

ಬೆಂಗಳೂರು: ಧರ್ಮಸ್ಥಳ ಆಸುಪಾಸಿನಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎನ್ನಲಾದ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಎಸ್ ಐಟಿ ರಚಿಸಿರುವುದನ್ನು ಸ್ವಾಗತಿಸುವೆ. ಈ ತನಿಖೆ ನಿಷ್ಪಕ್ಷಪಾತವಾಗಿ ನಡೆದು ಸತ್ಯ ಹೊರಬರಬೇಕು. ಯಾರನ್ನೋ ಸಿಕ್ಕಿ ಹಾಕಿಸುವ ರಹಸ್ಯ ಕಾರ್ಯಸೂಚಿ ಬೇಡವೆಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಒತ್ತಾಯಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಸೋಮವಾರ ಮಾತನಾಡಿದ ಅವರು, ಎಸ್ ಐಟಿ ತನಿಖಾ ವರದಿ ಸಲ್ಲಿಸಿ, ಊಹಾಪೋಹ ಹಾಗೂ ಚರ್ಚೆಗಳಿಗೆ ತೆರೆ ಎಳೆಯುವ ಅಗತ್ಯವಿದೆ. ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಕೋರ್ಟ್ ಗೆ ಹೇಳಿಕೆ ನೀಡಿದ ವ್ಯಕ್ತಿಯ ಹಿನ್ನೆಲೆ ಏನು ? 20 ವರ್ಷಗಳ ನಂತರ ಜ್ಞಾನೋದಯ ಆಗಿದ್ಹೇಗೆ ? ಓಡಿ ಹೋದದ್ದೇಕೆ ? ಸಮಸ್ಯೆ ಏನಿತ್ತು ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳಬೇಕಾಗಿದೆ ಎಂದರು.
ಪ್ರಕರಣದ ತನಿಖೆಗೆ ಎಸ್ ಐಟಿ ರಚನೆಯನ್ನು ಧರ್ಮಸ್ಥಳ ಕ್ಷೇತ್ರದ ವಕ್ತಾರರು, ನಮ್ಮ ಪಕ್ಷದ ನಾಯಕರು ಸ್ವಾಗತಿಸಿ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಎಸ್ ಐಟಿಯಲ್ಲಿರುವ ಅಧಿಕಾರಿಗಳಿಗೆ ಅನ್ಯ ಕೆಲಸವನ್ನು ಒಪ್ಪಿಸದೆ ಸಮಗ್ರ ತನಿಖೆಗಾಗಿ ಪೂರ್ಣ ಪ್ರಮಾಣದ ಅವಕಾಶವನ್ನು ಸರ್ಕಾರ ನೀಡಬೇಕು ಎಂದು ಆರ್.ಅಶೋಕ್ ಆಗ್ರಹಿಸಿದರು.
ಕರ್ನಾಟಕ ಪ್ರಕರಣದಲ್ಲಿ ಕೇರಳದ ಕಮ್ಯುನಿಸ್ಟ್ ಸರ್ಕಾರ ಮೂಗು ತೂರಿಸಿದ್ದು ಅನುಮಾನಾಸ್ಪದವಾಗಿದೆ. ಕೆಲವರ ನಡೆ-ನುಡಿಗಳು ಇದಕ್ಕೆ ಇಂಬು ನೀಡುವಂತಿವೆ. ಸಾವಿರಾರು ಶವಗಳು ಹೂತಿಟ್ಟಿದ್ದರೆ ರಾಜ್ಯದ ಯಾವುದಾದರೂ ಠಾಣೆಯಲ್ಲಿ ಪ್ರಕರಣ ದಾಖಲಾಗಬೇಕಾಗಿತ್ತು. ವಿವಾದಿತ ಪ್ರಕರಣದಲ್ಲಿ ವ್ಯಕ್ತಿ ಮುಖ್ಯವಾಗಿದ್ದು, ತಪ್ಪಿತಸ್ಥರು ಎಂದು ಸಾಕ್ಷ್ಯಾಧಾರಗಳ ಸಹಿತ ದೃಢಪಟ್ಟರೆ ಕಾನೂನು ಪ್ರಕಾರ ಕ್ರಮಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದರು.
ವ್ಯಕ್ತಿಗಳು ಬಂದು ಹೋಗುತ್ತಾರೆ. ಕೋಟ್ಯಂತರ ಭಕ್ತರು ಭೇಟಿ ದಕ್ಷಿಣ ಭಾರತದ ದೇವಸ್ಥಾನಗಳ ಪೈಕಿ ತಿರುಮಲ ವೆಂಕಟೇಶ್ವರ ಸ್ವಾಮಿ ಹಾಗೂ ಧರ್ಮಸ್ಥಳದ ಮಂಜುನಾಥೇಶ್ವರ ದೇವಸ್ಥಾನಗಳಾಗಿವೆ. ಸಾವಿರಾರು ವರ್ಷಗಳ ಇತಿಹಾಸವುಳ್ಳ ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯತೆ, ಹಿಂದುಗಳ ಭಾವನೆಗೆ ಧಕ್ಕೆ ತರಬಾರದು ಎಂಬ ಕಳಕಳಿ ವ್ಯಕ್ತಪಡಿಸಿದರು.
ಈ ಪ್ರಕಣದಲ್ಲಿ ವ್ಯಕ್ತಿ ಮುಖ್ಯವಾಗಬೇಕೋ ಹೊರತು ಪವಿತ್ರ ಕ್ಷೇತ್ರವಲ್ಲ. ಅನ್ಯಕೋಮು, ಪವಿತ್ರ ಸ್ಥಳಗಳ ವಿಷಯ ಬಂದಾಗ ಯಾರೊಬ್ಬರೂ ಮಾತನಾಡುವುದಿಲ್ಲ. ಅದೇ ಹಿಂದುಗಳು, ಧಾರ್ಮಿಕ ನಂಬಿಕೆ ಹಾಗೂ ಕ್ಷೇತ್ರಗಳ ಬಗ್ಗೆ ಎಲ್ಲರೂ ಪೈಪೋಟಿಗೆ ಬಿದ್ದವರಂತೆ ಮಾತನಾಡುತ್ತಾರೆ. ಇದೇ ಹಿಂದುಗಳ ದೊಡ್ಡ ದೌರ್ಬಲ್ಯವೆಂದು ಆರ್.ಅಶೋಕ್ ಬೇಸರ ವ್ಯಕ್ತಪಡಿಸಿದರು.