

ಗಂಗಾಧರ್ ಬೈರಾಪಟ್ಟಣ ರಾಮನಗರ
ನಿವೇಶನ ಖರೀದಿದಾರರ ಸಮಸ್ಯೆಗೆ ಮುಕ್ತಿ ನೀಡಬೇಕಾದ ಸರ್ಕಾರ ಅಡ್ಡಗೋಡೆ ಮೇಲೆ ದೀಪವಿಟ್ಟು ಹೊರಡಿಸಿರುವ ಆದೇಶ ಪ್ರಾಧಿಕಾರ ಮತ್ತು ಸಾರ್ವಜನಿಕರ ನಡುವಿನ ಸಂಘರ್ಷಕ್ಕೆ ಮುನ್ನುಡಿ ಬರೆದಿದೆ. ಲಕ್ಷಾಂತರ ರೂ. ಕೊಟ್ಟು ಅಂದಿನ ರಾಮನಗರ - ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಖರೀದಿ ಮಾಡಿದವರು ಶುದ್ಧ ಕ್ರಯಪತ್ರ ಮಾಡಿಕೊಡುವಂತೆ ಹಿಂದಿನಿಂದಲೂ ಹೋರಾಟ ಮಾಡುತ್ತಲೇ ಬಂದಿದ್ದು, ಇದರ ಫಲವಾಗಿ ಇತ್ತೀಚೆಗೆ ಸರ್ಕಾರ ಶುದ್ಧ ಕ್ರಯಪತ್ರ ಮಾಡಿಕೊಡುವಂತೆ ಆದೇಶ ಮಾಡಿದೆಯಾದರೂ ವಿಧಿಸಿರುವ ನಿಯಮಗಳು ಸಮಸ್ಯೆಗೆ ಪರಿಹಾರ ದೊರಕಿಸುವ ಬದಲಿಗೆ ಸಮಸ್ಯೆ ತಂದೊಡ್ಡಿವೆ.
ಹಿಂದಿನ ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸುಮಾರು 20 ವರ್ಷಗಳ ಹಿಂದೆ ರಾಮನಗರದ ಜೀಗೇನಹಳ್ಳಿ, ಅರ್ಚಕರಹಳ್ಳಿ ಹಾಗೂ ಚನ್ನಪಟ್ಟಣದ ಸುಣ್ಣಘಟ್ಟ ಬಳಿ ಕ್ರಮವಾಗಿ ಅರ್ಕಾವತಿ ಬಡಾವಣೆ, ಹೆಲ್ತ್ ಸಿಟಿ ಬಡಾವಣೆ ಮತ್ತು ಕಣ್ವ ವಸತಿ ಬಡಾವಣೆ ನಿರ್ಮಾಣ ಮಾಡಲಾಗಿದೆ. ಈ ಮೂರು ಬಡಾವಣೆಗಳಿಂದ ಒಟ್ಟು 1,837 ನಿವೇಶನಗಳನ್ನು ಸಿದ್ಧಪಡಿಸಿ, ಇವುಗಳಲ್ಲಿ 1,246 ನಿವೇಶನಗಳನ್ನು ಹಂಚಿಕೆ ಮೂಲಕ ಹಾಗೂ 430 ನಿವೇಶನಗಳನ್ನು ಹರಾಜಿನ ಮೂಲಕ ಮಾರಾಟ ಮಾಡಲಾಗಿದೆ.
2009ರಿಂದ ನಂತರದ ವರ್ಷಗಳಲ್ಲಿ ಮಾರಾಟ ಮಾಡಲಾದ ನಿವೇಶನಗಳಿಗೆ ಖರೀದಿ ಮಾಡಿದ 10 ವರ್ಷಗಳ ನಂತರ ಶುದ್ಧ ಕ್ರಯಪತ್ರ ನೀಡಬೇಕಿದೆ. ಆದರೆ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದ ನಕ್ಷೆಯನ್ನು ಹೊಂದದೇ ಇರುವುದು ಸೇರಿ ಹಲವಾರು ನ್ಯೂನ್ಯತೆಗಳು ಇರುವ ಕಾರಣ ಶುದ್ಧ ಕ್ರಯಪತ್ರ ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಕಷ್ಟ ಕಾಲಕ್ಕೆ ನೆರವಿಗೆ ಬರಬೇಕಾದ ನಿವೇಶನಗಳು ಖರೀದಿದಾರರ ನೋವಿನ ಭಾಗವಾಗಿವೆ.
ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಇದೇ ನ.4ರಂದು ಆದೇಶ ಮಾಡಿದ್ದಾರೆ. ಈ ಆದೇಶ ಸಮಸ್ಯೆಗೆ ಪರಿಹಾರ ಕಲ್ಪಿಸುವ ಬದಲಿಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಇದೆ. ಒಂದೆಡೆ ಖರೀದಿದಾರರಿಗೆ ನಿಯಮಾನುಸಾರ ಶುದ್ಧ ಕ್ರಯಪತ್ರ ಮಾಡಿಕೊಡಲು ಕ್ರಮ ವಹಿಸುವಂತೆ ನಿರ್ದೇಶನ ನೀಡಿದ್ದರೆ, ಮತ್ತೊಂದೆಡೆ ವಿವಾದಿತ ಲೇಔಟ್‌ಗಳಿಗೆ ಸಂಬಂಧಿಸಿದಂತೆ ಜಮೀನುಗಳು ಹಾಗೂ ನಿವೇಶನ ನಕ್ಷೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾನೂನು ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆಯೂ ಪರಿಶೀಲಿಸಿ ವರದಿ ನೀಡುವಂತೆಯೂ ಸೂಚನೆ ನೀಡಿದ್ದಾರೆ.
ಮಾಲೀಕತ್ವ ಹಾಗೂ ನಕ್ಷೆ ಮಂಜೂರಾತಿಯನ್ನು ಪಡೆಯದೇ ಏನನ್ನೂ ಮಾಡಲೂ ಸಾಧ್ಯವಿಲ್ಲ ಎಂದು ತಿಳಿದಿದ್ದರೂ ನಿವೇಶನದಾರರ ಕಣ್ಣೊರೆಸುವ ಆದೇಶವನ್ನು ಹೊರಡಿಸುವ ಮೂಲಕ ಸ್ಥಳೀಯ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕುವಂತಾಗಿದೆ.
ಚನ್ನಪಟ್ಟಣದ ಕಣ್ವ ಬಡಾವಣೆಯನ್ನು 49 ಎಕರೆ 2 ಗುಂಟೆ, ರಾಮನಗರದ ಜೀಗೇನಹಳ್ಳಿ ಬಡವಾಣೆಯನ್ನು 43 ಎಕರೆ 29 ಗುಂಟೆ ಮತ್ತು ಹೆಲ್ತ್ ಸಿಟಿ ಬಡಾವಣೆಯನ್ನು 7 ಎಕರೆ 36 ಗುಂಟೆ ಜಮೀನಿನಲ್ಲಿ ನಿರ್ಮಾಣ ಮಾಡಲಾಗಿದೆ. ಈ ಮೂರು ಲೇಔಟ್‌ಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತವೆ. ಇವುಗಳಲ್ಲಿ ಕಣ್ವ ಬಡಾವಣೆ ಮತ್ತು ರಾಮನಗರದ ಜೀಗೇನಹಳ್ಳಿ ಲೇಔಟ್ ನಿವೇಶನಗಳು ಅಧಿಕೃತ ನಕ್ಷೇಯೇ ಇಲ್ಲದೆ ಹಂಚಿಕೆ ಆಗಿವೆ. ರಾಮನಗರದ ಹೆಲ್ತ್ ಸಿಟಿ ಲೇಔಟ್‌ನ ಭೂ ಮಾಲೀಕತ್ವ ಮೂಲ ಖಾತೆದಾರರ ಹೆಸರಲ್ಲೇ ಇರುವುದು ದೊಡ್ಡ ಸಮಸ್ಯೆಯನ್ನು ತಂದೊಡ್ಡಿದೆ.
ಸರ್ಕಾರವೇನೋ ನಿಯಮಾನುಸಾರ ಕ್ರಯಪತ್ರ ಮಾಡಿಕೊಡುವಂತೆ ಸೂಚನೆ ನೀಡಿದೆ. ಇದು ನಿವೇಶನ ಖರೀದಿದಾರರಿಗೆ ಸಂತಸ ತಂದಿದೆ. ಆದರೆ ವಿಧಿಸಿರುವ ನಿಯಮಗಳು ಇದಕ್ಕೆ ಅವಕಾಶ ನೀಡದ ಬಗ್ಗೆ ಮನವರಿಕೆ ಮಾಡಿಕೊಡಬೇಕಾದ ಅನಿವಾರ್ಯತೆ ಪ್ರಾಧಿಕಾರಕ್ಕೆ ಎದುರಾಗಿದೆ. ಸರ್ಕಾರ ಆದೇಶ ಮಾಡಿದ್ದರೂ ಕ್ರಯಪತ್ರ ಕೊಡುತ್ತಿಲ್ಲ ಎಂದು ಪ್ರಾಧಿಕಾರದ ವಿರುದ್ಧ ದೂರುತ್ತಿದ್ದರೆ, ಆದೇಶದ ಗೊಂದಲ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
* ಹಾಲಿ ಸ್ಥಿತಿಯಲ್ಲಿರುವಂತೆ ನೆಲದ ಮೇಲೆ ಅಳವಡಿಸಿ ಅಭಿವೃದ್ಧಿಪಡಿಸಿರುವಂತೆ ಕೆಯುಡಿಎ ಕಾಯ್ದೆ 1987ಕಲಂ 16(1)ರಂತೆ ಸಿಎ ಮತ್ತು ಉದ್ಯಾನವನ ನಿವೇಶನ ಖಾತ್ರಿಪಡಿಸಿಕೊಳ್ಳಬೇಕು
* ಹಂಚಿಕೆ ಪಟ್ಟಿಯಲ್ಲಿರುವ ನಿವೇಶನ ಖರೀದಿದಾರರು ಪ್ರಾಧಿಕಾರಕ್ಕೆ ಸಂಪೂರ್ಣ ಹಣ ಪಾವತಿ ಮಾಡಿದ್ದಾರೆಯೇ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಬೇಕು
* ಸರ್ವೇ ನಂಬರ್‌ಗಳು ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಹೆಸರಲ್ಲಿ ಇರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು * ಮೂರು ಲೇಔಟ್‌ಗಳ ನ್ಯೂನ್ಯತೆಗಳ ಕುರಿತು ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಕಾಯ್ದೆ ಮತ್ತು ನಿಯಮಗಳ ಅನುಸಾರ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚನೆ
* ವಿವಾದಿತ ನಿವೇಶನಗಳು ಇನ್ನೂ ಪ್ರಾಧಿಕಾರದ ಹೆಸರಿಗೆ ಖಾತೆ ಆಗಿಲ್ಲ, ಇದು ಆಗದೆ ಕ್ರಯಪತ್ರ ನೀಡುವುದು ಕಷ್ಟ ಸಾಧ್ಯ
* ಹಾಲಿ ಇರುವ ನಿವೇಶನಗಳನ್ನು ಗುರ್ತಿಸಿಕೊಳ್ಳಬೇಕಾದರೆ ಗಡಿ ಗುರುತು, ನಿವೇಶನಗಳಲ್ಲಿ ಬೆಳೆದಿರುವ ಜಂಗಲ್ ಸ್ವಚ್ಛತೆ ಮಾಡಿಸಬೇಕು, ಇದು ಸದ್ಯಕ್ಕೆ ಆಗದ ಕೆಲಸ.
* ಒಂದು ವೇಳೆ ಲೇಔಟ್ ಜಮೀನು ಒತ್ತುವರಿ ಆಗಿದ್ದರೆ ಏನು ಮಾಡಬೇಕು ಎನ್ನುವ ಗೊಂದಲ
* ಪ್ರಾಧಿಕಾರದ ಬಳಿ ಹಣ ಪಾವತಿ ಮಾಡಿರುವ ಖರೀದಿದಾರರ ಸಂಪೂರ್ಣ ಮಾಹಿತಿಯೇ ಇಲ್ಲ
* ಬ್ಯಾಂಕ್‌ಗೆ ನಿವೇಶನ ಖರೀದಿದಾರರು ಹಣ ಸಂದಾಯ ಮಾಡಿದ್ದರಾದರೂ, ಇದರಲ್ಲಿ 10ರಲ್ಲಿ ಇಬ್ಬರು ನಗದು ಸಂದಾಯ ಮಾಡಿದ್ದಾರೆ ಎಂದು ಹೇಳಲಾಗಿದೆಯಾದರೂ ಆ ಇಬ್ಬರ ಮಾಹಿತಿ ಬ್ಯಾಂಕ್ ಮತ್ತು ಪ್ರಾಧಿಕಾರದ ಬಳಿ ಇಲ್ಲ.
ನಿವೇಶನ ಖರೀದಿದಾರರಿಗೆ ಕ್ರಯ ಪತ್ರ ಮಾಡಿಕೊಡುವಂತೆ ಸರ್ಕಾರ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಪ್ರಾಧಿಕಾರದ ಆಯುಕ್ತರು. ಕೂಡಲೇ ನಮಗೆ ಕ್ರಯ ಪತ್ರವನ್ನು ಮಾಡಿಕೊಡಬೇಕು. ಪದ್ಮನಾಭ್, ನಿವೇಶನ ಖರೀದಿದಾರ--ಮೂರು ಲೇಔಟ್‌ಗಳಿಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಯಿಂದ ಆದೇಶ ಬಂದಿದ್ದು, ಇದನ್ನು ಜಾರಿಗೊಳಿಸುವ ಸಂಬಂದ ಈಗಾಗಲೇ ಕಾರ್ಯೋನ್ಮುಖರಾಗಿದ್ದೇವೆ. ಶಿವನಂಕಾರಿಗೌಡ, ಆಯುಕ್ತರು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ