ಮಹಿಳಾ ವಿಶ್ವಕಪ್​ನಲ್ಲೂ ಮುಂದುವರಿದ 'ನೋ ಹ್ಯಾಂಡ್​ಶೇಕ್'​! ಪಾಕ್​ ಕ್ಯಾಪ್ಟನ್​ಗೆ ಕೈಕುಲುಕದ ಹರ್ಮನ್ಪ್ರೀತ್ ಕೌರ್ | IND vs PAK

ವಿಜಯವಾಣಿ (26)
Published on

IND vs PAK: ಇತ್ತೀಚೆಗಷ್ಟೇ ದುಬೈನಲ್ಲಿ ಮುಕ್ತಾಯಗೊಂಡ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಪುರುಷರ ತಂಡ ಭರ್ಜರಿ ಜಯ ಸಾಧಿಸಿತು. ಇದರ ಬೆನ್ನಲ್ಲೇ ಮಹಿಳಾ ಏಕದಿನ ವಿಶ್ವಕಪ್​ ಟೂರ್ನಿ ಆರಂಭಗೊಂಡಿದ್ದು, ಪಾಕಿಸ್ತಾನ ಮತ್ತು ಟೀಮ್ ಇಂಡಿಯಾ ತಂಡಗಳು ಇಂದು ಮುಖಾಮುಖಿಯಾಗಿವೆ. ಆದರೆ, ಇಲ್ಲಿಯೂ ಹಸ್ತಲಾಘವ ಮಾಡದೆ ಮುಂದೋಗುವ ನೀತಿ ಮುಂದುವರಿದಿದೆ.

​ಇಂದು ಕೊಲೊಂಬೊದ ಆರ್​. ಪ್ರೇಮಾದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಟಾಸ್​ಗೆ ಎರಡೂ ತಂಡಗಳ ನಾಯಕಿಯರನ್ನು ಕರೆಯಲಾಯಿತು. ಈ ವೇಳೆ ಟಾಸ್​ ಗೆದ್ದ ಬಳಿಕ ಪಾಕ್​ ಕ್ಯಾಪ್ಟನ್​ ಫಾತೀಮಾ ಸನಾಗೆ ಹಸ್ತಲಾಘವ ಮಾಡಲು ನಿರಾಕರಿಸಿದ ಟೀಮ್ ಇಂಡಿಯಾ ನಾಯಕಿ ಹರ್ಮನ್ಪ್ರೀತ್ ಕೌರ್, ಏಷ್ಯಾಕಪ್​ನಲ್ಲಿ ಸೂರ್ಯಕುಮಾರ್​ ಯಾದವ್​ ತೆಗೆದುಕೊಂಡ ನಿರ್ಧಾರವನ್ನೇ ಇಲ್ಲಿಯೂ ಅನುಸರಿಸಿದ್ದಾರೆ.

ಏನಿದು ಹ್ಯಾಂಡ್​ಶೇಕ್ ವಿವಾದ?

ಪಹಲ್ಗಾಮ್​ ಉಗ್ರರ ದಾಳಿಯಲ್ಲಿ ಪಾಕ್​ ಕೃತ್ಯವನ್ನು ಖಂಡಿಸಿದ ಟೀಮ್ ಇಂಡಿಯಾ, ಪಾಕ್​ ತಂಡದ ಆಟಗಾರರೊಂದಿಗೆ ಕೈಕುಲುಕಲು ಇಚ್ಛಿಸಲಿಲ್ಲ. ಈ ನಿರ್ಧಾರವನ್ನು ಸೂರ್ಯಕುಮಾರ್ ಯಾದವ್​ ಪಡೆ, ಏಷ್ಯಾಕಪ್​ ಟೂರ್ನಿಯ ಮೊದಲ ಪಂದ್ಯದಿಂದ ಫೈನಲ್​ ಪಂದ್ಯದವರೆಗೂ ಅದೇ ರೀತಿ ಮುಂದುವರಿಸಿತು. ಆಡಿದ ಮೂರು ಪಂದ್ಯದಲ್ಲಿಯೂ ಪಾಕ್​ ಕ್ಯಾಪ್ಟನ್​ ಅಥವಾ ಆಟಗಾರರಿಗೆ ಹಸ್ತಲಾಘವ ಮಾಡಲಿಲ್ಲ. ಈ ಮೂಲಕ ಪಾಕ್​ಗೆ ಭಾರೀ ಮುಖಭಂಗ ಉಂಟುಮಾಡಿತು. ಇದೀಗ ಅದೇ​ ಹಾದಿಯನ್ನು ಅನುಸರಿಸಿರುವ ಭಾರತ ಮಹಿಳಾ ತಂಡದ ನಾಯಕಿ, ಇಂದಿನ ವಿಶ್ವಕಪ್​ ಪಂದ್ಯದಲ್ಲಿ ಪಾಕ್​ ಕ್ಯಾಪ್ಟನ್​ಗೆ ಕೈಕೊಡದೆ, ಟಾಸ್​ ಆಗ್ತಿದ್ದಂತೆ ಪೆವಿಲಿಯನ್​ಗೆ ತೆರಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net