

ಚಿತ್ರ: ನಿದ್ರಾದೇವಿ ನೆಕ್ಸ್ಟ್‌ಡೋರ್
ನಿರ್ದೇಶನ: ಸುರಾಗ್ ಸಾಗರ್
ತಾರಾಗಣ: ಪ್ರವೀರ್ ಶೆಟ್ಟಿ, ಶೈನ್ ಶೆಟ್ಟಿ, ರಿಷಿಕಾ ನಾಯಕ್, ಶ್ರುತಿ ಹರಿಹರನ್, ಸುಧಾರಾಣಿ, ಶ್ರೀಧರ್ ಮತ್ತಿತರರು.
ಶಿವ ಸ್ಥಾವರಮಠ
ನೆಚ್ಚಿನ ನಾಯಿ ಬ್ರೂನೋ, ಬಾಲ್ಯದ ಗೆಳತಿ ಆದ್ಯ ಹಾಗೂ ಅಮ್ಮನ ಕಳೆದುಕೊಂಡ ದುಃಖದಲ್ಲಿಯೇ ಧ್ರುವನಿಗೆ (ಪ್ರವೀರ್) ನಿದ್ದೆ ದೂರವಾಗಿದೆ. ಸುಖವಾದ ನಿದ್ದೆಗಾಗಿ ದೇಹ ಮತ್ತು ಮನಸ್ಸನ್ನು ದಂಡಿಸಿದರೂ ಆತನಿಗೆ ನಿದ್ದೆ ದೂರಾದೂರ. ಇಂತಹ ನಿದ್ರಾಹೀನನ ಪಕ್ಕದ ಮನೆಗೆ ರಿಧಿಮಾ (ರಿಷಿಕಾ) ಬರುತ್ತಾಳೆ. ಅವಳದು ಕೋಗಿಲೆಯ ಕಂಠ, ಅಮ್ಮನ ಸಹನೆಯ ಧ್ವನಿ. ಅವಳ ಮೋಡಿಗೆ ಮಾರು ಹೋಗುವ ಧ್ರುವ, ಅವಳನ್ನೇ ಕನಸಿನಲ್ಲಿ ನೆನಪಿಸಿಕೊಳ್ಳುತ್ತಾ ಆ ದಿನ ನೆಮ್ಮದಿಯ ನಿದ್ದೆ ಮಾಡುತ್ತಾನೆ. ಹೀಗಿರುವಾಗ ನಿದ್ದೆ ಬಾರದವರನ್ನೇ ಮುಖ್ಯವಾಗಿಟ್ಟುಕೊಂಡು ಸ್ಲೀಪಿಂಗ್ ಆ್ಯಪ್ ಅಭಿವೃದ್ದಿಪಡಿಸುತ್ತಿರುವ ವಿಕ್ರಮ್ಗೆ (ಶೈನ್ ಶೆಟ್ಟಿ) ಅಕಸ್ಮಾತ್ತಾಗಿ ರಿಧಿಮಾ ಧ್ವನಿ ಕೇಳಿಸುತ್ತದೆ. ಅವಳ ಧ್ವನಿಯನ್ನು ಸ್ಲೀಪಿಂಗ್ ಆ್ಯಪ್‌ಗೆ ಬಳಸಿಕೊಳ್ಳುತ್ತಾನೆ. ಕ್ರಮೇಣ ಆಕೆಯ ಮೇಲೆ ವಿಕ್ರಮ್ಗೆ ಮನಸ್ಸಾಗುತ್ತದೆ. ಹೀಗೆ ಧ್ರುವ, ವಿಕ್ರಮ್ ಮತ್ತು ರಿಧಿಮಾ ನಡುವೆ ತ್ರಿಕೋನ ಪ್ರೇಮ ಶುರುವಾಗುತ್ತದೆ. ಇಷ್ಟಕ್ಕೇ ಸೀಮಿತವಾಗಿದ್ದರೆ ಈ ಕಥೆ ಸಹಜವಾಗಿಬಿಡುತ್ತಿತ್ತು. ಆದರೆ, ಇಲ್ಲಿ ತ್ರಿಕೋನ ಪ್ರೇಮಕಥೆಯ ಜತೆಗೆ ನಿದ್ದೆಯ ಸುತ್ತ ಸೈಕಾಲಜಿಕಲ್ ಅಂಶಗಳಿವೆ. ಈ ಮೂವರ ಹಿನ್ನೆಲೆಯಲ್ಲಿ ಕೆಲ ಸಾಮ್ಯತೆಗಳಿದ್ದು, ಕಾಕತಾಳೀಯ ಹೊಂದಾಣಿಕೆಯಾಗಿವೆ. ಹೀಗಾಗಿ ‘ನಿದ್ರಾದೇವಿ ನೆಕ್ಸ್ಟ್‌ಡೋರ್’ ಥ್ರಿಲ್ಲಿಂಗ್ ಅನುಭವ ನೀಡುತ್ತದೆ.
ನಿರ್ದೇಶಕ ಸುರಾಗ್ ಮೊದಲ ಪ್ರಯತ್ನದಲ್ಲಿಯೇ ಗಹನ ಕಥೆಯನ್ನು ಸರಳವಾಗಿ ಹೇಳುವ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸಿಕೊಟ್ಟಿದ್ದಾರೆ. ನಿದ್ದೆಯನ್ನೇ ಆಧರಿಸಿರುವ ಕಥೆಯಲ್ಲಿ ಬಡಿದೆಬ್ಬಿಸುವ, ಸೀಟಂಚಿನಲ್ಲಿ ಕೂರಿಸುವ ಕೌತುಕ ಇದೆ. ಎಲ್ಲಿಯೂ ಬೋರ್ ಅನ್ನಿಸದೆ, ನೇರವಾಗಿ ಕಥೆ ಹೇಳಿರುವ ಕಾರಣ ಸಿನಿಮಾ ಇಷ್ಟವಾಗುತ್ತದೆ. ನಾಯಕ ಪ್ರವೀರ್ ಶೆಟ್ಟಿ ಅಭಿನಯ, ಡಾನ್ಸ್ ಮೂಲಕ ಗಮನ ಸೆಳೆಯುತ್ತಾರೆ. ನಿದ್ರಾಹೀನನೊಬ್ಬ ಹೇಗೆ ಖಿನ್ನನಾಗಿ, ಕೋಪಿಷ್ಠನಾಗಿ ಹಾಗೂ ಅಸಹಾಯಕನಾಗಿರುತ್ತಾನೆ ಎಂಬುದನ್ನು ಮುಖಭಾವದಲ್ಲಿ ತೋರಿಸಿಕೊಟ್ಟಿದ್ದಾರೆ. ಇಂಟರೆಸ್ಟಿಂಗ್ ಪಾತ್ರದಲ್ಲಿ ಶೈನ್ ಶೆಟ್ಟಿ ಮಿಂಚಿದ್ದಾರೆ. ರಿಷಿಕಾ ಕ್ಯೂಟ್ ನಟನೆ ಇಷ್ಟವಾಗುತ್ತದೆ. ಶ್ರುತಿ ಹರಿಹರನ್, ಸುಧಾರಾಣಿ, ಸಿದ್ಲಿಂಗು ಶ್ರೀಧರ್ ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಕುಲ್ ಅಭ್ಯಯಂಕರ್ ಸಂಗೀತ, ಹಿನ್ನೆಲೆ ಸಂಗೀತ ಖುಷಿ ಕೊಡುತ್ತದೆ. ಅಜಯ್ ಕುಲಕರ್ಣಿ ಛಾಯಾಗ್ರಹಣ ಸಿನಿಮಾಕ್ಕೆ ಪೂರಕವಾಗಿದೆ. ಸೈಕಲಾಜಿಕಲ್ ಥ್ರಿಲ್ಲಿಂಗ್ ಅನುಭವಕ್ಕೆ ’ನಿದ್ರಾದೇವಿ ನೆಕ್ಸ್ಟ್ ಡೋರ್’ ಉತ್ತಮ ಆಯ್ಕೆ.
ರೇಟಿಂಗ್: 3.5