ ಸೋದರ ಪ್ರಸೇನನನ್ನು ಕಳೆದುಕೊಂಡ. ಕೃಷ್ಣನೇ ಕದ್ದಿದ್ದಾನೆ ಎಂದು ವೃಥಾ ಅಪವಾದ ಹೊರಿಸಿ ಅಪರಾಧಕ್ಕೆ ನಾಚಿ ತಲೆತಗ್ಗಿಸಿದ. ಕೊನೆಗೆ ಸ್ಯಮಂತಕಮಣಿಯನ್ನೂ, ಅದರ ಜೊತೆಗೆ ತನ್ನ ಮಗಳನ್ನೂ ಕೃಷ್ಣನಿಗೆ ಅರ್ಪಿಸಿ ಶರಣಾದ.
ಪೌರಾಣಿಕವಾದ ಈ ಕಥೆ ಅದ್ಭುತವಾದ ಸಂದೇಶವನ್ನು ನೀಡುತ್ತದೆ. ಸೂರ್ಯಾಂತರ್ಗತ ನಾರಾಯಣರೂಪದಿಂದ ಭಗವಂತನೇ ಮಣಿಯನ್ನು ಕೊಟ್ಟದ್ದು. ಕೃಷ್ಣರೂಪದಿಂದ ಭಗವಂತನೇ ಕೇಳಿದ. ಹಾಗಾದರೆ ದೇವರೇ ಕೊಟ್ಟದ್ದನ್ನು ದೇವರಿಗೆ ಅರ್ಪಿಸಬೇಕಿತ್ತು. ಆದರೆ ಲೋಭದಿಂದ ಅರ್ಪಿಸಲಿಲ್ಲ ಸತ್ರಾಜಿತ. ಅದಕ್ಕೆ ಅನೇಕ ಅನರ್ಥಗಳು.
ನಮ್ಮ ಜೀವನದಲ್ಲಿಯೂ ನಾವು ಸತ್ರಾಜಿತನಂತೆ ಆಗಬಾರದು. ನಮ್ಮ ಹಿರಿಯರ ಪುಣ್ಯವೋ, ಹಿಂದಿನ ಪುಣ್ಯವೋ ದೇವರು ನಮಗೆ ಇಂದು ಊಟ-ಉಪಚಾರಗಳನ್ನು, ಆಹಾರ- ವಿಹಾರಗಳನ್ನು, ಮಡದಿ-ಮಕ್ಕಳನ್ನು, ಸಕಲಸಂಪತ್ತನ್ನು ಕೊಟ್ಟಿದ್ದಾನೆ. ‘ತೇನ ತ್ಯಕ್ತೇನ ಭುಂಜೀಥಾಃ’ ಎನ್ನುತ್ತದೆ ಉಪನಿಷತ್ತು. ಹಾಗೆ ದೇವರು ಅಷ್ಟೆಲ್ಲ ವಸ್ತುಗಳನ್ನು ಕೊಟ್ಟಾಗ, ದೇವರು ಕೊಟ್ಟ ವಸ್ತುಗಳನ್ನು ದೇವರಿಗೆ ಅರ್ಪಿಸಬೇಕಾದದ್ದು ನಮ್ಮ ಕೃತಜ್ಞತೆ, ಕರ್ತವ್ಯ ಕೂಡ. ಅದೆಷ್ಟೋ ಜನ ಆಹಾರ ಸಿಗದೇ ಒದ್ದಾಡುವಾಗ, ಕುಟುಂಬದೊಂದಿಗೆ ಬಿಸಿಬಿಸಿಯಾದ ರುಚಿಕರವಾದ ಊಟ-ಉಪಚಾರಗಳನ್ನು ಸೇವಿಸುವ ಸೌಭಾಗ್ಯ ಕರುಣಿಸಿದ ಆ ಭಗವಂತನಿಗೆ ಭಕ್ತಿಯಿಂದ ನಮಸ್ಕಾರವನ್ನಾದರೂ ಮಾಡಬೇಕಲ್ಲವೇ? ಮದುವೆ, ಮಕ್ಕಳು, ಉದ್ಯೋಗ, ಅಧಿಕಾರ, ಕೀರ್ತಿ ಎಲ್ಲವನ್ನೂ ಕೊಟ್ಟ ಆ ದೇವರಿಗೆ, ‘ನಂದೇನದೋ ಸ್ವಾಮಿ ನಿಂದೇ ಇದೆಲ್ಲವೂ’ ಎಂಬ ಭಾವನೆಯಿಂದ ತನು-ಮನಗಳನ್ನು ಬಾಗಿಸಿ, ವಂದಿಸಿ, ಅರ್ಪಿಸಬೇಕಲ್ಲವೇ? ಮೈತುಂಬ ತೊಡಲು ಬೆಲೆಬಾಳುವ ವಸ್ತ್ರಗಳನ್ನು ಇತ್ತು ಮಾನರಕ್ಷಕನಾದ ಮಧುಸೂದನನಿಗೆ ಕನಿಷ್ಠಪಕ್ಷ ಕೈಜೋಡಿಸಿ ವಂದಿಸಬೇಕಲ್ಲವೇ?
ಈ ಅರ್ಪಣೆಯೇ ನಮ್ಮನ್ನು ಭಾವಶುದ್ಧಿಯ ಕಡೆಗೆ ಕೊಂಡೊಯ್ಯುತ್ತದೆ. ಸ್ವಾರ್ಥವನ್ನು ಕ್ರಮೇಣ ತಗ್ಗಿಸುತ್ತ ಬರುತ್ತದೆ. ನೀಡುವ ಸುಖ ಎಷ್ಟು ಮಹೋನ್ನತ ಎಂಬುದನ್ನು ದರ್ಶಿಸುತ್ತದೆ. ಇತರರ ಬಗೆಗೂ ಚಿಂತಿಸುವಂತೆ, ಸಮಾಜದ ಕಲ್ಯಾಣಕ್ಕೆ ಶ್ರಮಿಸುವಂತೆ ಪ್ರೇರೇಪಿಸುತ್ತದೆ. ಅಷ್ಟೇ ಅಲ್ಲ, ನಾವು ಏನಾದರೂ ಪಡೆದುಕೊಂಡಿದ್ದೇ ಆದರೂ, ಅದಕ್ಕೂ ಸಾರ್ಥಕತೆ ಒದಗಿ, ದೈವಾಂಶದ ಶಕ್ತಿ ಒಡಮೂಡುತ್ತದೆ ಎಂಬುದನ್ನು ಮರೆಯುವಂತಿಲ್ಲ. ದೇವರೇ ಕೊಟ್ಟ ಮಣಿಯನ್ನು ದೇವರಿಗೆ ಅರ್ಪಿಸದೇ ಸತ್ರಾಜಿತ ಅನೇಕ ಅನರ್ಥಗಳನ್ನು ಅನುಭವಿಸಿದಂತೆ,
ದೇವರೇ ಕೊಟ್ಟ ಪದಾರ್ಥಗಳನ್ನು ದೇವರಿಗೆ ಅರ್ಪಿಸದೆ ನಾವೂ ಅನರ್ಥಗಳನ್ನು ಅನುಭವಿಸುವಂತಾಗಬಾರದು. ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎನ್ನುವುದು ನಮ್ಮ ಕಾಯಕವಾಗಬೇಕು.
(ಲೇಖಕರು ಸಂಸ್ಕೃತ ಸಂಶೋಧಕರು)