

ಬೆಂಗಳೂರು: ರಾಜ್ಯ ಹೆದ್ದಾರಿಗಳ ಟೋಲ್ ದರದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆಯಿಲ್ಲ. ಹೊಸ ಆರ್ಥಿಕ ವರ್ಷ ಮೊದಲ ದಿನದಿಂದ ಹೆಚ್ಚಿನ ಹೊರಬೀಳಲಿದೆ ಎಂದುಕೊಂಡವರಿಗೆ ತಾತ್ಕಾಲಿಕ ನಿರಾಳತೆ ದೊರೆತಿದೆ.
ಒಪ್ಪಂದ ಕಾಲಮಿತಿ ಅನ್ವಯ ಕೆಲವು ಹೆದ್ದಾರಿಗಳ ಟೋಲ್ ದರ ಪರಿಷ್ಕರಣೆಗೆ ಪ್ರಸ್ತಾವನೆಗಳು ಲೋಕೋಪಯೋಗಿ ಇಲಾಖೆಗೆ ಸಲ್ಲಿಕೆಯಾಗಿದ್ದು, ಇನ್ನೂ ಪರಿಶೀಲನೆ ಹಂತದಲ್ಲಿದೆ.
ಪ್ರಸ್ತಾವನೆ ಸಲ್ಲಿಸಿದ ಸಂಸ್ಥೆಗಳಿಗೆ ಕೆಲವೊಂದು ಸ್ಪಷ್ಟೀಕರಣ ಪತ್ರ ಬರೆಯಲಾಗಿದೆ. ಇದಾದ ಬಳಿಕ ಮತ್ತೊಮ್ಮೆ ಪರಾಮಶಿಸಿ ಪರಿಷ್ಕೃತ ಕೋರಿಕೆಯನ್ನು ಸರ್ಕಾರದ ಮುಂದಿಡಲಾಗುತ್ತದೆ.
ಟೋಲ್ ದರ ನಿಗದಿಯು ಸರ್ಕಾರದ ನೀತಿ-ನಿರ್ಧಾರದ ಭಾಗವಾಗಿದೆ. ಹೀಗಾಗಿ ಟೋಲ್ ದರ ಮರು ಪರಿಶೀಲನೆಯು ಅಂತಿಮವಾಗಿ ಸರ್ಕಾರದ ವಿವೇಚನೆಗೆ ಬಿಟ್ಟದ್ದಾಗಿದೆ. ಟೋಲ್ ದರ ಪರಿಶೀಲನೆ ಎಂದಾಕ್ಷಣ ಹೆಚ್ಚಳವಾಗುತ್ತದೆ ಎಂದೇನಲ್ಲ. ವಸ್ತುಸ್ಥಿತಿ ಆಧರಿಸಿ ದರ ನಿಗದಿಪಡಿಸಲಿರುವ ಕಾರಣ ಕಡಿಮೆಯೂ ಆಗಬಹುದು ಎಂದು ಇಲಾಖೆ ಮೂಲಗಳು ತಿಳಿಸಿವೆ.
31 ಹೆದ್ದಾರಿಗಳು ಪರಿವರ್ತನೆ: ರಾಜ್ಯದಲ್ಲಿ 31 ರಾಜ್ಯ ಹೆದ್ದಾರಿಗಳನ್ನು ಟೋಲ್ ರಸ್ತೆಗಳನ್ನಾಗಿ ಪರಿವರ್ತಿಸಲಾಗಿದೆ. ಈ ಪೈಕಿ 21 ರಸ್ತೆಗಳು ಲೋಕೋಪಯೋಗಿ ಇಲಾಖೆ ಸುಪರ್ದಿಯಲ್ಲಿವೆ. ಉಸ್ತುವಾರಿ ಮತ್ತು ನಿರ್ವಹಣೆಯನ್ನು ಇಲಾಖೆಯೇ ನೋಡಿಕೊಳ್ಳುತ್ತದೆ.
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿ ಡಿಬಿಎಫ್ಓಟಿ- ವಿಜಿಎಫ್ಟಿ ಮಾದರಿಯಲ್ಲಿ 4, ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಅನ್ಯೂಟಿ ಮಾದರಿಯಲ್ಲಿ 6 ರಸ್ತೆಗಳನ್ನು ನಿರ್ವಿುಸಲಾಗಿದೆ. ಈ ಹೆದ್ದಾರಿಗಳ ಅಭಿವೃದ್ಧಿ ವೆಚ್ಚವನ್ನು ರಿಯಾಯಿತಿದಾರರು ಪೂರ್ಣ ಪ್ರಮಾಣದಲ್ಲಿ ಭರಿಸಿದ್ದು, ಸರ್ಕಾರದ ಅನುಮತಿ ಪ್ರಕಾರ ಸದರಿ ರಸ್ತೆಗಳಲ್ಲಿ ನಿರ್ದಿಷ್ಟ ಅವಧಿವರೆಗೆ ರಿಯಾಯಿತಿದಾರರು ಶುಲ್ಕ ಸಂಗ್ರಹಿಸುವರು. ಅಲ್ಲದೆ, ಒಪ್ಪಂದದ ಅವಧಿ ಮುಗಿಯುವ ತನಕ ಶುಲ್ಕ ಸಂಗ್ರಹಿಸುವ ಸಂಸ್ಥೆಯೇ ರಸ್ತೆ ಸಂಚಾರ ಯೋಗ್ಯಯಾಗಿರುವಂತೆ ನಿರ್ವಹಿಸುತ್ತಾರೆ ಎಂದು ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ, ಕೆ-ಶಿಪ್ ಸಂಸ್ಥೆಗಳಿಂದ ಅಭಿವೃದ್ಧಿಪಡಿಸಿದ 19 ಹೆದ್ದಾರಿಗಳು ಟೋಲ್ ರಸ್ತೆಗಳಾಗಿವೆ. ಇವುಗಳ ಪೈಕಿ ಕೆಲವೊಂದಕ್ಕೆ ಒಪ್ಪಂದದ ಅವಧಿ ಮುಗಿದ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಬಯಸಿ ಪ್ರಸ್ತಾವನೆ ಸಲ್ಲಿಸಿವೆ ಎಂದು ಮೂಲಗಳು ತಿಳಿಸಿವೆ. ಈ ಪೈಕಿ ಹೊಸಕೋಟೆಯಿಂದ ಚಿಂತಾಮಣಿ ಬೈಪಾಸ್ ರಸ್ತೆ ಟೋಲ್ ಶುಲ್ಕ ಸಂಗ್ರಹಣೆ ಗುತ್ತಿಗೆ ರದ್ದುಪಡಿಸಿ ಇಲಾಖೆಯಿಂದ ಶುಲ್ಕ ಸಂಗ್ರಹಿಸಲಾಗುತ್ತಿದೆ.
ಧಾರವಾಡ-ಕರಡಿಗುಡ್ಡ-ಸವದತ್ತಿ, ಹಾವೇರಿ-ಅಕ್ಕಿಆಲೂರು- ಹಾನಗಲ್, ಮುಧೋಳ್- ಚಿಕ್ಕೋಡಿ- ನಿಪ್ಪಾಣಿ, ಶೆಲ್ವಾಡಿ-ಮುಂಡರಗಿ, ಹುಬ್ಬಳ್ಳಿ-ಕುಂದಗೋಳ-ಲಕ್ಷೆ್ಮೕಶ್ವರ, ಮುದಗಲ್-ತಾವರೆಗೆ- ಗಂಗಾವತಿ, ಮಾಗಡಿ-ಪಾವಗಡ- ಆಂಧ್ರದ ಗಡಿ, ಮಳವಳ್ಳಿ-ಮದ್ದೂರು-ಕೊರಟಗೆರೆ, ಸಿಂಧನೂರು- ತಾವರಗೆರೆ-ಕುಷ್ಟಗಿ ರಸ್ತೆ ಟೋಲ್ ಶುಲ್ಕ ಸಂಗ್ರಹವನ್ನು ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ. ದಾವಣಗೆರೆ-ಬೀರೂರು, ಪಡುಬಿದ್ರಿ-ಕಾರ್ಕಳ, ಗುಬ್ಬಿ-ಸಿಎಸ್ ಪುರ, ಎಡೆಯೂರು-ಕೌಡ್ಲೆ-ಮಂಡ್ಯ, ಹಾನಗಲ್-ತಡಸ್, ಶಿವಮೊಗ್ಗ-ಶಿಕಾರಿಪುರ-ಹಾನಗಲ್, ತಿಂಥಣಿ- ದೇವದುರ್ಗ-ಕಲ್ಮಲಾ, ಸವದತ್ತಿ-ಬಾದಾಮಿ-ಕಮಟಗಿ ಮತ್ತು ಬಳ್ಳಾರಿ-ಮೋಕಾ ಟೋಲ್ ಸಂಗ್ರಹ ಟೆಂಡರ್ ಹಂತದಲ್ಲಿದೆ ಎಂದು ಇಲಾಖೆ ಮೂಲಗಳು ವಿವರಿಸಿವೆ.