

ಬೆಂಗಳೂರು: ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ, ಸರ್ಕಾರಿ ಆಸ್ಪತ್ರೆಗಳಿಗೆ ಕೀಟನಾಶಕ ಸರಬರಾಜು ಮಾಡಿ ಜನರ ಪ್ರಾಣಕ್ಕೆ ಕುತ್ತು ತಂದರೂ ಆಶ್ಚರ್ಯ ಪಡಬೇಕಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
"ಮನುಷ್ಯರ ಬಳಕೆಗೆ ಪಶುಗಳ ಔಷಧ ಪೂರೈಕೆ' ಶೀರ್ಷಿಕೆಯಡಿ ವಿಜಯವಾಣಿ ಮುಖಪುಟದಲ್ಲಿ ಶನಿವಾರ ವಿಶೇಷ ವರದಿ ಪ್ರಕಟಗೊಂಡ ಬಳಿಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಅಶೋಕ್, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಶುಗಳ ಔಷಧವನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಪೂರೈಕೆ ಮಾಡಿ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್ ಸರ್ಕಾರ, ನಾಳೆ ಸರ್ಕಾರಿ ಆಸ್ಪತ್ರೆಗಳಿಗೆ ಕೀಟನಾಶಕ ಸರಬರಾಜು ಮಾಡಿ ಜನರ ಪ್ರಾಣಕ್ಕೆ ಕುತ್ತು ತಂದರೂ ಅಚ್ಚರಿಪಡಬೇಕಿಲ್ಲ. "ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲೊಂದು ಎಡವಟ್ಟುಗಳಿಂದಲೇ ಸುದ್ದಿಯಾಗಿರುವ "ಇಂಡಿಯನ್ ನ್ಯಾಷನಲ್ ಕಾಂಗ್ರೆಸ್-ಕರ್ನಾಟಕ ಸರ್ಕಾರ'ಕ್ಕೆ ಯಾವ ಇಲಾಖೆಯಲ್ಲೂ ಆಡಳಿತದ ಮೇಲೆ ನಿಯಂತ್ರಣವೇ ಇಲ್ಲದೆ ರಾಜ್ಯದಲ್ಲಿ ಅರಾಜಕತೆಯ ಪರಿಸ್ಥಿತಿ ಸೃಷ್ಟಿಯಾಗಿದೆ' ಎಂದು ತಮ್ಮ ೇಸ್ಬುಕ್ ಪೇಜ್ನಲ್ಲಿ ಬರೆದುಕೊಂಡಿದ್ದಾರೆ.