

ಬೆಂಗಳೂರು: ಕರೊನಾ ಭೀತಿ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ಡೌನ್ ಮಾಡಲಾಗಿದ್ದು, ಪ್ರತಿದಿನ ಬೆಳಗ್ಗೆ ದಿನಪತ್ರಿಕೆ ವಿತರಣೆ ಮಾಡುವವರಿಗೆ ಯಾವುದೇ ರೀತಿಯ ತೊಂದರೆ ಮಾಡಬಾರದು ಎಂದು ಪೊಲೀಸ್ ಸಿಬ್ಬಂದಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಖಡಕ್ ಸೂಚನೆ ಕೊಟ್ಟಿದ್ದಾರೆ.
ಪ್ರತಿದಿನ ಬೆಳಗ್ಗೆ ಪತ್ರಿಕೆ ವಿತರಣೆ ಮಾಡುವವರಿಗೆ ಪೊಲೀಸ್ ಸಿಬ್ಬಂದಿ ಯಾವುದೇ ಅಡ್ಡಿ ಉಂಟುಮಾಡಬಾರದು. ಪತ್ರಿಕಾ ವಿತರಕರು ನಿತ್ಯ ಬೆಳಗ್ಗೆ 7.30ರೊಳಗೆ ಪೇಪರ್ ವಿತರಿಸಿ ಹೋಗುತ್ತಾರೆ. ಪಾಸ್ ಇರಲಿ, ಇಲ್ಲದಿರಲಿ ತೊಂದರೆ ಕೊಡಬಾರದು. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ರೀತಿಯ ಯಾವುದೇ ದೂರುಗಳು ಬರಬಾರದು ಎಂದು ಭಾಸ್ಕರ್ ರಾವ್ ಸಿಬ್ಬಂದಿಗೆ ಆದೇಶಿಸಿದ್ದಾರೆ. ದಿನನಿತ್ಯದ ಮೂಲಸೌಕರ್ಯಗಳಲ್ಲಿ ಜನಸಾಮಾನ್ಯರಿಗೆ ದಿನಪತ್ರಿಕೆಯೂ ಅವಶ್ಯಕವಾಗಿದ್ದು, ದಿನಪತ್ರಿಕೆ ವಿತರಣೆ ಮಾಡುವವರ ಕೆಲಸಕ್ಕೆ ಅಡಚಣೆ ಆಗಬಾರದು. ಈ ಹಿನ್ನೆಲೆಯಲ್ಲಿ ಪೊಲೀಸರು ಅವರೊಂದಿಗೆ ಗೌರವಯುತವಾಗಿ ನಡೆದುಕೊಳ್ಳ ಬೇಕು. ಎಲ್ಲ ಸಿಬ್ಬಂದಿ ಸೌಜನ್ಯ ಹಾಗೂ ತಾಳ್ಮೆಯಿಂದ ವರ್ತಿಸಬೇಕು ಎಂದು ಸಿಬ್ಬಂದಿಗೆ ತಾಕೀತು ಮಾಡಿದ್ದಾರೆ.
ಬೆಳಗ್ಗೆ ತರಕಾರಿ ಮಾರುಕಟ್ಟೆಗಳು ತೆರೆದಿರುತ್ತವೆ. ವ್ಯಾಪಾರಿಗಳ ಮಧ್ಯೆ ಅಂತರ ಕಾಯ್ದುಕೊಳ್ಳಬೇಕು ಎಂದು ಗೃಹ ಸಚಿವರು, ಕಂದಾಯ ಸಚಿವರು ಸೂಚನೆ ಕೊಟ್ಟಿದ್ದಾರೆ. ಆದ್ದರಿಂದ ವ್ಯಾಪಾರಿಗಳ ಮಧ್ಯೆ ಕನಿಷ್ಠ 10 ಅಡಿ ಕಾಯ್ದುಕೊಳ್ಳಬೇಕು. ಎಲ್ಲರೂ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಉಪಯೋಗಿಸಬೇಕು. ಅವರು ತಮ್ಮ ಕೆಲಸ ಮುಗಿಸಿ ಹೊರಟು ಹೋಗುತ್ತಾರೆ. ಅವರಿಗೆ ತೊಂದರೆ ನೀಡಿ ಬಲ ಪ್ರಯೋಗ ಮಾಡಬಾರದು.
ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕನಿಷ್ಠ 10 ಮೈಕ್ಸೆಟ್ಗಳನ್ನು ಹಾಕಿಕೊಂಡು ನಿರಂತರವಾಗಿ ‘ಯಾರೂ ಮನೆಯಿಂದ ಹೊರಗಡೆ ಬರಬೇಡಿ ಎಲ್ಲರೂ ಮನೆಯಲ್ಲಿಯೇ ಇರಿ’ ಎಂದು ಘೋಷಣೆ ಮಾಡಬೇಕು. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರಬೇಕು. ಠಾಣಾ ವ್ಯಾಪ್ತಿ ಹೆಚ್ಚಿದ್ದಲ್ಲಿ ಇನ್ನೂ ಹೆಚ್ಚಿನ ಮೈಕ್ಸೆಟ್ಗಳನ್ನು ಬಳಸಿ ನಿರಂತರವಾಗಿ ಪ್ರಕಟಣೆ ಮಾಡುತ್ತಿರಬೇಕು.
ಡಯಾಲಿಸಿಸ್, ಕಿಮೋಥೆರಪಿ ಸೇರಿ ಇತರೆ ತುರ್ತು ಕಾರಣಗಳಿಂದ ಆಸ್ಪತ್ರೆಗೆ ಹೋಗುತ್ತಿರುವವರಿಗೆ ಯಾರೂ ತೊಂದರೆ ಕೊಡದೆ ಸಮಾಧಾನವಾಗಿ ಅವರ ಸಮಸ್ಯೆಗಳನ್ನು ಕೇಳಿ ಕಳುಹಿಸಿಕೊಡಬೇಕು. ಆಸ್ಪತ್ರೆಗೆ ಹೋಗುವ ವೃದ್ಧರು, ಹೆಣ್ಣು ಮಕ್ಕಳೊಂದಿಗೆ ಪೊಲೀಸರು ಗೌರವಯುತವಾಗಿ ನಡೆದುಕೊಳ್ಳಬೇಕು.
ಸೂಚನೆಯಲ್ಲಿ ಏನೇನಿದೆ?
ಫುಡ್ ಅಗ್ರಿಗೇಟರ್ ಮತ್ತು ಡೋರ್ ಡೆಲಿವರಿ ಬಾಯ್್ಸ ದ್ವಿಚಕ್ರ ವಾಹನಗಳಲ್ಲಿ ಬಂದಾಗ ಅವರಿಗೆ ತೊಂದರೆ ಕೊಡಬಾರದು. ಬೇರೆಯವರು ಅನಾವಶ್ಯಕವಾಗಿ ದ್ವಿಚಕ್ರ ವಾಹನದಲ್ಲಿ ತಿರುಗಾಡುತ್ತಿದ್ದರೆ, ಅವರ ವಾಹನಗಳನ್ನು ವಶಕ್ಕೆ ಪಡೆದು ಸಂಜೆ ಬಂದು ತೆಗೆದುಕೊಂಡು ಹೋಗುವಂತೆ ಸೂಚಿಸಬೇಕು. ಯಾರಾದರೂ ತುರ್ತು ಪರಿಸ್ಥಿಯಲ್ಲಿದ್ದರೆ ಅವರನ್ನು ತಾಳ್ಮೆಯಿಂದ ವಿಚಾರಿಸಿ ಮನೆಗೆ ಕಳುಹಿಸಬೇಕು. ಸರಿಯಾದ ರೀತಿಯಲ್ಲಿ ಲಾಕ್ಡೌನ್ ಆಗಿರಬೇಕು. ಊಟ ಸರಬರಾಜು ಮಾಡುವವರಿಗೆ ಅಡ್ಡಿಪಡಿಸಬಾರದು. ಈಗಾಗಲೇ 12 ಸಾವಿರ ಪಾಸ್ ವಿತರಣೆ ಆಗಿದ್ದು, ಪಾಸ್ ಇರುವವರಿಗೂ ಹಾಗೂ ಇಲ್ಲದೆ ಇರುವವರೊಂದಿಗೂ ಗೌರವದಿಂದ ನಡೆದುಕೊಳ್ಳಬೇಕು.
ದಿನಸಿ ಅಂಗಡಿ, ಕಿರಾಣಿ ಅಂಗಡಿ, ತರಕಾರಿ, ಹಣ್ಣು, ಮೀನು, ಮಾಂಸ ಮಾರಾಟ ಮಾಡುವ ಅಂಗಡಿಗಳ ಬಳಿ ಹಾಗೂ ಇತರೆ ಎಲ್ಲ ಕಡೆ ಗ್ರಾಹಕರು ಅಂತರ ಕಾಯ್ದುಕೊಂಡಿರಬೇಕು. ಆಯಾ ಅಂಗಡಿಯವರಿಗೆ ಅಥವಾ ಸ್ವಯಂ ಸೇವಕರಿಗೆ ಹೇಳಿ ಅಂತರ ಗುರುತಿಸಿ ವೃತ್ತ ಅಥವಾ ಗೆರೆಯನ್ನು ಮೂರು ಅಡಿಗಳ ದೂರದಲ್ಲಿ ಹಾಕಿಸಬೇಕು.
ಎಲ್ಲ ಡಿಸಿಪಿ ಕಚೇರಿಗಳಲ್ಲಿ ಪಾಸ್ಗಳು ದೊರೆಯು ತ್ತಿದ್ದು, ಎಲ್ಲ ಠಾಣೆಗಳಲ್ಲಿ ಒಂದು ಸಾರ್ವಜನಿಕ ಸಂಪರ್ಕ ಕಚೇರಿ ತೆರೆಯುವಂತೆ ಸೂಚನೆ ನೀಡಲಾಗಿದೆ. ಅದರಂತೆ ಬಹಳ ಜನರು ಅವರ ಕಷ್ಟ, ಸಂಕಟ, ದುಃಖಗಳನ್ನು ಹೇಳಿಕೊಂಡು ಬಂದಾಗ ಅವರನ್ನು ತಾಳ್ಮೆಯಿಂದ ಮಾತನಾಡಿಸಿ ಉತ್ತರಿಸಬೇಕು. ಯಾರಿಗಾದರೂ ಪಾಸ್ ಬೇಕಾದಲ್ಲಿ ಅವರಿಗೆ ಸರಿಯಾಗಿ ಮಾರ್ಗದರ್ಶನ ನೀಡಿ ಡಿಸಿಪಿ ಕಚೇರಿಗೆ ಕಳುಹಿಸಿ ಕೊಡಬೇಕು. ಯಾವುದೇ ಗಲಾಟೆ ಮಾಡಿಕೊಳ್ಳಬಾರದು. ಯಾರಿಗೆ ಎಷ್ಟುಪಾಸ್ ಕೊಡಬೇಕೆಂದು ಡಿಸಿಪಿ ವಿಚಾರ ಮಾಡಿ ಪಾಸ್ ವಿತರಣೆ ಮಾಡಬೇಕು. ಸರಿಯಾದ ರೀತಿಯಲ್ಲಿ ಪಾಸ್ ವಿತರಣೆ ನಡೆಯಬೇಕು.
ಎಲ್ಲರೂ ಚೆನ್ನಾಗಿ ಕೆಲಸ ಮಾಡಿ ಇಂಥ ಸಮಯದಲ್ಲಿ ಸರ್ಕಾರ ಹಾಗೂ ಜನರು ಪೊಲೀಸ್ ಇಲಾಖೆ ಮೇಲೆ ಇಟ್ಟಿರುವ ನಂಬಿಕೆ ಉಳಿಸಬೇಕು. ಇದುವರೆಗೆ ಒಳ್ಳೆಯ ಕೆಲಸವಾಗಿದೆ, ಇನ್ನು ಉಳಿದ 19 ದಿನಗಳವರೆಗೆ ಇದೇ ರೀತಿ ಕೆಲಸ ಮಾಡಬೇಕು. ಇದರೊಂದಿಗೆ ಸಿಬ್ಬಂದಿ ಆರೋಗ್ಯ ಚೆನ್ನಾಗಿ ನೋಡಿಕೊಂಡು ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಪ್ರತಿಯೊಬ್ಬರು ಸ್ಯಾನಿಟೈಸರ್ ಉಪಯೋಗಿಸಿ ಮಾಸ್ಕ್ ಧರಿಸಬೇಕು. ಆಗಾಗ ಕೈ ತೊಳೆಯುತ್ತಿರಬೇಕು.
ಲಾಠಿ ಬಳಕೆ ಮಾಡದೇ ಬಂದೋಬಸ್ತ್ಗೆ ಕಮಿಷನರ್ ಸೂಚನೆ
ಪದೇಪದೆ ಮನೆಯಿಂದ ಹೊರಬಾರದಂತೆ ಜನರಿಗೆ ಸೂಚನೆ ಕೊಡುತ್ತಿದ್ದರೂ ಅದನ್ನು ಮೀರಿ ಅನಗತ್ಯವಾಗಿ ಮನೆಯಿಂದ ಹೊರ ಬರುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದರು. ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಅದಕ್ಕೆ ಕಡಿವಾಣ ಹಾಕಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ನಗರದ ಎಲ್ಲ ಪೊಲೀಸರು ಲಾಠಿಯಿಲ್ಲದೇ ಬಂದೋಬಸ್ತ್ ಮಾಡಬೇಕು ಎಂದು ನಗರ ಸಿಬ್ಬಂದಿಗೆ ಸೂಚನೆ ಕೊಟ್ಟಿದ್ದಾರೆ. ಸಿಎಆರ್, ಕೆಎಸ್ಆರ್ಪಿ ಸಿಬ್ಬಂದಿ ಹೊರತುಪಡಿಸಿ ಇತರ ಸಿಬ್ಬಂದಿ ಲಾಠಿಯನ್ನು ಠಾಣೆಯಲ್ಲಿ ಇಟ್ಟು ಸಮವಸ್ತ್ರದಲ್ಲಿ ಬಂದೋಬಸ್ತ್ ಮಾಡಬೇಕು. ಯಾವುದೇ ಕಾರಣಕ್ಕೂ ಲಾಠಿಯನ್ನು ಕೈಯಲ್ಲಿ ಇಟ್ಟುಕೊಳ್ಳಬಾರದು. ಸಿಪಿಆರ್, ಕೆಎಸ್ಆರ್ಪಿ ಸಿಬ್ಬಂದಿಯನ್ನು ಅವಶ್ಯಕತೆಯಿದ್ದಲ್ಲಿ ಮಾತ್ರ ಬಂದೋಬಸ್ತ್ಗೆ ಉಪಯೋಗಿಸಬೇಕು ಎಂದು ಆಯುಕ್ತರು ಹೇಳಿದ್ದಾರೆ.