

ಪ್ರಶಾಂತ ಭಾಗ್ವತ ಉಡುಪಿ
ದೇಹದ ಅಂಗಗಳಲ್ಲಿ ಕಣ್ಣುಗಳು ಹೆಚ್ಚಿನ ಮಹತ್ವ ಪಡೆದಿದೆ. ಅವುಗಳನ್ನು ಸರಿಯಾಗಿ ಆರೈಕೆ ಮಾಡದಿದ್ದಲ್ಲಿ ಜೀವನವೇ ಕತ್ತಲಲ್ಲಿ ಮುಳುಗಬಹುದು. ಹೀಗಾಗಿ ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿ ಮಾಂದ್ಯತೆ ನಿಯಂತ್ರಣಾ ಕಾರ್ಯಕ್ರಮದಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಜ್ಯವ್ಯಾಪಿ ಆಶಾಕಿರಣ ದೃಷ್ಟಿ ಕೇಂದ್ರ ತೆರೆದಿದೆ.
ಉಡುಪಿ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಮೂರನೇ ಹಂತದ ಆಶಾ ಕಿರಣ ಯೋಜನೆ ಅನುಷ್ಠಾನಗೊಂಡಿದ್ದು ಒಟ್ಟು 9 ಕಡೆಗಳಲ್ಲಿ ದೃಷ್ಟಿ ಕೇಂದ್ರ ಕಾರ್ಯಾಚರಿಸುತ್ತಿವೆ. ವಾರ್ಷಿಕ ಗುರಿಯನ್ನೂ ಮೀರಿ ಜನರಿಗೆ ಉಚಿತವಾಗಿ ಸೌಲಭ್ಯ ನೀಡಲಾಗುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ರಾಷ್ಟ್ರೀಯ ಬಾಲ ಕಿಶೋರ ಸ್ವಾಸ್ಥ್ಯ (ಆರ್ಬಿಎಸ್ಕೆ) ಯೋಜನೆಯಡಿ ಅಂಗನವಾಡಿ ಹಾಗೂ ಸರ್ಕಾರಿ, ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿಯ 74,738 ಮಕ್ಕಳ ಕಣ್ಣುಗಳನ್ನು ಆಯಾ ಶಾಲೆಗಳಲ್ಲಿಯೇ ತಪಾಸಣೆ ಮಾಡಲಾಗಿದೆ. ದೃಷ್ಟಿದೋಷ ಕಂಡುಬಂದ 2,197 ಮಕ್ಕಳಿಗೆ ಯೋಜನೆಯಡಿ ಉಚಿತವಾಗಿ ಕನ್ನಡಕ ನೀಡಲಾಗಿದೆ.
ಜಿಲ್ಲೆಯ ಆರು ಸಮುದಾಯ ಆರೋಗ್ಯ ಕೇಂದ್ರಗಳಾದ ಬೈಂದೂರು, ಕೋಟ, ಬ್ರಹ್ಮಾವರ, ಶಿರ್ವ, ನಿಟ್ಟೆ, ಹೆಬ್ರಿ ಹಾಗೂ ಉಡುಪಿ ಜಿಲ್ಲಾಸ್ಪತ್ರೆ, ಕುಂದಾಪುರ ತಾಲೂಕು ಆಸ್ಪತ್ರೆ, ಕಾರ್ಕಳ ತಾಲೂಕು ಆಸ್ಪತ್ರೆ ಸೇರಿ ಒಟ್ಟು 9 ಘಟಕಗಳಿವೆ. ಸರ್ಕಾರಿ ತಜ್ಞ ವೈದ್ಯರೊಂದಿಗೆ ಉಡುಪಿ ಜಿಲ್ಲೆಯ 4 ಎನ್ಜಿಒಗಳ ಸಹಭಾಗಿತ್ವದಲ್ಲಿ ಎಲ್ಲ ಕೇಂದ್ರಗಳನ್ನೂ ನಿರ್ವಹಿಸಲಾಗುತ್ತಿದೆ.
ಆಶಾಕಿರಣ ದೃಷ್ಟಿ ಕೇಂದ್ರಗಳಲ್ಲಿ ಎಲ್ಲ ಸೌಲಭ್ಯವೂ ಉಚಿತ. ಎಪಿಎಲ್, ಬಿಪಿಎಲ್ ಮಾನದಂಡವೂ ಇಲ್ಲ. ಜಿಲ್ಲೆಯಲ್ಲಿ ನಾಲ್ಕು ನೇತ್ರ ತಜ್ಞರು, ನೇತ್ರ ಸಹಾಯಕರು ಸೇರಿ ಒಟ್ಟು 11 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೋಷ ಇರುವವರು ದೃಷ್ಟಿ ಕೇಂದ್ರದಲ್ಲಿ ಉಚಿತವಾಗಿ ಸಮಗ್ರ ತಪಾಸಣೆ, ಚಿಕಿತ್ಸೆ, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಹುದು. ಕನ್ನಡಕವನ್ನೂ ಪಡೆಯಬಹುದು. ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು. | ಡಾ. ಲತಾ ನಾಯಕ. ಉಡುಪಿ ಜಿಲ್ಲಾ ಅಂಧತ್ವ ನಿವಾರಣಾ ಅಧಿಕಾರಿ.