ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಚಿತ್ರ ಪ್ರಶಸ್ತಿ ಗೆದ್ದ ಬೆಂಗಳೂರು ಬಾಲಕ..!

Vidyun
Published on

ಬೆಂಗಳೂರು: ವನ್ಯಜೀವಿ ಛಾಯಾಗ್ರಾಹಕ ವಿಭಾಗದಲ್ಲಿ ಬೆಂಗಳೂರು ಮೂಲದ 9 ವರ್ಷದ ಬಾಲಕನೊಬ್ಬ ಅಂತಾರಾಷ್ಟ್ರೀಯ ಮನ್ನಣೆಗಳಿಸುವ ಮೂಲಕ ಎಲ್ಲರ ಮೆಚ್ಚುಗೆ ಪಾತ್ರನಾಗಿದ್ದಾನೆ.

ನಗರದ ಬಿಜಿಎಸ್​ ನ್ಯಾಷನಲ್​ ಪಬ್ಲಿಕ್​ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿರುವ ವಿದ್ಯುನ್​ ಆರ್​ ಹೆಬ್ಬಾರ್​, ತನ್ನ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದಿರುವ ಅದ್ಭುತ ಚಿತ್ರವೊಂದಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ಒಲಿದುಬಂದಿದೆ.

ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಹಾಗೂ ಬಿಬಿಸಿ ವರ್ಲ್ಡ್ ವೈಡ್ ನಡೆಸುವ ವೈಲ್ಡ್ ಲೈಫ್ ಫೊಟೊಗ್ರಾಫರ್ ಆಫ್ ದಿ ಇಯರ್ ಸ್ಪರ್ಧೆ ಕಳೆದ 56 ವರ್ಷಗಳಿಂದಲೂ ಆಯೋಜಿಸಲಾಗುತ್ತಿದೆ. ಸ್ಪರ್ಧೆಯಲ್ಲಿ 10ವರ್ಷದೊಳಗಿನ ವಿಭಾಗದಲ್ಲಿ ಶೃಂಗೇರಿಯ ರವಿಪ್ರಕಾಶ್​ ಪುತ್ರ ವಿದ್ಯುನ್ ತೆಗೆದ ಫೋಟೋ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಇದನ್ನು ವೈಲ್ಡ್​ ಲೈಫ್​ ಫೋಟೋಗ್ರಫಿಯ ಆಸ್ಕರ್​ ಎಂತಲೂ ಕರೆಯಲಾಗುತ್ತದೆ.

ವಿದ್ಯುನ್​ ತೆಗೆದ ಚಿತ್ರ ಯಾವುದು?

ಹಸಿರು ಮಾಯವಾಗಿ ಕಾಂಕ್ರಿಟ್​ ಕಾಡಿನಿಂದಲೇ ತುಂಬಿರುವ ಬೆಂದಕಾಳೂರಿನಲ್ಲಿ ಜೇಡರ ಹುಳುವೊಂದು ನಾಲ್ಕು ದಿಕ್ಕುಗಳಲ್ಲಿಯೂ ಝಡ್​ ಆಕೃತಿಯ ಎಳೆಗಳನ್ನು ಬಿಡಿಸಿ, ಅದರ ಮಧ್ಯೆದಲ್ಲಿ ಜೇಡ ನಿಂತಿರುವ ವಿಶೇಷ ದೃಶ್ಯವನ್ನು ವಿದ್ಯುನ್​, ತನ್ನ ನಿಕಾನ್​ ಡಿ5000 + 85 ಎಂಎಂ ಲೆನ್ಸ್​ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾನೆ.

ಈ ಚಿತ್ರವನ್ನು ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಆಯ್ಕೆ ಮಾಡಿದೆ. ಈ ಸಂಸ್ಥೆ ವನ್ಯಜೀವಿ ಛಾಯಾಗ್ರಹಣ ಸ್ಪರ್ಧೆಗೆ ವಿಶ್ವಾದಾದ್ಯಂತ ಫೋಟೋಗಳನ್ನು ಆಹ್ವಾನಿಸುತ್ತದೆ. ಕಳೆದ ಡಿಸೆಂಬರ್​​ನಲ್ಲಿ 100 ದೇಶಗಳಿಂದ 50 ಸಾವಿರಕ್ಕೂ ಹೆಚ್ಚು ಫೋಟೋಗಳು ಸಲ್ಲಿಕೆಯಾಗಿದ್ದವು. ಮೊದಲೆರಡು ಸುತ್ತಿನ ಬಳಿಕ ಅಂತಿಮ ಸುತ್ತಿನಲ್ಲಿ ವಿದ್ಯುನ್​ ಫೋಟೋ ಆಯ್ಕೆಯಾಗಿದೆ.

ಇನ್ನು ವಿದ್ಯುನ್,​ ತಂದೆಯ ಹಾದಿಯಲ್ಲೇ ಸಾಗುತ್ತಿದ್ದಾನೆ. ರವಿಪ್ರಕಾಶ್​ ಅವರು ಕೂಡ ವೃತ್ತಿನಿರತ ಫೋಟೋಗ್ರಾಫರ್​ ಆಗಿದ್ದು, ಸಾಕಷ್ಟು ಪ್ರಶಸ್ತಿಗಳನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ. ತಮ್ಮ ಮಗನ ಬಗ್ಗೆ ಹೆಮ್ಮೆ ಹೊಂದಿರುವ ರವಿಪ್ರಕಾಶ್​, ಮೂರು ವರ್ಷದವನಿದ್ದಾಗಲೇ ಕ್ಯಾಮೆರಾ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ. ಆರನೇ ವರ್ಷಕ್ಕೆ ಫೋಟೋ ತೆಗೆಯುವುದನ್ನು ಆರಂಭಿಸಿದ ಎನ್ನುತ್ತಾರೆ ರವಿಪ್ರಕಾಶ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net