ಹೂ, ಹಣ್ಣು, ಹಾಲು, ತರಕಾರಿ ವ್ಯಾಪಾರಕ್ಕೆ ಇಲ್ಲ ಜಿಎಸ್‌ಟಿ: ವಾಣಿಜ್ಯ ತೆರಿಗೆ ಅಧಿಕಾರಿಗಳು ಹೇಳಿದ ಪರಿಹಾರವೇನು?

Meera pandith
Published on

ಬೆಂಗಳೂರು: ಹಾಲು, ಹಣ್ಣು, ತರಕಾರಿ, ಹೂ ಹೀಗೆ ಕೆಲವೊಂದು ಉತ್ಪನ್ನಗಳ ಮಾರಾಟಕ್ಕೆ ತೆರಿಗೆ ಪಾವತಿಸಬೇಕಿಲ್ಲ. 40 ಲಕ್ಷ ರೂ. ವಹಿವಾಟು ನಡೆಸಿರುವವರಿಗೆ ವಾಣಿಜ್ಯ ತೆರಿಗೆ ಇಲಾಖೆಯು ನೋಟಿಸ್ ನೀಡಿದೆ. ನೋಟಿಸ್ ನೀಡಿದ ಮಾತ್ರಕ್ಕೆ ಹೆದರಬೇಕಿಲ್ಲ. ವಹಿವಾಟು ಮಿತಿ ದಾಟಿದವರು ಕೂಡ ಜಿಎಸ್‌ಟಿ ಪಾವತಿಸಬೇಕಿಲ್ಲ ಎಂದು ವಾಣಿಜ್ಯ ತೆರಿಗೆ ಇಲಾಖೆ ಕೋರಮಂಗಲ ವಿಭಾಗದ ಜಂಟಿ ಆಯುಕ್ತೆ (ಆಡಳಿತ) ಮೀರಾ ಪಂಡಿತ್ ಅಭಯ ನೀಡಿದ್ದಾರೆ.

ಸಣ್ಣಪುಟ್ಟ ವ್ಯವಹಾರ ನಡೆಸುವ ವರ್ತಕರಿಗೂ ವಾಣಿಜ್ಯ ತೆರಿಗೆಗಳ ಇಲಾಖೆ ನೋಟಿಸ್ ನೀಡಿದ್ದು, ರಾಜ್ಯಾದ್ಯಂತ ಆತಂಕ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಗ್ರಾಹಕರಿಗೆ ವಾಣಿಜ್ಯ ತೆರಿಗೆ ಕುರಿತು ಅರಿವು ಮೂಡಿಸುವ ಸಭೆಯಲ್ಲಿ ಅವರು ಮಾತನಾಡಿದರು.

ನೋಟಿಸ್ ಪಡೆದವರು ಏನು ಮಾಡಬೇಕು?

ಯುಪಿಐ ಮೂಲಕ 40 ಲಕ್ಷ ರೂ. ವಹಿವಾಟು ಮೀರಿರುವ ಪ್ರಕರಣಗಳಿಗೆ ನೋಟಿಸ್ ನೀಡಲಾಗಿದೆ. ೆನ್ ಪೇ, ಪೇಟಿಎಂ ಹಾಗೂ ಆನ್‌ಲೈನ್ ಪೇಮೆಂಟ್‌ಗಳಲ್ಲಿನ ಪ್ರಕರಣಗಳನ್ನು ಪರಿಗಣಿಸಲಾಗಿದೆ. ನೋಟಿಸ್ ನೀಡಿದ ತಕ್ಷಣ ಜಿಎಸ್‌ಟಿ ವ್ಯಾಪ್ತಿಗೆ ಬರುವುದಿಲ್ಲ. ಪ್ರತಿ ವರ್ತಕರಿಗೂ ಪ್ರತ್ಯುತ್ತರ ಸಲ್ಲಿಸುವ ಹಾಗೂ ವೈಯಕ್ತಿಕವಾಗಿ ಅಹವಾಲು ಸಲ್ಲಿಸಲು ಅವಕಾಶ ನೀಡಲಾಗಿದೆ. ತಮ್ಮ ವಹಿವಾಟು ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆ/ಸಾಕ್ಷಿಗಳನ್ನು ಸಲ್ಲಿಸಬಹುದು. ತಾವು ಸಲ್ಲಿಸುವ ಸಾಕ್ಷಿ/ ದಾಖಲೆಗಳ ಸಂಪೂರ್ಣ ಪರಿಶೀಲನೆಯ ನಂತರವೇ ತೆರಿಗೆ ಸಾಧ್ಯತೆ ಇದೆಯೇ ಅಥವಾ ಇಲ್ಲವೇ, ನೋಂದಣಿಯ ಅವಶ್ಯಕತೆ ಇದೆಯೇ ಎಂದು ನಿರ್ಧರಿಸಲಾಗುತ್ತದೆ. ಇದಕ್ಕಾಗಿ ಟೋಲ್ ಫ್ರೀ ನಂಬರ್ ಮತ್ತು ಸಹಾಯವಾಣಿ ಆರಂಭಿಸಲಾಗಿದೆ. ವರ್ತಕರು ತಮ್ಮಲ್ಲಿನ ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಜಿಎಸ್‌ಟಿ ವ್ಯಾಪ್ತಿ ತಿಳಿಯುವುದು ಹೇಗೆ?

ಹೂ, ಹಣ್ಣು, ತರಕಾರಿ, ಬೇಕರಿ, ಕಾಂಡಿಮೆಂಟ್ಸ್... ಹೀಗೆ ಸಣ್ಣಪುಟ್ಟ ವ್ಯವಹಾರ ಮಾಡುವವರಿಗೂ ನೋಟಿಸ್ ನೀಡಲಾಗಿದೆ. ಈ ವಹಿವಾಟಿನಲ್ಲಿ ಜಿಎಸ್‌ಟಿ ವ್ಯಾಪ್ತಿಗೆ ಬರುವಂತಹ ಪದಾರ್ಥಗಳಿಗೆ ಮಾತ್ರ ಜಿಎಸ್‌ಟಿ ವಿಧಿಸಲಾಗುತ್ತದೆ. ಉದಾ- ತರಕಾರಿ ಅಂಗಡಿಯಲ್ಲಿ ತಾಜಾ ಹಣ್ಣು, ತರಕಾರಿ ಮಾರಾಟ ಮಾಡುತ್ತಿದ್ದರೆ ಮತ್ತು ಅದಕ್ಕೆ ಸಂಬಂಧಿಸಿದ ವಹಿವಾಟನ್ನು ಜಿಎಸ್‌ಟಿ ಎಂದು ಪರಿಗಣಿಸುವುದಿಲ್ಲ. ಅದೇ ತರಕಾರಿ ಅಂಗಡಿಯಲ್ಲಿ ಪ್ಯಾಕ್ ಮಾಡಿರುವ ಒಣ ಹಣ್ಣುಗಳು, ಪನ್ನೀರ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ನಂತಹ ಪ್ಯಾಕ್‌ಗಳಿಗೆ ಜಿಎಸ್‌ಟಿ ವಿಧಿಸಲಾಗುತ್ತದೆ. ಜಿಎಸ್‌ಟಿ ವ್ಯಾಪ್ತಿಗೆ ಎಷ್ಟು ಬರಲಿದೆ ಎಂದು ಪರಿಶೀಲಿಸಿದ ನಂತರ ಪಾವತಿಸಬೇಕಾದ ಮೊತ್ತವನ್ನು ಇಲಾಖೆ ಅಧಿಕಾರಿಗಳು ನಿರ್ಧರಿಸಲಿದ್ದಾರೆ.

ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ

ಕೇವಲ ಕರ್ನಾಟಕದಲ್ಲಿ ಮಾತ್ರ ಜಿಎಸ್‌ಟಿ ನೋಟಿಸ್ ನೀಡಲಾಗಿದೆ ಎಂಬ ಮನಸ್ಥಿತಿ ಇದೆ. ಆದರೆ. ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು ಸೇರಿ ದೇಶದ ಹಲವು ರಾಜ್ಯಗಳಲ್ಲಿ ನೋಟಿಸ್ ನೀಡುವ ಕಾರ್ಯ ಆರಂಭವಾಗಿದೆ ಎಂದು ಮೀರಾ ಪಂಡಿತ್ ಸ್ಪಷ್ಟಪಡಿಸಿದರು.

ತೆರಿಗೆ ವಿನಾಯಿತಿ ವಸ್ತುಗಳು

ಹಾಲು, ತಾಜಾ ಹಣ್ಣು, ತರಕಾರಿ, ಹೂ, ಮೀನು, ಮಾಂಸ, ಸಾಲದ ಹಣ ಮತ್ತು ಶಾಲಾ ಶುಲ್ಕವು ತೆರಿಗೆ ವಿನಾಯಿತಿಗೆ ಒಳಪಡಲಿದೆ.

1,400 ಅಲ್ಲ 3,500 ಪ್ರಕರಣ

2024-25ನೇ ಸಾಲಿನಲ್ಲಿ 40 ಲಕ್ಷ ರೂ.ಗಳಿಗೂ ಅಧಿಕ ವಹಿವಾಟು ನಡೆಸಿರುವ 3,500ಕ್ಕೂ ಹೆಚ್ಚಿನ ಪ್ರಕರಣಗಳಿವೆ. ಸದ್ಯಕ್ಕೆ 1,400 ಮಂದಿಗೆ ನೋಟಿಸ್ ನೀಡಲಾಗಿದೆ. ಹಂತ ಹಂತವಾಗಿ ಉಳಿದವರಿಗೆ ನೋಟಿಸ್ ನೀಡಲಾಗುತ್ತದೆ ಎಂದು ಮೀರಾ ಪಂಡಿತ್ ತಿಳಿಸಿದರು.

ಟೋಲ್ ಫ್ರೀ ನಂಬರ್- 1800 425 6300

ಸಹಾಯವಾಣಿ- 9845376404/ 080-25714833

ದರ ಪರಿಷ್ಕರಣೆಗೆ ವರ್ತಕರ ಮನವಿ

ಪ್ರಸ್ತುತ ಕೇವಲ ಸರಕು ವಹಿವಾಟಿಗೆ 40 ಲಕ್ಷ ರೂ. ಮತ್ತು ಸೇವೆಗಳ ವಹಿವಾಟು 20 ಲಕ್ಷ ರೂ. ನಿಗದಿ ಮಾಡಲಾಗಿದೆ. 2017ರಲ್ಲಿ ಈ ದರವನ್ನು ನಿಗದಿ ಮಾಡಲಾಗಿತ್ತು. ಈಗ ಎಂಟು ವರ್ಷಗಳಾಗಿವೆ. ಅಗತ್ಯ ವಸ್ತುಗಳ ದರ ದುಪ್ಪಟ್ಟಾಗಿದೆ. ವಹಿವಾಟಿನ ಮೊತ್ತ ಕೂಡ ಜಾಸ್ತಿಯಾಗಲಿದೆ. ಈ ಮೊತ್ತವನ್ನು ಸೇವೆಗಳ ವಹಿವಾಟಿಗೆ 20 ಲಕ್ಷ ರೂ.ಗಳಿಂದ 40 ಲಕ್ಷ ರೂ.ಗಳಿಗೆ ಮತ್ತು ಸರಕು ವಹಿವಾಟಿಗೆ 40 ಲಕ್ಷ ರೂ.ಗಳಿಗೆ ಒಂದು ಕೋಟಿ ರೂ.ಗಳಿಗೆ ಹೆಚ್ಚಿಸಬೇಕೆಂದು ವರ್ತಕರು ಒತ್ತಾಯಿಸಿದರು.

₹6 ಕೋಟಿ ವಹಿವಾಟಿ ನಡೆಸಿರುವ ಭೂಪ

ಒಂದು ವರ್ಷದಲ್ಲಿ ಯುಪಿಐ ಮೂಲಕವೇ ಬರೋಬ್ಬರಿ 6 ಕೋಟಿ ರೂ. ವಹಿವಾಟು ನಡೆಸಿರುವ ವರ್ತಕನೊಬ್ಬನಿಗೆ ನೋಟಿಸ್ ಜಾರಿ ಮಾಡಲಾಗಿದೆ. ಯಾವ ಬಗೆಯ ವಹಿವಾಟು ನಡೆಸುತ್ತಿದ್ದಾರೆ ಎಂಬುದು ಅವರು ಮಾಹಿತಿಯನ್ನು ನೀಡಿದ ನಂತರವಷ್ಟೇ ತಮಗೆ ತಿಳಿಯಲಿದೆ ಎಂದು ಜಂಟಿ ಆಯಕ್ತರು ತಿಳಿಸಿದರು.

ತೆರಿಗೆ ಕಡಿಮೆ ಮಾಡಲು ಅವಕಾಶವಿದೆ

ಎಲ್ಲರ ವಾರ್ಷಿಕ ವಹಿವಾಟಿಗೂ ಶೇ.18 ಜಿಎಸ್‌ಟಿ ಹಾಕಿರುವ ಬಗ್ಗೆ ಹಲವರು ಆಕ್ಷೇಪ ಎತ್ತಿದ್ದಾರೆ. ನಿಯಮಗಳ ಪ್ರಕಾರ, ನಾವು ಒಮ್ಮೆ ತೆರಿಗೆ ವಿಧಿಸಿದ ಬಳಿಕ ಅದನ್ನು ಇಳಿಸಬಹುದೇ ಹೊರತು ಏರಿಸಲು ನಿಯಮಗಳಲ್ಲಿ ಅವಕಾಶವಿಲ್ಲ. ಆದ್ದರಿಂದ ನಾವು ಗರಿಷ್ಠ ತೆರಿಗೆಯನ್ನು ಹಾಕಿ ನೋಟಿಸ್ ನೀಡಿದ್ದೇವೆ. ವರ್ತಕರು ತಮ್ಮಲ್ಲಿನ ವಹಿವಾಟಿನ ಮಾಹಿತಿ ನೀಡಿದಾಗ ಅದರಲ್ಲಿ ಶೇ.5, ಶೇ.12 ಮತ್ತು ತೆರಿಗೆ ಇಲ್ಲದ ಸರಕುಗಳ ವ್ಯವಹಾರವನ್ನು ಪರಿಶೀಲಿಸಿ ಅದಕ್ಕೆ ಅನುಗುಣವಾಗಿ ತೆರಿಗೆ ನಿಗದಿ ಪಡಿಸಲಾಗುವುದು. ರಾಜಿ ತೆರಿಗೆಯಲ್ಲಿ ವರ್ತಕರು/ತಯಾರಕರು ಶೇ.1, ಹೋಟೆಲ್‌ಗಳು ಶೇ.5 ಮತ್ತು ಸೇವೆಗಳು ಶೇ.6 ತೆರಿಗೆ ದರ ಸಲ್ಲಿಸಬೇಕಾಗುತ್ತದೆ ಎಂದು ಆಯುಕ್ತರು ಮಾಹಿತಿ ನೀಡಿದರು.

40 ಲಕ್ಷ ರೂ. ವಹಿವಾಟು ನಡೆಸಿದ ಮಾತ್ರಕ್ಕೆ ಜಿಎಸ್‌ಟಿ ವ್ಯಾಪ್ತಿಗೆ ಬರುವುದಿಲ್ಲ. ಯಾವ ಉದ್ದೇಶದಿಂದ ವಹಿವಾಟು ನಡೆಸಲಾಗಿದೆ ಎಂಬುದನ್ನು ಇಲಾಖೆಗೆ ಮಾಹಿತಿ ನೀಡಿದರೆ ತಮ್ಮ ವ್ಯಾಪ್ತಿ ಎಷ್ಟು ಎಂಬ ಸ್ಪಷ್ಟತೆ ಸಿಗಲಿದೆ. ಹೀಗಾಗಿ ಯಾರೊಬ್ಬರೂ ಹೆದರಬೇಕಿಲ್ಲ. - ಮೀರಾ ಪಂಡಿತ್, ಜಂಟಿ ಆಯುಕ್ತೆ (ಆಡಳಿತ) ವಾಣಿಜ್ಯ ತೆರಿಗೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net