

ಬೆಂಗಳೂರು: ಬಡ್ತಿ ನೀಡಿಕೆಯಲ್ಲಿ ವಿಳಂಬ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸದೇ ಇರುವ ಸರ್ಕಾರದ ಧೋರಣೆ ಖಂಡಿಸಿ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಸೆ.8 ರಿಂದ ಅಸಹಕಾರ ಚಳಚಳಿ ನಡೆಸಲಿದೆ.
ಜನರ ಅಗತ್ಯ ಸೇವೆ ಮಾತ್ರ ನೀಡುತ್ತೇವೆ. ಎಲ್ಲ ಆನ್‌ಲೈನ್ ಸೇವೆ ಬಂದ್ ಮಾಡುತ್ತೇವೆ ಎಂದು ಸಂಘ ಹೇಳಿದೆ.
ಜೇಷ್ಠತಾ ಪಟ್ಟಿ ವಿಚಾರದಲ್ಲಿ ಹೈಕೋರ್ಟ್ ಕೊಟ್ಟಿರುವ ಕಾಲಮಿತಿ ಆದೇಶವನ್ನು ಸರ್ಕಾರ ಸ್ಪಷ್ಟವಾಗಿ ಉಲ್ಲಂಘನೆ ಮಾಡಿದೆ. ವರ್ಗಾವಣೆ ಪ್ರಕ್ರಿಯೆ ಸರಿಯಾಗಿ ನಿಭಾಯಿಸದೇ ಗೊಂದಲ ಉಂಟು ಮಾಡಲಾಗಿದೆ. ಎಲ್ಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳನ್ನು ಬಿ ದರ್ಜೆಗೆ ಮೇಲ್ದರ್ಜೆಗೇರಿಸದೇ ಇರುವುದು, ಸೇವಾ ವಿಷಯಗಳನ್ನು ಸಕಾಲ ವ್ಯಾಪ್ತಿಗೆ ಸೇರಿಸದೆ ಇರುವುದು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳನ್ನು ನೇಮಕ ಮಾಡದೇ ಕೆಲಸದ ಒತ್ತಡ ಹೇರುತ್ತಿರುವುದನ್ನು ಖಂಡಿಸಿ ಈ ಅಸಹಕಾರ ಚಳವಳಿ ನಡೆಸಲು ನಿರ್ಧರಿಸಿರುವುದಾಗಿ ಸಂಘದ ಅಧ್ಯಕ್ಷ ರಾಜು ವಾರದ ತಿಳಿಸಿದ್ದಾರೆ.
ಆನ್‌ಲೈನ್ ಸೇವೆ ಬಂದ್
ಸೆ.8ರ ಒಳಗಾಗಿ ನಮ್ಮ ಬೇಡಿಕೆ ಈಡೇರಿಸದೇ ಇದ್ದರೆ ಪಿಡಿಒಗಳು ರಾಜ್ಯ, ಜಿಲ್ಲೆ ಹಾಗೂ ತಾಲೂಕು ವಾಟ್ಸ್ ಅಪ್/ಟೆಲಿಗ್ರಾಂ ಗುಂಪುಗಳಿಂದ ಹೊರ ಬರುವುದರೊಂದಿಗೆ ಆನ್‌ಲೈನ್ ಸೇವೆಗಳನ್ನು ಸ್ಥಗಿತಗೊಳಿಸಿ ಮೇಲಧಿಕಾರಿಗಳು ಕರೆಯುವ ಸಭೆಗೂ ಗೈರು ಹಾಜರಾಗುತ್ತೇವೆ. ಜನರ ಮೂಲಸೌಲಭ್ಯಗಳನ್ನು ಮಾತ್ರ ನೀಡುವುದರೊಂದಿಗೆ ಇಲಾಖೆಯೊಂದಿಗೆ ಅಸಹಕಾರ ಪ್ರತಿಭಟನೆ ಆರಂಭಿಸುತ್ತೇವೆ. ಅಲ್ಲದೆ, ಸೆ.14 ರಂದು ಬೆಂಗಳೂರಿನ ಪಂಚಾಯತ್ ರಾಜ್ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಸಂಘದ ಎಚ್ಚರಿಸಿದೆ.
ಇತರ ಪ್ರಮುಖ ಬೇಡಿಕೆಗಳು
-ಪಿಡಿಒಗಳ ಜೇಷ್ಠತೆಗೆ ಸಂಬಂಧಿಸಿದಂತೆ ಅಡ್ವೋಕೇಟ್ ಜನರಲ್ ನೇತೃತ್ವದಲ್ಲಿ ಸಮಿತಿ ಕೊಟ್ಟಿರುವ ವರದಿ ಸರ್ಕಾರ ನ್ಯಾಯಾಲಯಕ್ಕೆ ಹಾಜರುಪಡಿಸಿ 17 ಜಿಲ್ಲೆಯ 347 ಪಿಡಿಒಗಳಿಗೆ ನ್ಯಾಯ ಒದಗಿಸಬೇಕು.
-ಇಲಾಖೆ ವಿಚಾರಣೆ ನಿಗದಿತ ಅವಧಿಯಗಳಲ್ಲಿ ಪೂರ್ಣಗೊಳಿಸಬೇಕು.
-ರಜೆ ದಿನಗಳಲ್ಲಿ ಕರ್ತವ್ಯ ನಿರ್ವಹಿಸುವಂತೆ ಸಿಇಒ ಹಾಗೂ ಇಒಗಳು ಆದೇಶ ಮಾಡುವುದನ್ನು ತಡೆಯಬೇಕು.
-ಕರ್ತವ್ಯ ಅವಧಿ ಹೊರತುಪಡಿಸಿ ಸಭೆ ಮಾಡಬಾರದು.
-ಯೋಜನೆಗಳಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಬೇಕು.
-ಸಾರ್ವಜನಿಕರು ನೀಡುವ ದಾಖಲೆ ರಹಿತ ದೂರುಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡು ಮಾನಸಿಕ ಹಿಂಸೆ ನೀಡುವುದನ್ನು ನಿಲ್ಲಿಸಬೇಕು.
-ಪಂಚತಂತ್ರ ತಂತ್ರಾಂಶ ಹಾಗೂ ಆಪ್‌ನಲ್ಲಿರುವ ದೋಷಗಳನ್ನು ಸರಿಪಡಿಸಬೇಕು.
-----------------------