

Kim Jong Un: ಉತ್ತರ ಕೋರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ವಿದೇಶ ಪ್ರವಾಸ ಮಾಡೋದು ಅಪರೂಪ. ಆದರೆ ಇಂದು ಮಂಗಳವಾರ(ಸೆ. 02) ಚೀನಾದ ಬೀಜಿಂಗ್‌ನಲ್ಲಿ ಮಿಲಿಟರಿ ಪರೇಡ್ನಲ್ಲಿ ಭಾಗವಹಿಸಲು ತಮ್ಮ ಖಾಸಗಿ ಬುಲೆಟ್ ಪ್ರೂಫ್ ರೈಲಿನಲ್ಲಿ ಬಂದಿಳಿದಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ, ಚೀನಾದಲ್ಲಿ ಸಮಾರಂಭದಲ್ಲಿ ಭಾಗವಹಿಸಲು ಕಿಮ್ ಸೋಮವಾರ ತಡರಾತ್ರಿ ಪ್ಯೊಂಗ್ಯಾಂಗ್‌ನಿಂದ ಹೊರಟಿದ್ದು, ಜೊತೆಗೆ ವಿದೇಶಾಂಗ ಸಚಿವ ಚೋ ಸನ್-ಹುಯಿ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ತೆರಳಿದರು ಎಂದು ವರದಿ ಮಾಡಿದೆ.
2019ರಲ್ಲಿ ಚೀನಾಕ್ಕೆ ಭೇಟಿ ನೀಡಿದ್ದ ಕಿಮ್ ಜಾಂಗ್ ಉನ್ ಅದಾದ ಬಳಿಕ 2023ರಲ್ಲಿ ರಷ್ಯಾಕ್ಕೆ ಭೇಟಿ ನೀಡಿದ್ದರು. ಅದಾದ ಬಳಿಕ ಇದೇ ಮೊದಲ ಬಾರಿಗೆ ಮತ್ತೆ ಚೀನಾಕ್ಕೆ ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದೆ. ಬೀಜಿಂಗ್‌ನಲ್ಲಿ 2ನೇ ಮಹಾಯುದ್ಧದ 80 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಮೆರವಣಿಗೆಯನ್ನು ಕಿಮ್, ಕ್ಸಿ ಜಿನ್ ಪಿಂಗ್ ಮತ್ತು ಪುಟಿನ್ ಜೊತೆಗೆ ವೀಕ್ಷಿಸುವ ಸಾಧ್ಯತೆ ಇದೆ.
ಕಳೆದ ಹಲವು ವರ್ಷಗಳಿಂದ ಚೀನಾ ದೇಶ ಉತ್ತರ ಕೋರಿಯವನ್ನು ಬೆಂಬಲಿಸುತ್ತಿದೆ. ಅಮೆರಿಕಾ ಅದರ ಮಿತ್ರ ರಾಷ್ಟ್ರಗಳ ಉತ್ತರ ಕೋರಿಯಾ ಮೇಲೆ ಹಲವು ನಿರ್ಬಂಧ ವಿಧಿಸಿದ್ದು, ತಮ್ಮ ಆರ್ಥಿಕತೆಯನ್ನು ಬಲಪಡಿಸಿಕೊಂಡಿದೆ. ಇತ್ತೀಚೆಗೆ ಉತ್ತರ ಕೋರಿಯಾ ರಷ್ಯಾಕ್ಕೆ ಸಹ ಹತ್ತಿರವಾಗಿದೆ. ಉಕ್ರೇನ್ ಮತ್ತು ರಷ್ಯಾ ಯುದ್ಧದಲ್ಲಿ ರಷ್ಯಾಗೆ ಹಲವು ಶಸ್ತ್ರಾಸ್ತ್ರಗಳನ್ನ ಉತ್ತರ ಕೋರಿಯಾ ಪೂರೈಸಿದೆ ಎಂದು ದಕ್ಷಿಣ ಕೋರಿಯಾ ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಕಿಮ್ ಜಾಂಗ್-ಉನ್, ವ್ಲಾಡಿಮಿರ್ ಪುಟಿನ್ ಮತ್ತು ಕ್ಸಿ ಜಿನ್‌ಪಿಂಗ್‌ರ ಜೊತೆಗಿನ ಕಾಣಿಸಿಕೊಳ್ಳುವುದು, ಈ ಮೂವರು ನಾಯಕರ ನಡುವಿನ ಸಂಬಂಧಗಳ ಬಲವರ್ಧನೆಯನ್ನು ಒತ್ತಿಹೇಳುತ್ತದೆ. ಅಮೆರಿಕ ನೇತೃತ್ವದ ಅಂತರರಾಷ್ಟ್ರೀಯ ನಿಯಮಗಳನ್ನು ತಿರಸ್ಕರಿಸಲು ಅವರ ಜಂಟಿ ಇಚ್ಛೆಯನ್ನು ಮುಕ್ತವಾಗಿ ಚರ್ಚಿಸುವ ಸಂಕೇತವಾಗಿದೆ ಎನ್ನಲಾಗಿದೆ. ಕಿಮ್ ಗೆ ಈ ಪ್ರವಾಸವು ಉತ್ತರ ಕೊರಿಯಾದ ರಾಜತಾಂತ್ರಿಕ ಸ್ಥಾನಮಾನವನ್ನು ಉನ್ನತೀಕರಿಸುತ್ತದೆ. ಜೊತೆಗೆ ಅವರನ್ನು ವಿಶ್ವದ ಕೆಲವು ಅತ್ಯಂತ ಶಕ್ತಿಶಾಲಿ ನಾಯಕರ ಪಕ್ಕದಲ್ಲಿ ನಿಲ್ಲಿಸುತ್ತದೆ ಎನ್ನಲಾಗಿದೆ. (ಏಜೆನ್ಸೀಸ್)