

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ವೈದ್ಯಕೀಯ ಕ್ಷೇತ್ರಗಳಲ್ಲಿ ದುಡಿಯುವರು ದೈಹಿಕವಾಗಿ ಸದೃಢರಾಗಿ, ಆರೋಗ್ಯಯುತವಾಗಿದ್ದರೆ ಮಾತ್ರ ಆರೋಗ್ಯಯುತ ಸಮಾಜ ನಿರ್ಮಾಣ ಮಾಡಲು ಸಾಧ್ಯ, ಮ್ಯಾರಥಾನ್ ಓಟ ಒಂದು ದಿನಕ್ಕೆ ಸೀಮಿತವಾಗಿರದೆ ನಿತ್ಯವೂ ಇದ್ದಲ್ಲಿ ದೇಹ, ಮನಸ್ಸಿಗೆ ಒಳ್ಳೆಯದು ಎಂದು ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ಕೇಂದ್ರ ಸರ್ಕಾರದ ಫಿಟ್ ಇಂಡಿಯಾ, ಫಿಟ್ ಮಿ ಕಾರ್ಯಕ್ರಮದಡಿ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ನಿಟ್ಟೆ ಪರಿಗಣಿಸಲ್ಪಟ್ಟ ವಿವಿ ಗುರುವಾರ ಆಯೋಜಿಸಿದ 5ಕೆ ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿ ಮಾತನಾಡಿದರು.
ವೈದ್ಯಕೀಯ ವಿದ್ಯಾರ್ಥಿಗಳು ದೈಹಿಕ ಆರೋಗ್ಯ ಕಾಪಾಡಿಕೊಳ್ಳುವ ಜತೆಗೆ ಸಮಾಜಕ್ಕೂ ಅದರ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯ ಇದೆ. ನಿಟ್ಟೆ ಸಮೂಹ ಸಂಸ್ಥೆಗಳ ಎನ್‌ಎಸ್‌ಎಸ್‌ನ 1000 ವಿದ್ಯಾರ್ಥಿಗಳು ಎಲ್ಲರಿಗೂ ಪ್ರೇರಣೆಯಾಗುವ ರೀತಿಯಲ್ಲಿ ಅಚ್ಚುಕಟ್ಟಾಗಿ 5 ಕಿ.ಮೀ. ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದಾರೆ ಎಂದರು.
ನಿಟ್ಟೆ ಪರಿಗಣಿಸಲ್ಪಟ್ಟ ವಿವಿ ಸಹಕುಲಾಧಿಪತಿ ಡಾ.ಎಂ.ಶಾಂತಾರಾಮ ಶೆಟ್ಟಿ ಮಾತನಾಡಿ, ಆರೋಗ್ಯ ಜಾಗೃತಿಗಾಗಿ ಹಮ್ಮಿಕೊಂಡಿರುವ ಮ್ಯಾರಥಾನ್ ಒಂದು ದಿನಕ್ಕೆ ಮೀಸಲಾಗಿರದೆ, ನಿತ್ಯವೂ ವ್ಯಾಯಾಮ, ಆಟ, ಓಟದ ಚಟುವಟಿಕೆಗಳಲ್ಲಿ ತುಂಬಿಕೊಳ್ಳಲು ಪ್ರೇರಣೆಯಾಗಲಿ ಎಂದರು.
ಮ್ಯಾರಥಾನ್‌ನಲ್ಲಿ ಜಿಲ್ಲಾಧಿಕಾರಿಯೂ ಭಾಗವಹಿಸಿದರು. ಭಾರತ ಸರ್ಕಾರದ ರಾಷ್ಟ್ರೀಯ ಸೇವಾ ಯೋಜನೆ ವಲಯ ನಿರ್ದೇಶನಾಲಯದ ನಿರ್ದೇಶಕ ಡಿ.ಕಾರ್ತಿಕೇಯನ್, ರಾಜ್ಯ ಎನ್‌ಎಸ್‌ಎಸ್ ಅಧಿಕಾರಿ ಡಾ.ಪ್ರತಾಪ್ ಲಿಂಗಯ್ಯ, ಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ, ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಪ್ರೊ.ಶಶಿಕುಮಾರ್ ಶೆಟ್ಟಿ, ವೈದ್ಯಕೀಯ ಅಧೀಕ್ಷಕಿ ಡಾ.ಸುಮಲತಾ ಆರ್.ಶೆಟ್ಟಿ, ಎ.ಬಿ.ಶೆಟ್ಟಿ ದಂತ ಕಾಲೇಜಿನ ಡೀನ್ ಡಾ.ಮಿತ್ರಾ ಹೆಗ್ಡೆ, ನರ್ಸಿಂಗ್ ವಿಭಾಗ ಪ್ರಾಂಶುಪಾಲೆ ಫಾತಿಮಾ ಡಿಸಿಲ್ವ, ಆಡಳಿತ ವಿಭಾಗದ ಆಡಳಿತ ನಿರ್ದೇಶಕಿ ಸಾಯಿ ಪ್ರಸನ್ನಾ ಹೆಗ್ಡೆ, ನಿಟ್ಟೆ ಆರ್ಕಿಟೆಕ್ಚರ್ ಕಾಲೇಜಿನ ಡೀನ್ ವಿನೋದ್ ಅರಾನ್ಹ, ನುಕ್ಸರ್ ನಿರ್ದೇಶಕ ಡಾ.ಅನಿರ್ಬಾನ್ ಚಕ್ರಬರ್ತಿ, ಪಠ್ಯಕ್ರಮ ನಿರ್ದೇಶಕ ನಾಗೇಶ್ ಪ್ರಭು, ಪತ್ರಿಕೋದ್ಯಮ ವಿಭಾಗದ ಡೀನ್ ಡಾ.ಸತ್ಯ, ಎನ್‌ಎಸ್‌ಎಸ್ ಕಾರ್ಯಕ್ರ ಅಧಿಕಾರಿಗಳಾದ ಪ್ರತಿಮಾ ರೈ, ಅನ್ಶಾ ರೈ, ಡಾ.ವರ್ಷಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಡಾ.ಜಯಪ್ರಕಾಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವರ್ಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಓಟದ ಫಲಿತಾಂಶ
ಮಹಿಳೆಯರ ವಿಭಾಗದಲ್ಲಿ ಡಾ.ಎನ್‌ಎಸ್‌ಎಎಂ ಫಸ್ಟ್ ಗ್ರೇಡ್ ಕಾಲೇಜಿನ ಬಿಕಾಂ ವಿದ್ಯಾರ್ಥಿನಿಯರಾದ ನಂದಿನಿ ಪ್ರಥಮ, ಪ್ರತೀಕ್ಷಾ ದ್ವಿತೀಯ ಹಾಗೂ ಸಾಕ್ಷಿ ಮೂರನೇ ಸ್ಥಾನ ಪಡೆದರು. ಪುರುಷರ ವಿಭಾಗದಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ಟೆಕ್ನಾಲಜಿ ಸಂಸ್ಥೆ ಅಕ್ಷಯ್ ಗಾಂವ್ಕರ್ ಪ್ರಥಮ, ಡಾ.ಎನ್‌ಎಸ್‌ಎಎಂ ಫಸ್ಟ್ ಗ್ರೇಡ್ ಕಾಲೇಜಿನ ಗುರುರಾಜ್ ನಾಯಕ್ ಹಾಗೂ ಹಾಸ್ಟೆಲ್ ವ್ಯವಸ್ಥಾಪಕ ಕಿರಣ್ ಕುಮಾರ್ ತೃತೀಯ ಸ್ಥಾನ ಪಡೆದರು.