

* ನಿರಂತರ ನೀರು ಯೋಜನೆ ತಂದ ಪೀಕಲಾಟ
* ವಾಹನ ಸವಾರರಿಗೆ ಗುಂಡಿ ಗಂಡಾಂತರ
ಗಂಗಾಧರ್ ಬೈರಾಪಟ್ಟಣ ರಾಮನಗರ
ಜಿಲ್ಲಾ ಕೇಂದ್ರ ರಾಮನಗರಕ್ಕೆ ನಿರಂತರ ನೀರು ಪೂರೈಕೆ ಮಾಡುವ ಯೋಜನೆ ಅಧಿಕೃತ ಉದ್ಘಾಟನೆಗೆ ಇನ್ನೂ ಭಾಗ್ಯ ಕೂಡು ಬಂದಿಲ್ಲ. ಇದರ ಹೊರತಾಗಿಯೂ ಸಂಪೂರ್ಣ ಯೋಜನೆ ಜಾರಿಗೆ ಇನ್ನೂ ಎರಡು ತಿಂಗಳು ಕಾಯಬೇಕಾದ ಅನಿವಾರ್ಯತೆ ಇದೆ. ಆದರೆ, ಈ ಯೋಜನೆ ನಗರವಾಸಿಗಳಿಗೆ ಧೂಳಿನ ಮಜ್ಜನಕ್ಕೆ ಕಾರಣವಾಗಿದೆ. ನಿರಂತರ ನೀರು ತರುವ ಯೋಜನೆ ಜನತೆಯ ನೀರಿನ ಬವಣೆ ನೀಗಿಸಲಿದೆಯಾದರೂ, ಧೂಳಿನ ಸಮಸ್ಯೆ ಹೆಚ್ಚಿಸಿದೆ. ನಗರದ ತುಂಬೆಲ್ಲ ರಸ್ತೆಗಳು ಗುಂಡಿ ಬಿದ್ದಿವೆ. ಇಲ್ಲಿ ಪಾದಚಾರಿಗಳು, ವಾಹನ ಸವಾರರು ಓಡಾಡುವುದೇ ಕಷ್ಟವಾಗಿದೆ. ಮಳೆಗಾಲ ಬಂದರೆ ನೀರು ನಿಂತ ಗುಂಡಿಗಳಲ್ಲಿ ಬೀಳುವ ಹೆದರಿಕೆ ಒಂದೆಡೆಯಾದರೆ, ಬೇಸಿಗೆಯಲ್ಲಿ ಧೂಳಿನ ಭಯ ಆರಂಭಗೊಂಡಿದೆ. ಬೇಸಿಗೆ ವೇಳೆಗೆ ನಗರದ ತುಂಬೆಲ್ಲ ಧೂಳು ಆವರಿಸಿ ಉಸಿರಾಟದ ತೊಂದರೆಗೆ ಒಳಗಾಗುವರ ಸಂಖ್ಯೆಯೂ ಹೆಚ್ಚುತ್ತದೆ. ಆದರೂ ಸದ್ಯಕ್ಕೆ ಈ ಸಮಸ್ಯೆಗೆ ಮುಕ್ತಿ ಸಿಗುವುದು ಅನುಮಾನ.
ಬೆಂಗಳೂರಿಗೆ ಹತ್ತಿರದಲ್ಲಿಯೇ ಇರುವ ರಾಮನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಎದುರಿಸುತಿತ್ತು. ಈ ಹಿನ್ನೆಲೆಯಲ್ಲಿ ಹಿಂದಿನ ಸಂಸದ ಡಿ.ಕೆ.ಸುರೇಶ್ ಅವರ ಒತ್ತಾಸೆ ಹಾಗೂ ಅಂದಿನ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ನಿರ್ಧಾರ ಫಲವಾಗಿ 456 ಕೋಟಿ ರೂ. ವೆಚ್ಚದ 24/7 ನಿರಂತರ ನೀರು ಪೂರೈಕೆಯ ಎಕ್ಸ್ ಪ್ರೆಸ್ ವೇ ಕಾಮಗಾರಿ ಆರಂಭಗೊಂಡಿತು. ಪೈಪ್‌ಲೈನ್ ಅಳವಡಿಕೆಗೆ ಬೇಕಾದ ಭೂಮಿ ವಶಕ್ಕೆ ಪಡೆಯುವುದು ಸೇರಿ ವಿವಿಧ ಸಮಸ್ಯೆಗಳಿಂದಾಗಿ ಯೋಜನೆ ಜಾರಿ ವಿಳಂಬವಾಗಿ ಕಳೆದ ಅಕ್ಟೋಬರ್ ವೇಳೆಗೆ ಅಂತೂ ಇಂತು ನೀರು ರಾಮನಗರಕ್ಕೆ ಬಂದಿದೆ.
ಹಿಂದೆ ಕೆಡಿಪಿ ಸಭೆ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಸೆಪ್ಟೆಂಬರ್ ಅಂತ್ಯಕ್ಕೆ ಯೋಜನೆ ಕಾಮಗಾರಿಯನ್ನು ಪೂರ್ಣಗೊಳಿಸಿ ರಾಮನಗರದ ಜನತೆಗೆ ಕುಡಿಯುವ ನೀರು ಕೊಡಬೇಕು ಎನ್ನುವ ಸೂಚನೆ ನೀಡಿದ್ದರು. ಆದರೆ, ರೈಲ್ವೆ ಕೆಳ ಸೇತುವೆ ಬಳಿ ಪೈಪ್ ಲೈನ್ ತರಲು ಇಲಾಖೆ ಅನುಮತಿ ಪಡೆಯಲು ವಿಳಂಬವಾದ ಕಾರಣ ಯೋಜನೆ ಕಾಮಗಾರಿಯೂ ನಿಧಾನವಾಯಿತು. ನಂತರ ಅಕ್ಟೋಬರ್ ವೇಳೆಗೆ ಕಾಮಗಾರಿ ಮುಗಿದು ಪ್ರಾಯೋಗಿಕವಾಗಿ ರಾಮನಗರಕ್ಕೆ ನೀರು ಹರಿಯಿತು. ಈಗಾಗಲೇ ರಾಮನಗರ ಜನತೆಗೆ ಕುಡಿಯುವ ನೀರನ್ನು ಹಳೇ ಪೈಪ್‌ಗಳ ಮೂಲಕವೇ ಹರಿಸಲಾಗುತ್ತಿದೆ. ಆದರೆ, ಇನ್ನೂ ಯೋಜನೆ ಅಧಿಕೃತವಾಗಿ ಉದ್ಘಾಟನೆಗೊಂಡಿಲ್ಲ.
ನೀರಿನ ಸಮಸ್ಯೆಗೆ ಸಂಪೂರ್ಣ ಮುಕ್ತಿ ಸಿಗುವ ವೇಳೆಗೆ ಜನತೆ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕೂಡಲೇ ರಸ್ತೆ ಸಮಸ್ಯೆಗೂ ಮುಕ್ತಿ ನೀಡುವ ಕೆಲಸವನ್ನು ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳು ಮಾಡಬೇಕಿದೆ.
--
ಪ್ರತಿ ಸಂಪರ್ಕಕ್ಕೂ ಮೀಟರ್ ಅಳವಡಿಕೆ ನಡೆಯುತ್ತಿದೆ. ಇದು ಕೊಂಚ ವಿಳಂಬವಾಗಿದ್ದು, ಫೆಬ್ರವರಿ ಅಂತ್ಯಕ್ಕೆ ಸಂಪೂರ್ಣ ಕೆಲಸ ಮುಗಿಯಲಿದ್ದು, ರಸ್ತೆ ಸಮಸ್ಯೆಗೂ ಮುಕ್ತಿ ನೀಡಲಾಗುವುದು.ಕುಸುಮ, ಎಇಇ, ನಗರ ನೀರು ಸರಬರಾಜು ಮಂಡಳಿ, ಚನ್ನಪಟ್ಟಣ ಉಪವಿಭಾಗ
---