ಅಂಕೋಲಾದ ತೆರೆದ ಬಾವಿಗಳಲ್ಲಿ ನೈಟ್ರೇಟ್ ಅಂಶ

Opne well in karwar
Published on

ಕಾರವಾರ: ಜಿಲ್ಲೆಯ ಅಂಕೋಲಾ ತಾಲೂಕಿನ ವಿವಿಧೆಡೆ ತೆರೆದ ಬಾವಿಗಳ ನೀರಿನಲ್ಲಿ ನೈಟ್ರೇಟ್(ಎನ್‌ಒ-3)ಅಂಶ ಹೆಚ್ಚಿರುವುದು ಕಂಡುಬರುತ್ತಿದೆ. ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಿಲ್ಲಾ ಪ್ರಯೋಗಾಲಯದಲ್ಲಿ ನಿರಂತರವಾಗಿ ನಡೆಸುತ್ತಿರುವ ಜಲಮೂಲಗಳ ನೀರಿನ ಗುಣಮಟ್ಟದ ಸಮೀಕ್ಷೆಯಲ್ಲಿ ಈ ಅಂಶಗಳು ಕಂಡುಬಂದಿದೆ. ಇಲಾಖೆ ಅಂಥ ನೀರಿನ ಮೂಲಗಳ ಬಗ್ಗೆ ಸಂಬಂಧಪಟ್ಟ ಗ್ರಾಪಂಗಳ ಮೂಲಕ ಜನರಿಗೆ ಮಾಹಿತಿ ನೀಡಿ, ಪರ್ಯಾಯ ನೀರಿನ ಮೂಲಗಳನ್ನು ಬಳಸುವಂತೆ ಸಲಹೆ ನೀಡುತ್ತಿದೆ.
ಜಿಲ್ಲೆಯ ಕಾರವಾರ, ಶಿರಸಿ, ಹಳಿಯಾಳ ಮತ್ತು ಹೊನ್ನಾವರ ಹೀಗೆ ನಾಲ್ಕು ಕಡೆ ನೀರಿನ ಗುಣಮಟ್ಟ ಅಳೆಯುವ ಪ್ರಯೋಗಾಲಯಗಳಿವೆ. ಪ್ರತಿ ಪ್ರಯೋಗಾಲಯದಲ್ಲಿ ಪ್ರತಿ ವಾರ 50 ರಿಂದ 80 ಸ್ಯಾಂಪಲ್‌ಗಳನ್ನು ಪರೀಕ್ಷೆ ಮಾಡಲಾಗುತ್ತದೆ. ಒಟ್ಟಾರೆ ಸುಮಾರು 280 ರಿಂದ 300 ಸ್ಯಾಂಪಲ್‌ಗಳ ಪರೀಕ್ಷೆ ಮಾಡಲಾಗುತ್ತದೆ. ಪ್ರತಿ ತಿಂಗಳು ಸಾಮಾನ್ಯವಾಗಿ 1 ಸಾವಿರಕ್ಕೂ ಅಧಿಕ ಮಾದರಿಗಳನ್ನು ಪರಿಶೀಲಿಸಲಾಗುತ್ತದೆ. ಅದರಲ್ಲಿ ಶೇ. 1 ಅಥವಾ ಅದಕ್ಕಿಂತ ಕಡಿಮೆ ಮೂಲಗಳಲ್ಲಿ ಕೆಲವು ದೋಷ ಕಂಡುಬರುತ್ತಿದೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ, ಜಿಲ್ಲೆಯಲ್ಲಿ ನೀರಿನ ಗುಣಮಟ್ಟ ಉತ್ತಮವಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಕಳೆದ ಜುಲೈ 31 ರಿಂದ ಆಗಸ್ಟ್ 5ರವರೆಗೆ ನಡೆಸಿದ 280 ಸ್ಯಾಂಪಲ್‌ಗಳಲ್ಲಿ 6 ಮಾದರಿಗಳಲ್ಲಿ ನೀರು ಕಲುಷಿತವಾಗಿರುವುದು ಕಂಡುಬಂದಿದೆ. ಅದರಲ್ಲಿ ಎರಡು ಅಂಕೋಲಾದಲ್ಲಿದ್ದು, ನೈಟ್ರೇಟ್ ಸೇರಿರುವುದು ಕಂಡುಬಂದಿದೆ. ಅಲ್ಲದೆ, ಜುಲೈ ತಿಂಗಳಲ್ಲಿ ಅಂಕೋಲಾದ ಬೆಳಂಬಾರ, ಹಾರವಾಡ, ಬೊಬ್ರುವಾಡ, ಬಾವಿಕೇರಿ ಸೇರಿ 5 ಜಲಮೂಲಗಳಲ್ಲಿ ನೈಟ್ರೇಟ್ ಮಟ್ಟ ಕಂಡುಬಂದಿದೆ.
ಕುಡಿಯುವ ನೀರಿನಲ್ಲಿ ನೈಟ್ರೇಟ್(ಎನ್‌ಒ3) ಪ್ರತಿ ಲೀಟರ್ ನೀರಿನಲ್ಲಿ ಗರಿಷ್ಠ 45 ಮಿಲಿ ಗ್ರಾಂನಷ್ಟಿದ್ದರೆ ಅದು ಕುಡಿಯಲು ಯೋಗ್ಯವಾಗಿದೆ. ಅಂಕೋಲಾ ಬಾವಿಕೇರಿಯ ಈಶ್ವರ ದೇವಸ್ಥಾನ ಸಮೀಪದ ಬಾವಿಯೊಂದರಲ್ಲಿ 73.2 ಮಿಲಿ ಗ್ರಾಂನಷ್ಟು ಕಂಡುಬಂದಿದೆ. ಇದೇ ರೀತಿ ಬೇರೆಡೆಯೂ ನಿಗದಿತ ಮಟ್ಟಕ್ಕಿಂತ ಹೆಚ್ಚು ಕಂಡುಬಂದಿದೆ. ನೈಟ್ರೇಟ್ ಇರುವ ನೀರು ಸೇವಿಸುವುದರಿಂದ ಮಕ್ಕಳಲ್ಲಿ ಬೆಳವಣಿಗೆ ಕುಂಠಿತವಾಗಬಹುದು. ಜಾನುವಾರುಗಳಲ್ಲಿ ಆರೋಗ್ಯ ಸಮಸ್ಯೆ ವೃದ್ಧಿಯಾಗಬಹುದು ಎನ್ನುತ್ತಾರೆ ತಜ್ಞರು.
ಈ ಸಮಸ್ಯೆ ಏಕೆ..?: ಶುದ್ಧ ಗಾಳಿ, ನೀರಿನ ವಾತಾವರಣವಿರುವ ಉತ್ತರ ಕನ್ನಡ ಜಿಲ್ಲೆಯ ಬಾವಿಗಳ ನೀರು ಕಲುಷಿತವಾಗಲು ಕಾರಣವೇನು ಎಂದು ಪ್ರಯೋಗಾಲಯದ ತಂತ್ರಜ್ಞರು ಪರಿಶೀಲಿಸಿದಾಗ ಕಲುಷಿತವಾಗುವ ಬಾವಿಗಳೆಲ್ಲವೂ ತೆರೆದ ಬಾವಿಗಳಾಗಿದ್ದು, ಹೊಲಗಳ ಮಧ್ಯದಲ್ಲಿವೆ. ಅಥವಾ ಕೊಟ್ಟಿಗೆಯ ಪಕ್ಕದಲ್ಲಿವೆ. ಹದ್ದೆಗಳಿಗೆ ಗೊಬ್ಬರ ಬಳಸುವುದರಿಂದ ಇಲ್ಲಿ ನೈಟ್ರೇಟ್ ಸೇರ್ಪಡೆಯಾಗಿರುವ ಸಾಧ್ಯತೆ ಇದೆ ಎನ್ನುತ್ತಾರೆ ತಂತ್ರಜ್ಞರು. ಚರಂಡಿ ನೀರಿನಲ್ಲಿ, ಪ್ರಾಣಿಗಳ ತ್ಯಾಜ್ಯಗಳಲ್ಲಿ, ರಾಸಾಯನಿಕ ಗೊಬ್ಬರಗಳಲ್ಲಿ ನೈಟ್ರೇಟ್ ಅಂಶ ಕಂಡುಬರುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net