ಸ್ಟಾರ್ಟಪ್‌ಗಳ ಉತ್ತೇಜನಕ್ಕೆ 10 ಸಾವಿರ ಕೋಟಿ ನಿಧಿ ಘೋಷಿಸಿದ ನಿರ್ಮಲ ಸೀತಾರಾಮನ್

start
Published on

ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಲಿರುವ ಸ್ಟಾರ್ಟಪ್‌ಗಳ ಉತ್ತೇಜನಕ್ಕೆ ಬಜೆಟ್‌ನಲ್ಲಿ 10 ಸಾವಿರ ಕೋಟಿ ನಿಧಿ ಇರಿಸಲಾಗಿದೆ. ಈ ಬಗ್ಗೆ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.

14 ಮತ್ತು 15ನೇ ಹಣಕಾಸು ಆಯೋಗದ ಶಿಾರಸ್ಸಿನ ಅನ್ವಯ ಸ್ಟಾರ್ಟಪ್‌ಗಳ ಉತ್ತೇಜನಕ್ಕೆ ಈ ನಿಧಿಯನ್ನು ಬಳಕೆ ಮಾಡಲಾಗುವುದು. ಸೆಬಿಯಲ್ಲಿ ನೋಂದಾಯಿಸಿಕೊಂಡಿರುವ ಸಂಸ್ಥೆಗಳು ಪರ್ಯಾಯ ಹೂಡಿಕೆ ಬಂಡವಾಳದ ಮೂಲಕ ಈ ನಿಧಿಯನ್ನು ಬಳಕೆ ಮಾಡಿಕೊಳ್ಳಲು ಅರ್ಹವಾಗಿರುತ್ತವೆ. ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಈ ನಿಧಿಯನ್ನು ನಿರ್ವಹಣೆ ಮಾಡಲಿದೆ.

ಕೈಗಾರಿಕೆ ಮತ್ತು ವ್ಯಾಪಾರ ಉತ್ತೇಜನ ಇಲಾಖೆಯೊಂದಿಗಿನ ಚರ್ಚೆಯ ವೇಳೆ ವಿವಿಧ ಸ್ಟಾರ್ಟಪ್ ಪರಿಣಿತರು ಸರ್ಕಾರಕ್ಕೆ ಬೇಡಿಕೆಯನ್ನು ಸಲ್ಲಿಸಿದ್ದರು. ಬೇಡಿಕೆಯನ್ನು ಪುರಸ್ಕರಿಸಿರುವ ಕೇಂದ್ರ ಹಣಕಾಸು ಇಲಾಖೆ ಸ್ಟಾರ್ಟಪ್‌ಗಳ ಉತ್ತೇಜನಕ್ಕೆ ನಿಧಿಯನ್ನು ಸ್ಥಾಪಿಸಿದೆ.

ದೇಶದಲ್ಲಿ ನವೋದ್ಯಮದ ಉತ್ತೇಜನಕ್ಕೆ ವಿಶೇಷ ಒತ್ತು ನೀಡುವ ಸಲುವಾಗಿ ‘ಸ್ಟಾರ್ಟಪ್ ಇಂಡಿಯಾ’ ಉಪಕ್ರಮವನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ್ದು, ಆ ಉಪಕ್ರಮದ ಪ್ರಕಾರ ಸ್ಟಾರ್ಟಪ್‌ಗಳು ತೆರಿಗೆ ಮತ್ತು ತೆರಿಗೇಯೇತರ ಪ್ರೋತ್ಸಾಹಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ಈಗ ಮೀಸಲಾಗಿಟ್ಟಿರುವ 10 ಸಾವಿರ ಕೋಟಿ ನಿಧಿಯನ್ನು ಬಂಡವಾಳವಾಗಿ ಬಳಸಿಕೊಳ್ಳಬಹುದಾಗಿದೆ.

ಕೃತಕ ಬುದ್ಧಿಮತ್ತೆ, ಜೈವಿಕ ತಂತ್ರಜ್ಞಾನ, ನ್ಯಾನೋತಂತ್ರಜ್ಞಾನ, ರೊಬಾಟಿಕ್, ಹಾರ್ಡ್‌ವೇರ್ ಸೇರಿ ವಿವಿಧ ತಂತ್ರಜ್ಞಾನಗಳಡಿ ಕೆಲಸ ನಿರ್ವಹಿಸುವ ಎಲ್ಲ ಉದ್ಯಮಿಗಳು ‘ಸ್ಟಾರ್ಟಪ್ ಇಂಡಿಯಾ’ ಉಪಕ್ರಮದಡಿಯಲ್ಲಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net