

ಬೆಂಗಳೂರು: ಟ್ವೀಟ್ ಮಾಡಿಕೊಳ್ಳುತ್ತ, ವಿವಾದಕ್ಕೆ ಗುರಿಯಾಗುತ್ತ, ಮೇಲಿಂದ ಮೇಲೆ ಕೇಸ್ ಬೀಳುವಂತೆ ಮಾಡಿಕೊಳ್ಳುತ್ತಿರುವ ಬಾಲಿವುಡ್ ನಟಿ ಕಂಗನಾ ರಣಾವತ್, ಇದೀಗ ತಾನು ಯಾವುದಕ್ಕೂ ಹೆದರುವವಳೇ ಅಲ್ಲ ಎಂಬುದಾಗಿ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಅಷ್ಟಕ್ಕೂ ಅವರು ಹೀಗ್ಯಾಕೆ ಹೇಳಿದರು ಎಂಬುದರ ಮೂಲ ನೋಡಲು ಹೋದರೆ ಅದು ಬೆಂಗಳೂರಿನಿಂದ ತುಮಕೂರಿನವರೆಗೂ ಕೊಂಡೊಯ್ಯುತ್ತದೆ.
ಹಳೇ ಕೇಸ್ವೊಂದರ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ವಾರಂಟ್ ಇಷ್ಯೂ ಆಗಿದ್ದ ಬೆನ್ನಿಗೇ ಇವತ್ತು ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನಲ್ಲಿ ಹಿನ್ನಡೆ ಉಂಟಾದ್ದರಿಂದ ಕಂಗನಾ ಹೀಗಂದಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಚಿತ್ರಸಾಹಿತಿ ಜಾವೇದ್ ಅಖ್ತರ್ ನೀಡಿದ್ದ ಕಳೆದ ನವಂಬರ್ನಲ್ಲಿ ಕಂಗನಾ ವಿರುದ್ಧ ನೀಡಿದ್ದ ದೂರಿನ ಮೇರೆಗೆ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಧೇರಿಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಫೆ. 1ರಂದು ಕಂಗನಾಗೆ ಸಮನ್ಸ್ ನೀಡಿ, ಮಾ. 1ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿತ್ತು. ಆದರೆ ಮಾ. 1ರಂದು ಕಂಗನಾಗೆ ನ್ಯಾಯಾಲಯಕ್ಕೆ ಹಾಜರಾಗಿಲ್ಲ, ಜತೆಗೆ ಹಾಜರಾಗದೆ ಇರುವುದಕ್ಕೂ ಸೂಕ್ತ ಕಾರಣವನ್ನೂ ತಿಳಿಸಿಲ್ಲ. ಹೀಗಾಗಿ ನ್ಯಾಯಾಲಯ ಆಕೆಯ ವಿರುದ್ಧ ಬೇಲೇಬಲ್ ವಾರಂಟ್ ಜಾರಿ ಮಾಡಿದೆ.
ಇದನ್ನೂ ಓದಿ: ಕಂಗನಾ ವಿರುದ್ಧ ಬೇಲಬಲ್ ವಾರಂಟ್… ಮಾತೇ ಮುಳುವಾಯಿತೇ ?!
ಇನ್ನು ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರನ್ನು ಟೀಕಿಸಿದ್ದ ಕಂಗನಾ, ಅವರನ್ನು ಟೆರರಿಸ್ಟ್ ಎಂಬುದಾಗಿ ಕರೆದು ಕಳೆದ ಸೆ. 21ರಂದು ಮಾಡಿದ್ದರು. ಅದಕ್ಕೆ ಆಕ್ಷೇಪಿಸಿ ತುಮಕೂರಿನ ವಕೀಲ ಎಲ್. ರಮೇಶ್ ನಾಯ್ಕ್ ಎಂಬವರು ಪೊಲೀಸರಿಗೆ ದೂರು ನೀಡಿದ್ದರೂ ಪೊಲೀಸರಿಂದ ಸರಿಯಾದ ಸ್ಪಂದನೆ ಸಿಕ್ಕದ್ದರಿಂದ ಸೂಕ್ತ ಕ್ರಮಕ್ಕೆ ಆದೇಶಿಸುವಂತೆ ತುಮಕೂರು ನ್ಯಾಯಾಲಯದಲ್ಲಿ ಸೆ. 28ರಂದು ಅರ್ಜಿ ಸಲ್ಲಿಸಿದ್ದರು. ಇದೇ ಪ್ರಕರಣ ಸಂಬಂದ ಪೊಲೀಸರು ಕಂಗನಾ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಆದೇಶಿಸಿ ಬೆಂಗಳೂರಿನ ಜೆಎಂಎಫ್ಸಿ ಕೋರ್ಟ್ ಅ.9ರಂದು ಆದೇಶ ನೀಡಿತ್ತು. ಹೀಗಾಗಿ 2020ರ ಅ. 13ರಂದು ತುಮಕೂರು ಪೊಲೀಸರು ಕಂಗನಾ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
ತುಮಕೂರು ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದು ಮಾಡುವಂತೆ ಕೋರಿ ಕಂಗನಾ ಕರ್ನಾಟಕ ಹೈಕೋರ್ಟ್ಗೆ ಮೊರೆ ಹೋಗಿದ್ದರು. ಆದರೆ ಮಂಗಳವಾರ ಈ ಅರ್ಜಿ ಸಂಬಂಧ ವಿಚಾರಣೆ ನಡೆಸಿದ್ದ ಹೈಕೋರ್ಟ್, ಪ್ರಕರಣ ಸಂಬಂಧ ಪೊಲೀಸರ ಕ್ರಮಕ್ಕೆ ತಡೆ ನೀಡಲು ನಿರಾಕರಿಸಿ ಅರ್ಜಿಯನ್ನು ತಿರಸ್ಕರಿಸಿದೆ. ಹೀಗಾಗಿ ಇಂದು ಆ ಕುರಿತ ಟ್ವೀಟ್ವೊಂದನ್ನು ರಿಟ್ವೀಟ್ ಮಾಡಿಕೊಂಡಿರುವ ಕಂಗನಾ, 'ಏನೇ ಮಾಡಿ.. ನಾನು ಯಾವುದಕ್ಕೂ ಹೆದರುವವಳೇ ಅಲ್ಲ..' ಎಂದಿದ್ದಾರೆ.
ನಿನ್ನೆ ಜಾವೇದ್ ಚಾಚಾ ಮತ್ತು ಮಹಾರಾಷ್ಟ್ರ ಸರ್ಕಾರದ ಸಹಾಯದಿಂದ ವಾರಂಟ್ ಸಿಕ್ಕಿತು, ಇವತ್ತು ಮತ್ತೊಂದು ದಿನ, ಇನ್ನೊಂದು ಎಫ್ಐಆರ್.. ಎಂದಿರುವ ಕಂಗನಾ, 'ನೀವೆಷ್ಟೇ ಟಾರ್ಚರ್ ಕೊಡಿ.. ನನ್ನ ಮನೆ ಧ್ವಂಸ ಮಾಡಿ.. ಅಥವಾ ನನ್ನನ್ನು ಜೈಲಿಗೆ ಕಳಿಸಿ, ಇಲ್ಲವೇ ನನ್ನ ವಿರುದ್ಧ ಸುಳ್ಳು ಹೇಳಿ ಅಪಪ್ರಚಾರ ಮಾಡಿಸಿ. ಏನೇ ಆದರೂ ನಾನು ಹೆದರುವುದಿಲ್ಲ. ನಾನು ರೆಬೆಲ್ ಆಗಿಯೇ ಹುಟ್ಟಿದ್ದೇನೆ, ಹಾಗೆಯೇ ಇರುತ್ತೇನೆ' ಎಂದಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ