

ಲಖನೌ: ವಕ್ಫ್ ತಿದ್ದುಪಡಿ ಮಸೂದೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ಅಂದಿನಿಂದ ಎಲ್ಲಾ ರಾಜಕೀಯ ಪಕ್ಷಗಳು ಇದನ್ನು ವಿರೋಧಿಸುತ್ತಿವೆ. ಬಿಜೆಪಿ ಇದನ್ನು ಒಳ್ಳೆಯ ಹೆಜ್ಜೆ ಎಂದು ಕರೆಯುತ್ತಿದೆ. ಈ ಮಸೂದೆಯ ಕುರಿತು ಸಿಎಂ ಯೋಗಿ ಆದಿತ್ಯನಾಥ್(Yogi Adityanath) ಪ್ರತಿಕ್ರಿಯಿಸಿದ್ದಾರೆ. ಇನ್ನು ಮುಂದೆ ಯಾರೂ ವಕ್ಫ್ ಮಂಡಳಿಯ ಹೆಸರಿನಲ್ಲಿ ದರೋಡೆ ಮಾಡಲು ಸಾಧ್ಯವಾಗುವುದಿಲ್ಲ. ಈ ಆಸ್ತಿಯನ್ನು ಶಾಲೆ ಮತ್ತು ವೈದ್ಯಕೀಯ ಕಾಲೇಜು ನಿರ್ಮಿಸಲು ಬಳಸಲಾಗುತ್ತದೆ ಎಂದು ಹೇಳಿದರು.
ಅದು ಕೆಲವರಿಗೆ ಲೂಟಿ ಮಾಡುವ ಸಾಧನವಾಗಿ ಮಾರ್ಪಟ್ಟಿತ್ತು. ಈಗ ಅದನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗುತ್ತದೆ. ಮಹಾರಾಜ್‌ಗಂಜ್‌ನಲ್ಲಿ ವಕ್ಫ್ ಮಂಡಳಿಯ ಹೆಸರಿನಲ್ಲಿ ಲಕ್ಷಾಂತರ ಎಕರೆ ಭೂಮಿಯನ್ನು ಆಕ್ರಮಿಸಿಕೊಳ್ಳುವ ಕೆಲಸ ನಡೆದಿದೆ. ಈ ಭೂಮಿಯನ್ನು ವಾಪಸ್ ಪಡೆಯಲಾಗುವುದು. ಇನ್ನು ಮುಂದೆ ಯಾರೂ ವಕ್ಫ್ ಮಂಡಳಿಯ ಹೆಸರಿನಲ್ಲಿ ಭೂಮಿಯನ್ನು ಲೂಟಿ ಮಾಡಲು ಸಾಧ್ಯವಿಲ್ಲ. ಸಿಎಫ್ ಮಂಡಳಿಯ ಹೆಸರಿನಲ್ಲಿ ವರ್ಷಗಳಿಂದ ಲೂಟಿ ನಡೆಯುತ್ತಿತ್ತು, ಈಗ ಈ ಲೂಟಿ ನಿಲ್ಲಲಿದೆ. ಸಾರ್ವಜನಿಕ ಆಸ್ತಿ ಮತ್ತು ಕಂದಾಯ ಭೂಮಿಯನ್ನು ಈಗ ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು ಅಥವಾ ಬಡವರಿಗೆ ವಸತಿ ನಿರ್ಮಿಸಲು ಬಳಸಲಾಗುತ್ತದೆ ಎಂದು ಸಿಎಂ ಯೋಗಿ ತಿಳಿಸಿದರು.
ಇನ್ನು ಮುಂದೆ ವಕ್ಫ್ ಹೆಸರಿನಲ್ಲಿ ಯಾವುದೇ ಅನಿಯಂತ್ರಿತತೆಗೆ ಅವಕಾಶ ನೀಡಲಾಗುವುದಿಲ್ಲ. ಇಲ್ಲಿಯವರೆಗೆ ವಕ್ಫ್ ಸಮಾಜಕ್ಕೆ ಯಾವುದೇ ಪ್ರಯೋಜನವನ್ನು ನೀಡಿಲ್ಲ ಆದರೆ ಈಗ ಸರ್ಕಾರ ಈ ದಿಕ್ಕಿನಲ್ಲಿ ದೃಢವಾದ ಕ್ರಮಕೈಗೊಳ್ಳಲಿದೆ ಎಂದು ಅವರು ಹೇಳಿದರು. ಮಹಾರಾಜಗಂಜ್ ಜಿಲ್ಲೆಯ ರತನ್‌ಪುರದಲ್ಲಿ ಶನಿವಾರ(ಏಪ್ರಿಲ್ 5) 654 ಕೋಟಿ ರೂ. ಮೌಲ್ಯದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು.
ಲೋಕಸಭೆಯ ನಂತರ ರಾಜ್ಯಸಭೆಯೂ ವಕ್ಫ್ ಮಂಡಳಿ ತಿದ್ದುಪಡಿ ಮಸೂದೆ 2024 ಅನ್ನು ಅಂಗೀಕರಿಸಿದೆ. ಈ ಮಸೂದೆಯನ್ನು ಸಂಸತ್ತಿನಲ್ಲಿ 12 ಗಂಟೆಗಳಿಗೂ ಹೆಚ್ಚು ಕಾಲ ಚರ್ಚಿಸಲಾಯಿತು. ನಂತರ ಅದನ್ನು ಅಂಗೀಕರಿಸಲಾಯಿತು. ಲೋಕಸಭೆಯಲ್ಲಿ ಮಸೂದೆಯ ಪರವಾಗಿ 288 ಮತಗಳು ಚಲಾವಣೆಗೊಂಡರೆ, ವಿರುದ್ಧವಾಗಿ 232 ಮತಗಳು ಚಲಾವಣೆಯಾದವು. ರಾಜ್ಯಸಭೆಯಲ್ಲಿ ವಕ್ಫ್ ಮಸೂದೆಯ ಪರವಾಗಿ 128 ಮತಗಳು ಮತ್ತು ವಿರುದ್ಧವಾಗಿ 95 ಮತಗಳು ಚಲಾವಣೆಯಾದವು.(ಏಜೆನ್ಸೀಸ್)