

ನವದೆಹಲಿ: ದುಲೀಪ್ ಟ್ರೋಫಿ ಪಂದ್ಯದ ವೇಳೆ ಸಂಜು ಸ್ಯಾಮ್ಸನ್ ವಿರುದ್ಧ ಪೇಸ್ ಬೌಲರ್ ಅರ್ಷದೀಪ್ ಸಿಂಗ್ ಕೋಪಗೊಂಡರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಜು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಭಾರತ ಎ ವಿರುದ್ಧ ಇತ್ತೀಚೆಗೆ ನಡೆದ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಸಂಜು ಹಾಗೂ ಅರ್ಷದೀಪ್ ಸಿಂಗ್ ಭಾರತ ಡಿ ತಂಡದಲ್ಲಿದ್ದರು. ಸಂಜು ಆಗಲಿ ಅಥವಾ ದೇವದತ್ ಪಡಿಕ್ಕಲ್ ಆಗಲಿ ಅರ್ಷದೀಪ್ ಎಸೆತದಲ್ಲಿ ಖಲೀಲ್ ಅಹ್ಮದ್ ಕ್ಯಾಚ್ ಹಿಡಿಯಲು ಯತ್ನಿಸದಿರುವುದು ಅರ್ಷದೀಪ್ ಆಕ್ರೋಶಕ್ಕೆ ಕಾರಣವಾಗಿದೆ. ಪಂದ್ಯ ಮುಗಿದ ಕೆಲ ದಿನಗಳ ನಂತರ ಈ ಘಟನೆ ಸಂಬಂಧಿಸಿದ ವಿಡಿಯೋ ಬೆಳಕಿಗೆ ಬಂದಿದ್ದು, ಅರ್ಷದೀಪ್ ಕೆಟ್ಟ ಮಾತುಗಳನ್ನಾಡುತ್ತಿರುವುದು ವಿಡಿಯೋದಲ್ಲಿ ಕೇಳಿಸುತ್ತದೆ.
ಭಾರತ ಎ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಶಮ್ಸ್ ಮುಲಾನಿ ಅವರ ಅರ್ಧಶತಕದ ನೆರವಿನಿಂದ ಭಾರತ ಎ ತಂಡ 77 ಓವರ್ಗಳಲ್ಲಿ ಎಂಟು ವಿಕೆಟ್ಗಳ ನಷ್ಟದಲ್ಲಿ 260 ರನ್ ಗಳಿಸಿತು. ಅರ್ಷದೀಪ್ ಬೌಲಿಂಗ್ ಮಾಡಲು ಬಂದಾಗ, ಅವರ ಮೊದಲ ಎಸೆತ ಖಲೀಲ್ ಅಹ್ಮದ್ ಅವರ ಬ್ಯಾಟ್ಗೆ ಚೆಂಡು ತಾಗಿ ಹಿಂದೆ ಹೋಯಿತು. ಆದರೆ ವಿಕೆಟ್ ಕೀಪರ್ ಸಂಜು ಮತ್ತು ಸ್ಲಿಪ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ದೇವದತ್ ಪಡಿಕ್ಕಲ್ ನಡುವಿನ ಗೊಂದಲದಿಂದಾಗಿ ಚೆಂಡು ನೇರವಾಗಿ ಇಬ್ಬರ ನಡುವೆ ಬೌಂಡರಿ ಸೇರಿತು.
ಚೆಂಡನ್ನು ಹಿಡಿಯಲು ಇಬ್ಬರೂ ಪ್ರಯತ್ನಿಸದಿದ್ದಕ್ಕೆ ಕೋಪಗೊಂಡ ಅರ್ಷದೀಪ್, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಸಂಜು ಅಭಿಮಾನಿಗಳು ಅಸಮಾಧಾನ ಹೊರಹಾಕುತ್ತಿದ್ದಾರೆ. ತಂಡದಲ್ಲಿ ಸಂಜು ಅವರನ್ನು ಯಾರೂ ಗೌರವಿಸುವುದಿಲ್ಲ ಎಂದು ಹಲವರು ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಅಲ್ಲದೆ, ಸಂಜು ಮಾಡಿ ತಪ್ಪಾದರೂ ಏನು ಎಂದು ಪ್ರಶ್ನೆ ಮಾಡುತ್ತಿದ್ದಾರೆ. (ಏಜೆನ್ಸೀಸ್)