

Russia: ರಷ್ಯಾದ ತೈಲ ಖರೀದಿಯನ್ನು ಮುಂದುವರಿಸುವುದಕ್ಕಾಗಿ ಭಾರತದ ಮೇಲೆ ಸುಂಕ ವಿಧಿಸಿದ ಅಮೆರಿಕದ ಒತ್ತಡ ಮಧ್ಯೆ ಭಾರತ ನಮ್ಮೊಂದಿಗೆ ಸ್ಥಿರವಾದ ಸಂಬಂಧವನ್ನು ಮುಂದುವರಿಯುತ್ತಿದೆ ಎಂದು ರಷ್ಯಾ ಹೇಳಿದೆ. ಅಲ್ಲದೆ ನಮ್ಮ ಸಂಬಂಧವನ್ನು ಮುರಿಯಲು ಅಮೆರಿಕ ಯತ್ನಿಸಿದರೇ ಆದು ವಿಫಲವಾಗುತ್ತದೆ ಎಂದು ತಿಳಿಸಿದೆ.
ಈ ಬಗ್ಗೆ ತನ್ನ ಹೇಳಿಕೆಯಲ್ಲಿ ಮಾಹಿತಿ ನೀಡಿರುವ ರಷ್ಯಾ ವಿದೇಶಾಂಗ ಸಚಿವಾಲಯವು, ಭಾರತ ಮತ್ತು ರಷ್ಯಾ ನಡುವಿನ ಸಂಬಂಧಗಳು ಸ್ಥಿರವಾಗಿ ಮತ್ತು ವಿಶ್ವಾಸದಿಂದ ಮುಂದುವರಿಯುತ್ತಿದೆ. ಈ ಪ್ರಕ್ರಿಯೆಯನ್ನು ತಡೆಯುವ ಯಾವುದೇ ಪ್ರಯತ್ನ ವಿಫಲಗೊಳ್ಳುತ್ತದೆ ಎಂದು ಎಚ್ಚರಿಸಿದೆ.
ಅಲ್ಲದೆ, ಬಾಹ್ಯ ಬೆದರಿಕೆಗಳು ಮತ್ತು ಟೀಕೆಗಳ ನಡುವೆಯೂ ರಷ್ಯಾದೊಂದಿಗಿನ ಪಾಲುದಾರಿಕೆಗೆ ಭಾರತದ ಬದ್ಧತೆಯನ್ನು ಎತ್ತಿ ತೋರಿಸಿದೆ ಎಂದು ರಷ್ಯಾ ಹೇಳಿದೆ. ನಮ್ಮ ದೀರ್ಘಕಾಲದ ಭಾರತ ಸ್ನೇಹದ ಮನೋಭಾವ ಮತ್ತು ಸಂಪ್ರದಾಯಗಳಲ್ಲಿ ಬೇರೂರಿದೆ ಎಂದು ರಷ್ಯಾ ತಿಳಿಸಿದೆ. ಭಾರತದೊಂದಿಗಿನ ಪಾಲುದಾರಿಕೆಯು ಸಾರ್ವಭೌಮತ್ವದ ಅತ್ಯುನ್ನತ ಮೌಲ್ಯ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳ ಪ್ರಾಮುಖ್ಯತೆಗೆ ಆದ್ಯತೆ ನೀಡುತ್ತದೆ. ಭಾರತದ ಈ ದೃಷ್ಟಿಕೋನವು ವಿಶ್ವಾಸಾರ್ಹವಾಗಿದ್ದು, ರಷ್ಯಾ ಜತೆಗಿನ ಸಂಬಂಧಗಳನ್ನು ಬೆಂಬಲಿಸುತ್ತದೆ ಎಂದು ಹೇಳಿದೆ.
ಉಭಯ ದೇಶಗಳು ನಾಗರಿಕ ಮತ್ತು ಮಿಲಿಟರಿ ಉತ್ಪಾದನೆ, ಮಾನವಸಹಿತ ಬಾಹ್ಯಾಕಾಶ ಕಾರ್ಯಾಚರಣೆಗಳು, ಪರಮಾಣು ಶಕ್ತಿ ಮತ್ತು ರಷ್ಯಾದ ತೈಲದ ಭಾರತೀಯ ಹೂಡಿಕೆಗಳನ್ನು ಒಳಗೊಂಡ ಜಂಟಿ ಯೋಜನೆಗಳಲ್ಲಿ ಕೈಜೊಡಿಸಿದೆ. ಅಲ್ಲದೆ, ಹೊಸ ಪಾವತಿ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು, ರಾಷ್ಟ್ರೀಯ ಕರೆನ್ಸಿಗಳ ಬಳಕೆಯನ್ನು ಹೆಚ್ಚಿಸುವುದು ಮತ್ತು ಪರ್ಯಾಯ ಸಾರಿಗೆಯನ್ನು ಹೆಚ್ಚಿಸುವ ಪ್ರಯತ್ನಗಳ ಬಗ್ಗೆ ರಷ್ಯಾ ತಿಳಿಸಿದೆ.
ಕಳೆದ ತಿಂಗಳು ಅಮೆರಿಕವು ಹೆಚ್ಚಿನ ಭಾರತೀಯ ಉತ್ಪನ್ನಗಳ ಮೇಲೆ ಭಾರೀ ಸುಂಕಗಳನ್ನು ವಿಧಿಸಿತು. ಇದರಲ್ಲಿ ಭಾರತದ ರಷ್ಯಾದ ತೈಲ ಖರೀದಿಗೆ ಸಂಬಂಧಿಸಿದ ಶೇ, 25 ಸುಂಕ ಮತ್ತು ಹೆಚ್ಚುವರಿಯಾಗಿ ಶೇ, 25 ದಂಡ ಸೇರಿದೆ. ಟ್ರಂಪ್ ಆಡಳಿತವು ಭಾರತವು ಪರೋಕ್ಷವಾಗಿ ಯುಕ್ರೇನ್ ಸಂಘರ್ಷಕ್ಕೆ ಕಾರಣವಾಗುತ್ತಿದೆ ಎಂದು ಆರೋಪಿಸಿತು. ಭಾರತವು ಈ ಆರೋಪವನ್ನು ಅನ್ಯಾಯ ಮತ್ತು ಅಸಮಂಜಸ' ಎಂದು ತಿರಸ್ಕರಿಸಿದೆ. (ಏಜೆನ್ಸೀಸ್)