ಇಂಗ್ಲೆಂಡ್​ ವಿರುದ್ಧ ಏಕದಿನ ಸರಣಿಯಿಂದ ರೋಹಿತ್​, ಕೊಹ್ಲಿಗೆ ವಿಶ್ರಾಂತಿ ಇಲ್ಲ; ಬುಮ್ರಾಗೆ ಮಾತ್ರ ವಿನಾಯಿತಿ?

web trio
Published on

ನವದೆಹಲಿ: ಕಳೆದ 4 ತಿಂಗಳ ಅವಧಿಯಲ್ಲಿ 10 ಟೆಸ್ಟ್​ ಪಂದ್ಯಗಳನ್ನು ಆಡಿದ ನಂತರ ಟೀಮ್​ ಇಂಡಿಯಾ ಇನ್ನು ಸೀಮಿತ ಓವರ್​ ಕ್ರಿಕೆಟ್​ನತ್ತ ಗಮನ ಕೇಂದ್ರೀಕರಿಸಲಿದೆ. ಐಸಿಸಿ ಚಾಂಪಿಯನ್ಸ್​ ಟ್ರೋಫಿಗೆ ಉತ್ತಮ ಪೂರ್ವ ಸಿದ್ಧತೆ ನಡೆಸುವುದು ಈ ಪೈಕಿ ಪ್ರಮುಖವೆನಿಸಿದೆ. ಹೀಗಾಗಿ ಭಾರತ ತಂಡ ಫೆಬ್ರವರಿ 6ರಿಂದ 12ರವರೆಗೆ ತವರಿನಲ್ಲಿ ಪ್ರವಾಸಿ ಇಂಗ್ಲೆಂಡ್​ ವಿರುದ್ಧ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ, ಚಾಂಪಿಯನ್ಸ್​ ಟ್ರೋಫಿಯಲ್ಲಿ ಆಡುವ ಬಹುತೇಕ ತಂಡವನ್ನೇ ಕಣಕ್ಕಿಳಿಸಲಿದ್ದು, ವೇಗಿ ಜಸ್​ಪ್ರೀತ್​ ಬುಮ್ರಾಗೆ ಮಾತ್ರ ವಿನಾಯಿತಿ ಸಿಗಲಿದೆ ಎನ್ನಲಾಗಿದೆ. ಇದರಿಂದಾಗಿ ನಾಯಕ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಸಹಿತ ಬೇರಾವುದೇ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗುವುದಿಲ್ಲ. ಶ್ರೇಯಸ್​ ಅಯ್ಯರ್​, ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಮತ್ತು ಅರ್ಷದೀಪ್​ ಸಿಂಗ್​ ಕೂಡ ಭಾರತ ತಂಡದ ಪರ ಮರಳಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.

ಹಾರ್ದಿಕ್​ ಪಾಂಡ್ಯ 2023ರ ತವರಿನ ಏಕದಿನ ವಿಶ್ವಕಪ್​ನಲ್ಲಿ ಬಾಂಗ್ಲಾದೇಶ ವಿರುದ್ಧ ಅ.19ರಂದು ಪುಣೆಯಲ್ಲಿ ಆಡಿದ ಬಳಿಕ ಭಾರತ ಪರ ಯಾವುದೇ ಏಕದಿನ ಪಂದ್ಯ ಆಡಿಲ್ಲ. ನಂತರದಲ್ಲಿ ಭಾರತ ಪರ ಟಿ20 ಪಂದ್ಯಗಳನ್ನಷ್ಟೇ ಆಡುತ್ತ ಬಂದಿದ್ದಾರೆ. ಇತ್ತೀಚೆಗೆ ವಿಜಯ್​ ಹಜಾರೆ ಟ್ರೋಫಿ ದೇಶೀಯ ಟೂರ್ನಿಯಲ್ಲಿ ಆಡಿ ಏಕದಿನ ಕ್ರಿಕೆಟ್​ಗೆ ಫಿಟ್​ ಆಗಿರುವುದಾಗಿ ಹಾರ್ದಿಕ್​ ನಿರೂಪಿಸಿದ್ದಾರೆ. ಇನ್ನೂ ಶ್ರೇಯಸ್​ ಅಯ್ಯರ್​ ಕೂಡ ಇತ್ತೀಚೆಗೆ ವಿಜಯ್​ ಹಜಾರೆ ಟ್ರೋಫಿಯಲ್ಲಿ ಮುಂಬೈ ಪರ 5 ಪಂದ್ಯ ಆಡಿ 2 ಶತಕ ಸಿಡಿಸಿದ್ದರು. ಹೀಗಾಗಿ ಅವರೂ ಉತ್ತಮ ಲಯದಲ್ಲಿರುವುದು ಸ್ಪಷ್ಟವಾಗಿದೆ.

ಇಂಗ್ಲೆಂಡ್​ ವಿರುದ್ಧ ಏಕದಿನ ಸರಣಿಗೆ ಮುನ್ನ ಜನವರಿ 22ರಿಂದ 5 ಪಂದ್ಯಗಳ ಟಿ20 ಸರಣಿ ನಡೆಯಲಿದ್ದು, ಸೂರ್ಯಕುಮಾರ್​ ಯಾದವ್​ ಸಾರಥ್ಯದ ಚುಟುಕು ಕ್ರಿಕೆಟ್​ ತಂಡದಲ್ಲಿ ಬಹುತೇಕ ಯುವ ಆಟಗಾರರೇ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಕಳೆದ ವರ್ಷ ಟಿ20 ವಿಶ್ವಕಪ್​ ನಂತರ ಬಾಂಗ್ಲಾ, ದ. ಆಫ್ರಿಕಾ ವಿರುದ್ಧದ ಸರಣಿಗಳಲ್ಲಿ ಕಾಣಿಸಿಕೊಂಡ ಐಪಿಎಲ್​ ತಾರೆಯರೇ ಮತ್ತೆ ಅವಕಾಶ ಪಡೆಯಬಹುದು ಎನ್ನಲಾಗಿದೆ.

ಸಂಭಾವ್ಯ ಏಕದಿನ ತಂಡ: ರೋಹಿತ್​ ಶರ್ಮ (ನಾಯಕ), ಶುಭಮಾನ್​ ಗಿಲ್​, ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​, ಕೆಎಲ್​ ರಾಹುಲ್​, ರಿಷಭ್​ ಪಂತ್​ (ವಿ.ಕೀ), ಹಾರ್ದಿಕ್​ ಪಾಂಡ್ಯ, ನಿತೀಶ್​ ಕುಮಾರ್​ ರೆಡ್ಡಿ, ರವೀಂದ್ರ ಜಡೇಜಾ, ವಾಷಿಂಗ್ಟನ್​ ಸುಂದರ್​, ಅರ್ಷದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮದ್​ ಸಿರಾಜ್​, ಅಕ್ಷರ್​ ಪಟೇಲ್​/ಕುಲದೀಪ್​ ಯಾದವ್​, ಯಶಸ್ವಿ ಜೈಸ್ವಾಲ್​.

ಚಾಂಪಿಯನ್ಸ್​ ತಂಡ ಆಯ್ಕೆಗೆ 12ರ ಗಡುವು

ಫೆ..19ರಿಂದ ಪಾಕಿಸ್ತಾನ-ಯುಎಇಯಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿಗೆ 15 ಆಟಗಾರರ ತಂಡಗಳ ತಾತ್ಕಾಲಿಕ ಪಟ್ಟಿಯನ್ನು ಐಸಿಸಿಗೆ ಸಲ್ಲಿಸಲು ಜನವರಿ 12 ಅಂತಿಮ ದಿನಾಂಕವಾಗಿದೆ. ಆದರೆ ಫೆ. 13ರವರೆಗೆ ಈ ತಂಡದಲ್ಲಿ ಬದಲಾವಣೆ ಮಾಡಲು ಅವಕಾಶವಿರುತ್ತದೆ. ನಂತರ ಬದಲಾವಣೆ ಮಾಡಬೇಕಾದರೆ ಟೂರ್ನಿಯ ತಾಂತ್ರಿಕ ಸಮಿತಿಯ ಅನುಮತಿ ಪಡೆಯಬೇಕಾಗುತ್ತದೆ. ಇನ್ನು ಜ.12ಕ್ಕೆ ಮುನ್ನ ಆರಿಸಿದ ತಾತ್ಕಾಲಿಕ ತಂಡವನ್ನು ಬಹಿರಂಗಪಡಿಸುವುದು ಅಥವಾ ಗೌಪ್ಯವಾಗಿಡುವುದು ಆಯಾ ದೇಶದ ಕ್ರಿಕೆಟ್​ ಮಂಡಳಿಗಳಿಗೆ ಬಿಟ್ಟ ವಿಚಾರವಾಗಿರುತ್ತದೆ. ಇಂಗ್ಲೆಂಡ್​ ಮಾತ್ರ ಈಗಾಗಲೆ ಚಾಂಪಿಯನ್ಸ್​ ಟ್ರೋಫಿಗೆ ತಂಡವನ್ನು ಪ್ರಕಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net