

ಮೈಸೂರು; ಇನ್ಮುಂದೆ ಜೆ.ಡಿ.ಎಸ್ ಪಕ್ಷದ ಜೊತೆ ಯಾವುದೇ ರೀತಿಯ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬಾನುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಮುಲ್ (ಮೈಸೂರು ಹಾಲು ಒಕ್ಕೂಟ) ವಿಚಾರವಾಗಲಿ, ಬೇರೆ ಯಾವುದೇ ವಿಚಾರವಾಗಲಿ ಇನ್ನು ಮುಂದೆ ಜೆ.ಡಿ.ಎಸ್ ಜೊತೆ ಯಾವುದೇ ತೆರನಾದ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
ಸಹಕಾರ ಸಂಘಗಳ ಚುನಾವಣೆ ಚಿಹ್ನೆ ಮೇಲೆ ನಡೆಯುವುದಿಲ್ಲ. ಸ್ಥಳೀಯವಾಗಿ ಹೊಂದಾಣಿಕೆ ಮಾಡಿಕೊಂಡಿರುತ್ತಾರೆ. ಹಾಗಿದ್ದರೂ ನಮ್ಮ ಕಡೆಯಿಂದ ಜೆ.ಡಿ.ಎಸ್ ಗೆ ಯಾವುದೇ ರೀತಿಯ ಬೆಂಬಲ ಇಲ್ಲ. ಕುಮಾರಸ್ವಾಮಿ ಹೇಳಿದರೂ ಅಷ್ಟೆ, ಯಾರು ಹೇಳಿದರೂ ಅಷ್ಟೇ. ಈ ವಿಷಯವನ್ನು ನಾನೇ ಹೇಳುತ್ತಿದ್ದೇನೆ, ಇನ್ನುಮುಂದೆ ಜೆಡಿಎಸ್ ಜೊತೆ ಯಾವುದೇ ಮೈತ್ರಿಯಿಲ್ಲ ಎಂದು ಖಡಕ್ ಆಗಿ ಹೇಳಿದರು.
ರಮೇಶ್ ಜಾರಕಿಹೊಳಿ ಸಿಡಿ ವಿಚಾರವಾಗಿ ಮಾತನಾಡಿದ ಅವರು, ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆಯಿಂದ ಸತ್ಯಾಸತ್ಯತೆ ಗೊತ್ತಾಗಲಿ. ಡಿಕೆಶಿ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅವರನ್ನು ಸಿಲುಕಿಸುತ್ತಿದ್ದಾರೆ ಎಂದು ಡಿಕೆಶಿಯೆ ಹೇಳಿದ್ದಾರೆ. ಹಾಗೆಂದು ಅವರಿಗೆ ಅನ್ನಿಸಿರಬಹುದು. ಆದರೆ ಇಂತಹ ಪ್ರಕರಣಗಳಿಂದ ರಾಜಕಾರಣಿಗಳ ಮಾನ ಮರ್ಯಾದೆ ಹೋಗುತ್ತದೆ. ಜನರು ರಾಜಕಾರಣಿಗಳ ಬಗ್ಗೆ ಲಘುವಾಗಿ, ಹಗುರವಾಗಿ ಮಾತನಾಡಲು ಶುರು ಮಾಡುತ್ತಾರೆ. ಆಗ ನಾವೇನು ಮಾಡೋಕಾಗೋದಿಲ್ಲ ಎಂದು ಹೇಳಿದ್ದಾರೆ.