ಶಾಲೆ ಆರಂಭಕ್ಕೆ ಬೇಡ ತರಾತುರಿ; ಪಾಲಕರ ಒಕ್ಕೊರಲ ಅಭಿಪ್ರಾಯ

School
Published on
ಕರೊನಾ ಸೋಂಕು ತೀವ್ರವಾಗಿ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಶಾಲೆಗಳನ್ನು ಆರಂಭ ಮಾಡಬೇಕೋ, ಬೇಡವೋ? ಎಂಬ ಚರ್ಚೆ ರಾಜ್ಯದಲ್ಲಿ ಶುರುವಾಗಿದೆ. ರಾಜ್ಯ ಸರ್ಕಾರವೂ ತಜ್ಞರ ಜತೆ ಈ ವಿಚಾರವಾಗಿ ಸಮಾಲೋಚನೆಯಲ್ಲಿ ತೊಡಗಿದೆ. ಶಾಲೆ ಆರಂಭವಾದರೆ ಮಕ್ಕಳನ್ನು ಕಳುಹಿಸಲು ನೀವು ಸಿದ್ಧರಿದ್ದೀರಾ? ಸರ್ಕಾರದ ನಿರ್ಧಾರ ಏನಿರಬೇಕು? ಎಂದು ಅಭಿಪ್ರಾಯ ತಿಳಿಸುವಂತೆ ವಿಜಯವಾಣಿ ಕೋರಿದ್ದ ಮನವಿಗೆ ಸಾವಿರಾರು ಪಾಲಕರು ಸ್ಪಂದಿಸಿದ್ದು, ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಅದರಲ್ಲಿ ಆಯ್ದ ಕೆಲವು ಇಲ್ಲಿವೆ.
ಶಾಲೆ ಶುರುಮಾಡಲು ಖಾಸಗಿ ಶಾಲೆಗಳು ಸಿದ್ಧ

ಬೆಂಗಳೂರು: ಶಾಲಾ-ಕಾಲೇಜು ಆರಂಭ ವಿಚಾರವನ್ನು ರಾಜ್ಯ ಸರ್ಕಾರಗಳ ವಿವೇಚನೆಗೆ ಕೇಂದ್ರ ಸರ್ಕಾರ ಬಿಟ್ಟಿರುವ ಕಾರಣ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಶಾಲೆ ತೆರೆಯಲು ಸಿದ್ಧತೆ ನಡೆಸಿವೆ. ಈ ಹಿಂದೆಯೇ ಕೇಂದ್ರ, ಸೆ.21ರಿಂದ ಶಾಲೆಗಳಿಗೆ ಮಕ್ಕಳು ಬಂದು ಮಾರ್ಗದರ್ಶನ ಪಡೆದುಕೊಳ್ಳಲು ಅವಕಾಶ ಕಲ್ಪಿಸುವಂತೆ ತಿಳಿಸಿತ್ತು. ಆ ವೇಳೆಗೆ ಶಾಲೆ ತೆರೆಯಲು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಸುರಕ್ಷತಾ ಉಪಕರಣ ಮತ್ತು ಉತ್ಪನ್ನಗಳನ್ನು ಖರೀದಿ ಮಾಡಿತ್ತು. ಆದರೆ, ಕೊನೇ ಕ್ಷಣದಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸುವ ಮೂಲಕ ಸೆಪ್ಟಂಬರ್ ಅಂತ್ಯದವರೆಗೆ ಶಾಲೆ ತೆರೆಯುವುದಿಲ್ಲವೆಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳು ಸರ್ಕಾರದ ನಿಯಮಗಳನ್ನು ಪಾಲಿಸುವುದು ಅನಿವಾರ್ಯವಾಗಿದ್ದು, ಶಾಲೆಗಳು ತೆರೆಯಲಿಲ್ಲ. ಆದರೆ, ರಾಜ್ಯ ಸರ್ಕಾರ ವಿದ್ಯಾಗಮ ಯೋಜನೆ ಅಡಿ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿ ಬೋಧನೆ ಮಾಡುತ್ತಿದ್ದು, ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಮಾತ್ರ ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಪರಿಸ್ಥಿತಿ ಈ ರೀತಿ ಇರುವಾಗ ಖಾಸಗಿ ಶಾಲೆಗಳನ್ನು ಆರಂಭಿಸಿ ಶಾಲೆಗಳಲ್ಲೇ ಸುರಕ್ಷತಾ ಕ್ರಮ ಅನುಸರಿಸಿ ತರಗತಿ ನಡೆಸುವುದರಲ್ಲೇನು ತಪ್ಪು ಎಂಬುದು ರಾಜ್ಯದಲ್ಲಿರುವ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಪ್ರಶ್ನೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net