ಮದ್ಯ ದರ ಹೆಚ್ಚಿಸಲ್ಲ: ಆದಾಯ ಸಂಗ್ರಹಣೆಯಲ್ಲಿ ಸಾಧನೆ

Alcohol
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಬಕಾರಿ ಸಂಘ-ಸಂಸ್ಥೆಗಳೊಂದಿಗೆ ಬಜೆಟ್ ಪೂರ್ವ ಸಭೆ ಗುರುವಾರ ನಡೆಸಿದರು. ಸಚಿವ ಕೆ.ಗೋಪಾಲಯ್ಯ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐಎಸ್​ಎನ್ ಪ್ರಸಾದ್ ಇನ್ನಿತರ ಅಧಿಕಾರಿಗಳು ಇದ್ದರು.
Published on

ಬೆಂಗಳೂರು: ಮದ್ಯ ಮಾರಾಟ ದರ ಏರಿಸುವ ಯಾವುದೇ ಚಿಂತನೆಯಿಲ್ಲ. ಆದಾಯ ಹೆಚ್ಚಳದ ಕುರಿತು ಬಜೆಟ್​ಗೆ ಮುನ್ನ ಮುಖ್ಯಮಂತ್ರಿ ಜತೆಗೆ ರ್ಚಚಿಸಲಾಗುವುದು ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಅಬಕಾರಿ ಸಂಘ- ಸಂಸ್ಥೆಗಳೊಂದಿಗೆ ಬಜೆಟ್ ಪೂರ್ವ ಸಭೆ ನಂತರ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯಿಸಿದರು.

ಕರೊನಾ ಸಂಕಷ್ಟದ ನಡುವೆಯೂ ಅಬಕಾರಿ ಇಲಾಖೆಯಿಂದ ರಾಜ್ಯದ ಬೊಕ್ಕಸಕ್ಕೆ ಗಮನಾರ್ಹ ಆದಾಯ ಸಂದಾಯವಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ (2021-22) 25 ಸಾವಿರ ಕೋಟಿ ರೂ. ಆದಾಯ ಸಂಗ್ರಹ ಗುರಿಯಿದ್ದು, ಈಗಾಗಲೆ 23,247 ಕೋಟಿ ರೂ. ಸಂಗ್ರಹವಾಗಿದೆ. 2022-23ನೇ ಸಾಲಿನ ಮುಂಗಡಪತ್ರ ಪೂರ್ವ ಅಬಕಾರಿ ಸಂಘ-ಸಂಸ್ಥೆಗಳ ಜತೆಗೆ ಸೌಹಾರ್ದಯುತ ಚರ್ಚೆಯಾಗಿದೆ. ಸಿಎಂ ಜತೆಗೆ ಅಬಕಾರಿ ಸಂಘಟನೆಗಳ ಬೇಡಿಕೆಗಳ ಬಗ್ಗೆ ಮತ್ತೊಮ್ಮೆ ರ್ಚಚಿಸುತ್ತೇವೆ ಎಂದರು.

ಕಾನೂನು ಪರಿಷ್ಕರಣೆಗೆ ಮೊರೆ: ಅಬಕಾರಿ ಉದ್ಯಮದ ಸುಗಮ ಕಾರ್ಯನಿರ್ವಹಣೆ, ಬೊಕ್ಕಸಕ್ಕೆ ವರಮಾನದ ದೃಷ್ಟಿಯಿಂದ ಚಾಲ್ತಿ ಅಬಕಾರಿ ಕಾಯ್ದೆ ಮತ್ತು ನಿಯಮಗಳನ್ನು ಪರಿಷ್ಕರಿಸಬೇಕು ಎಂದು ಕರ್ನಾಟಕ ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಗುರುಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್​ಹೆಗ್ಡೆ ಮೊರೆಯಿಟ್ಟಿದ್ದಾರೆ. ನಿರಂತರ ನಷ್ಟಕ್ಕೆ ಗುರಿಯಾಗಿರುವ ದ್ರಾಕ್ಷಾ ವೈನ್ ಮಾರಾಟಗಾರರಿಗೆ ಬಿಯರ್ ಮಾರಾಟ ಮಾಡಲು ಅನುಮತಿ ನೀಡಿ ಸಂಕಷ್ಟದಿಂದ ಪಾರು ಮಾಡಬೇಕು ಎಂದು ರಾಜ್ಯ ದ್ರಾಕ್ಷಾ ವೈನ್ ಮಾರಾಟಗಾರರ ಸಂಘ ಮನವಿ ಮಾಡಿದೆ.

ಶಾಸಕರಾಗಿ ಆಯ್ಕೆಯಾಗಲು ಅವಕಾಶ, ಸಚಿವ ಸ್ಥಾನ, ನಿರೀಕ್ಷೆಗೆೆ ಮೀರಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಲಭಿಸುತ್ತಿದೆ. ಬಿಜೆಪಿಯಲ್ಲಿ ನಮಗೇನೂ ಕಡಿಮೆಯಾಗಿಲ್ಲ. ಅಷ್ಟೇ ಅಲ್ಲ, ಯಾವುದೇ ಕಾರಣಕ್ಕೂ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. | ಕೆ.ಗೋಪಾಲಯ್ಯ ಸಚಿವ

ಸುಂಕ ಕಡಿತದ ಪ್ರಸ್ತಾಪ: ಬಿಯರ್ ಮತ್ತು ಭಾರತದಲ್ಲಿ ತಯಾರಿಸಿದ ವಿದೇಶಿ ಮದ್ಯ ರಫ್ತು ಮೇಲೆ ವಿಧಿಸುತ್ತಿರುವ ಅಬಕಾರಿ ಸುಂಕವನ್ನು ಪ್ರತಿ ಬಲ್ಕ್ ಲೀಟರ್​ಗೆ ಮೂರು ರೂ.ನಿಂದ 50 ಪೈಸೆಗೆ ಇಳಿಸಿದರೆ ರಾಜ್ಯಕ್ಕೆ ಬಹು ವಿಧದ ಲಾಭವಾಗಲಿದೆ ಎಂದು ವುಡ್​ಪೆಕರ್ ಡಿಸ್ಟಿಲ್ಲರೀಸ್ ಅಂಡ್ ಬ್ರೆವರೀಸ್ ಕಂಪನಿ ನಿರ್ದೇಶಕ ರಜತ್ ಬಾತ್ರ ನಿವೇದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net