

ಪ್ರಶಾಂತ ಭಾಗ್ವತ ಉಡುಪಿ
ಗ್ರಾಮೀಣ ಭಾಗ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ ಎಂದು ಜನನಾಯಕರು ಆಗಾಗ ವೇದಿಕೆಯಲ್ಲಿ ಹಲುಬುತ್ತಾರೆ. ಆದರೆ, ತಂತ್ರಜ್ಞಾನದ ಈ ಯುಗದಲ್ಲೂ ಹಲವು ಗ್ರಾಮಗಳಿಗೆ ಮೂಲ ಸೌಕರ್ಯ ಮರೀಚಿಕೆಯಾಗಿದೆ.
ಹಳ್ಳಿಗಳ ಸಂಪರ್ಕಕ್ಕೆ ರಸ್ತೆ ಪ್ರಮುಖ ಸೌಲಭ್ಯವಾಗಿದೆ. ಊರು-ಗ್ರಾಮಗಳನ್ನು ದಾಟಿ ನಗರ ಭಾಗ ಸೇರಲು ಜನ ಜೀವನಕ್ಕೆ ಅದು ಮೂಲ ಆಸರೆಯಾಗುತ್ತದೆ. ಆದರೆ, ಬುದ್ಧಿವಂತರ ಜಿಲ್ಲೆ ಉಡುಪಿ ತಾಲೂಕಿನ ಜಡ್ಡು ಗ್ರಾಮಕ್ಕೆ ರಸ್ತೆಯದೇ ಕೊರಗಾಗಿದೆ.
ಮಳೆಗಾಲ ಆರಂಭವಾಯಿತೆಂದರೆ ಜಡ್ಡು ಗ್ರಾಮದ ಜನರ ಗೋಳು ಹೇಳತೀರದು. ಕೆಂಪು ಮಣ್ಣಿನ ರಸ್ತೆಯಾಗಿದ್ದರಿಂದ ಕೆಸರು ಗದ್ದೆಯಂತಾಗುತ್ತದೆ. ಯಾವುದೇ ವಾಹನಗಳೂ ಮೂರು ತಿಂಗಳ ಕಾಲ ಈ ಗ್ರಾಮದತ್ತ ಸುಳಿಯುವುದೂ ಇಲ್ಲ. ನಡೆಯಲೂ ಆಗದ ರೀತಿಯಲ್ಲಿ ಮಣ್ಣಿನ ರಸ್ತೆ ಹದಗೆಡುತ್ತದೆ.
ಈ ಭಾಗದಲ್ಲಿ ನಾಲ್ಕು ಶಾಲೆಗಳಿದ್ದು, ಮಕ್ಕಳನ್ನು ಕೊಂಡೊಯ್ಯಲೂ ಈಗ ಶಾಲಾ ವಾಹನವೂ ಗ್ರಾಮದತ್ತ ಬರುತ್ತಿಲ್ಲ. ಹೀಗಾಗಿ ಜಡ್ಡು ಗ್ರಾಮದ ಮಕ್ಕಳನ್ನು ಶಾಲೆಗೆ ಕಳುಹಿಸಲು ಗುಂಡುಪಾದೆ, ಪೆರ್ಣಂಕಿಲ, ಕೋಡಿಬೆಟ್ಟು, ಹಿರಿಯಡ್ಕದತ್ತ ಸಾಗಿ ಸುಮಾರು 10 ಕಿಮೀ ಸುತ್ತುಬಳಸಿ ತೆರಳಬೇಕಿದೆ. ಊರಿನಲ್ಲಿರುವ ಉದ್ಯೋಗಿಗಳೂ ಸಹ ಪಟ್ಲದವರೆಗೆ 2 ಕಿಮೀ ನಡೆದು ಹೋಗಿ ಬಸ್ ಹತ್ತುವ ಸಂದಿಗ್ಧ ಸ್ಥಿತಿಯಿದೆ.
ಪಟ್ಲಬೈಲು ಮಾರ್ಗದಲ್ಲಿ ಸೇತುವೆ ಕಾಮಗಾರಿಯಿಂದ ಸಂಪರ್ಕ ಕಡಿತವಾಗಿದೆ. ಇತ್ತ ಜಡ್ಡು ಗ್ರಾಮದ ರಸ್ತೆ ಮಳೆಯಿಂದಾಗಿ ಕೆಸರು ಗದ್ದೆಯಂತಾಗಿದೆ. ನಾವು ಸಂಚಾರ ಮಾಡುವುದಾದರೂ ಹೇಗೆ? ಪ್ರತಿವರ್ಷ 5-10 ಮೀಟರ್ ಮಾತ್ರ ಕಾಂಕ್ರೀಟ್ ರಸ್ತೆ ಮಾಡುತ್ತಾರೆ. ಕೇವಲ 700 ಮೀಟರ್ ಉದ್ದದ ರಸ್ತೆ ಇದಾಗಿದ್ದು, 20 ವರ್ಷವಾದರೂ ಡಾಂಬರ್ ಹಾಕಿಲ್ಲ. ಜಡ್ಡುಕೆರೆ ಮುಂಭಾಗದ ರಸ್ತೆಯಲ್ಲಿ ನಡೆಯಲೂ ಆಗದು. ನಮ್ಮೂರ ಜನರ ಗೋಳು ಕೇಳುವವರಿಲ್ಲ. | ರಾಮದಾಸ ಪ್ರಭು. ಜಡ್ಡು ನಿವಾಸಿ ನನ್ನ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ರಸ್ತೆ ಹದಗೆಟ್ಟಿರುವ ವಿಚಾರ, ಕೆಲವೆಡೆ ರಸ್ತೆಯೇ ಇಲ್ಲದ ವಿಷಯ ತಿಳಿದಿದೆ. ಜನರೂ ಸಹ ರಸ್ತೆ ರಿಪೇರಿ, ಡಾಂಬರೀಕರಣ ಮಾಡಿಸಿಕೊಡುವಂತೆ ಮನವಿ ನೀಡುತ್ತಿದ್ದಾರೆ. ಆದರೆ, ಸರ್ಕಾರದಿಂದ ಅಭಿವೃದ್ಧಿ ಕಾರ್ಯಕ್ಕೆ ಅನುದಾನವೇ ಬರುತ್ತಿಲ್ಲ. ಹೀಗಾಗಿ ತ್ವರಿತ ಸ್ಪಂದನೆ ಕಷ್ಟವಾಗುತ್ತಿದೆ. ಆದ್ಯತೆಯ ಮೇರೆಗೆ ರಸ್ತೆ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು. | ಗುರ್ಮೆ ಸುರೇಶ ಶೆಟ್ಟಿ. ಕಾಪು ಶಾಸಕ