ಬಿಜೆಪಿ ಅವಧಿಯಲ್ಲಿ ಬಡವರಿಗೆ ಮನೆ ಕೊಟ್ಟಿಲ್ಲ

vasathi minister
ಕೋಲಾರದ ರಹಮತ್​ ನಗರಕ್ಕೆ ಸಚಿವ ಜಮೀರ್​ ಅಹ್ಮದ್​ ಸೋಮವಾರ ಭೇಟಿ ನೀಡಿ ವೀಸಿದರು. ಕೊತ್ತೂರು ಜಿ.ಮಂಜುನಾಥ್​, ಜಮೀರ್​ ಅಹಮದ್​, ಲಕ್ಷಿ$್ಮದೇವಮ್ಮ, ಪ್ರಸಾದ್​ ರೆಡ್ಡಿ ಇದ್ದರು.
Published on

ಕೋಲಾರ: ಬಿಜೆಪಿ ಕಾಲದಲ್ಲಿ ಸ್ಲಂ ಬೋರ್ಡ್​ ಅಥವಾ ರಾಜೀವ್​ ಗಾಂಧಿ ನಿಗಮದಿಂದ ಮನೆ ಕೊಟ್ಟಿದ್ದೀವಿ ಎಂದು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ವಸತಿ ಸಚಿವ ಜಮೀರ್​ ಅಹ್ಮದ್​ ಸವಾಲು ಹಾಕಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿರುವ ಯೋಜನೆಗಳ ಜತೆಗೆ, ಬಡವರಿಗೆ ಮನೆಗಳನ್ನು ಕೊಡಲಾಗುತ್ತಿದೆ. ಸಾಧನೆ ಮುಂದಿಟ್ಟುಕೊಂಡು ಜನರ ಮುಂದೆ ಹೋಗುತ್ತಿದ್ದೇವೆ. ಬಿಜೆಪಿಯವರು ಏನೂ ಮಾಡಿಲ್ಲ, ಅವರ ಸಾಧನೆ ಶೂನ್ಯ. ಹಿಂದುಗಳನ್ನು ಮುಂದಿಟ್ಟುಕೊಂಡು ಮುಸಲ್ಮಾನರನ್ನು ಟೀಕೆ ಮಾಡುವುದೇ ಅವರ ಕೆಲಸ ಎಂದು ದೂರಿದರು.

ಚುನಾವಣೆ ವೇಳೆ ಘೋಷಣೆ ಮಾಡಿದಂತೆ ಪಂಚ ಗ್ಯಾರಂಟಿ ಜಾರಿಗೆ ತಂದು ಮಾತು ಉಳಿಸಿಕೊಂಡಿದ್ದೇವೆ. ಬಿಜೆಪಿಯವರು ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಆವಾಸ್​ ಯೋಜನೆಯಿಂದ ಒಂದು ಲಕ್ಷ ಮನೆಗಳನ್ನು ನೀಡಿದ್ದೇವೆ ಎಂದು ಹೇಳುತ್ತಿದ್ದಾರೆ. ಅದರಲ್ಲಿ ಕರ್ನಾಟಕ್ಕೆ ಎಷ್ಟು ಕೊಟ್ಟಿದ್ದೇವೆ ಎಂದು ಹೇಳಲಿ. ಅದರಲ್ಲೂ ಶೇ.18 ಜಿಎಸ್​ಟಿ ವಿಧಿಸಿ ಹಣ ವಾಪಸ್​ ಕಿತ್ತುಕೊಂಡಿದ್ದಾರೆ ಎಂದರು.

ರಾಜ್ಯದಲ್ಲಿ ಬೊಮ್ಮಾಯಿ ಮತ್ತು ಕುಮಾರಸ್ವಾಮಿ ಅವಧಿಯಲ್ಲೂ ಮನೆಗಳನ್ನು ಕೊಡಲು ಸಾಧ್ಯವಾಗಿಲ್ಲ. ಕೇವಲ ಮನೆಗಳನ್ನು ಘೋಷಣೆ ಮಾಡಿದರೇ ಹೊರತು ಹಣ ಕೊಟ್ಟಿರಲಿಲ್ಲ. ಈ ಬಗ್ಗೆ ಸಿದ್ದರಾಮಯ್ಯ ಅವರು ಸರ್ಕಾರದ ಗಮನಕ್ಕೆ ತಂದು ಬಾಕಿ ಇದ್ದ 9 ಸಾವಿರ ಕೋಟಿ ರೂ. ಬಿಡುಗಡೆ ಮಾಡಿಸಿ ಬಡವರಿಗೆ ಕೊಡಿಸಲಾಗಿದೆ ಎಂದು ತಿಳಿಸಿದರು.

ಜೆಡಿಎಸ್​ನಲ್ಲಿ 2004ರಲ್ಲಿ 59 ಶಾಸಕರಿದ್ದರು, ಆಗ ನಾನು ಸಹ ಜೆಡಿಎಸ್​ನಲ್ಲಿದ್ದೆ, ಬಹಳಷ್ಟು ಪಾಪುಲರ್​ ಆದರೂ ಆ ನಂತರ ಶಾಸಕ ಸಂಖ್ಯೆ ಕುಸಿಯಿತು. ಮುಂದೆ ಸರ್ಕಾರ ರಚನೆ ಮಾಡಲು ಸಾಧ್ಯವಾಗುವುದಿಲ್ಲ ಎಂದರು.

ಸಿಎಂ ಕಾರ್ಯದರ್ಶಿ ಹಾಗೂ ಎಂಎಲ್ಸಿ ನಜೀರ್​ ಅಹಮದ್​, ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಎಂಎಲ್ಸಿ ಅನಿಲ್ ಕುಮಾರ್ ಹಾಜರಿದ್ದರು.

ಮನೆಗಳ ನಿರ್ಮಾಣ

ಕೋಲಾರ ತಾಲೂಕಿನ ಸಂಗೋಡಹಳ್ಳಿ ಮತ್ತು ಖಾದ್ರಿಪುರ ಸಮೀಪ 20 ವರ್ಷಗಳ ಹಿಂದೆ ವಸತಿ ನಿವೇಶನ ನಿರ್ಮಿಸಲು ಸರ್ಕಾರಿ ಜಾಗ ಗುರುತಿಸಿದ್ದು, ಹಂಚಿಕೆ ಮಾಡಲು ಕ್ರಮವಹಿಸಲಾಗಿತ್ತು. ಅದು ಹಾಗೇ ನನೆಗುದಿಗೆ ಬಿದ್ದಿದ್ದು, ಜಾಗ ಪರಿಶೀಲನೆ ಮಾಡಲಾಗಿದೆ. ಶ್ರೀ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದು ಸಚಿವ ಜಮೀರ್​ ಅಹ್ಮದ್​ ಹೇಳಿದರು. ಬಡವರು ಮನೆ ನಿರ್ಮಾಣ ಮಾಡಿಕೊಳ್ಳಬೇಕಾದರೆ 7.5 ಲಕ್ಷ ರೂ. ವೆಚ್ಚವಾಗುತ್ತದೆ. ಸಿಎಂ ಅವರೊಂದಿಗೆ ಚರ್ಚಿಸಿ ರಾಜೀವ್​ ಗಾಂಧಿ ವಸತಿ ಯೋಜನೆ ಸೇರಿ ಇತರ ವಸತಿಗಳಡಿ ವಸತಿ ನಿರ್ಮಾಣ ಮಾಡಿಕೊಡಲಾಗುವುದು ಎಂದರು.

ಬೈಕ್​ನಲ್ಲಿ ರೈಡ್​

ನೇರ ಕೋಲಾರಕ್ಕೆ ಆಗಮಿಸಿದ ವಸತಿ ಸಚಿವ ಜಮೀರ್​ ಅಹ್ಮದ್​ ಅವರು, ಬೈಕ್​ ಚಾಲನೆ ಮಾಡಿಕೊಂಡು ರಹಮತ್​ ನಗರ, ಖಾದ್ರಿಪುರ, ಸಂಗೋಡಹಳ್ಳಿ ಬಡಾವಣೆಗಳಿಗೆ ಭೇಟಿ ನೀಡಿದರು. ಸ್ಥಳಿಯ ಸಮಸ್ಯೆಗಳನ್ನು ಆಲಿಸಿದರು, ಸ್ಥಳದಲ್ಲಿದ್ದ ಅಧಿಕಾರಿಗಳ್ನು ಕರೆಯಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸೂಚಿಸಿದರು.

ರಹಮತ್​ ನಗರದಲ್ಲಿ ಮಳೆ ಬಂದರೆ ಮನೆಗಳಿಗೂ ನೀರು ನುಗ್ಗುವ ಕುರಿತು ಸ್ಥಳಿಯರು ಸಚಿವರ ಗಮನಕ್ಕೆ ತಂದರು. ಆಗ ಶಾಸಕ ಕೊತ್ತೂರು ಜಿ.ಮಂಜುನಾಥ್​ ರಾಜಕಾಲುವೆ ಇದೆ, ತ್ಯಾಜ್ಯವನ್ನು ತಂದು ಹಾಕಬೇಡಿ, ಇದರಿಂದಲೇ ನೀರು ನೇರವಾಗಿ ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ಇನ್ನಾದರು ಸ್ಥಳಿಯರು ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net